ಚಾಂಗ್ವನ್: ಭಾರತದ ಯುವ ಶೂಟರ್ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಬಂಗಾರಕ್ಕೆ ಗುರಿ ಇರಿಸಿದ್ದಾರೆ. 50 ಮೀ. ರೈಫಲ್ 3 ಪೊಸಿಶನ್ಸ್‌ನಲ್ಲಿ ಅವರು ಈ ಸಾಧನೆಗೈದರು.
ಶನಿವಾರದ ಫೈನಲ್ ಹಣಾಹಣಿ ಯಲ್ಲಿ ಮಧ್ಯಪ್ರದೇಶದ 21 ವರ್ಷದ ತೋಮರ್, 2018ರ ಯೂತ್ ಒಲಿಂಪಿಕ್ಸ್ ಚಾಂಪಿಯನ್, ಹಂಗೇ ರಿಯ ಝಲಾನ್ ಪೆಕ್ಲರ್ ಅವರನ್ನು 16-12 ಅಂತರದಿಂದ ಪರಾಭವಗೊಳಿಸಿದರು.
ಹಂಗೇರಿಯವರೇ ಆದ ಇಸ್ತವಾನ್ ಕಂಚು ಗೆದ್ದರು. ಕಣದಲ್ಲಿದ್ದ ಭಾರತದ ಮತ್ತೋರ್ವ ಸ್ಪರ್ಧಿ ಚೈನ್ ಸಿಂಗ್ 7ನೇ ಸ್ಥಾನಿಯಾದರು.
ಹಾಲಿ ಜೂನಿಯರ್ ವಿಶ್ವ ಚಾಂಪಿಯನ್ ಕೂಡ ಆಗಿರುವ ತೋಮರ್ ಅರ್ಹತಾ ಸುತ್ತಿನಲ್ಲೂ 593 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದರು. ಇದು ಅವರ 2ನೇ ಶೂಟಿಂಗ್ ವಿಶ್ವಕಪ್ ಚಿನ್ನ. ಕಳೆದ ವರ್ಷ ಹೊಸದಿಲ್ಲಿ ಕೂಟದಲ್ಲೂ ಸ್ವರ್ಣ ಸಾಧನೆಗೈದಿದ್ದರು. ಇದು ಚಾಂಗ್ವನ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಒಲಿದ 4ನೇ ಚಿನ್ನದ ಪದಕ. ಒಟ್ಟು 9 ಪದಕಗಳೊಂದಿಗೆ ಅಗ್ರಸ್ಥಾನವನ್ನು ಗಟ್ಟಿಗೊಳಿಸಿದೆ (4 ಚಿನ್ನ, 4 ಬೆಳ್ಳಿ, 1 ಕಂಚು).
ಮನು ಬಾಕರ್‌ಗೆ ಆಘಾತ
ಪದಕದ ಭಾರೀ ಭರವಸೆ ಮೂಡಿಸಿದ್ದ ಮನು ಬಾಕರ್ ಆಘಾತಕಾರಿ ಸೋಲುಂಡ ವಿದ್ಯಮಾನಕ್ಕೂ ಶನಿವಾರದ ಸ್ಪರ್ಧೆ ಸಾಕ್ಷಿಯಾಯಿತು. ವನಿತೆ ಯರ 25 ಮೀ. ಪಿಸ್ತೂಲ್ ಫೈನಲ್‌ನಲ್ಲಿ, 2019ರ ವಿಶ್ವಕಪ್ ಚಾಂಪಿಯನ್ ಮನು ಬಾಕರ್ 4ನೇ ಸ್ಥಾನಕ್ಕೆ ಕುಸಿದರು.
ರವಿವಾರ ನಡೆಯುವ ವನಿತೆಯರ 50 ಮೀ. ರೈಫಲ್ 3 ಪೊಸಿಶನ್ಸ್ ಫೈನಲ್‌ನಲ್ಲಿ ಅಂಜುಮ್ ಮೌದ್ಗಿಲ್ ಸ್ಪರ್ಧಿಸಲಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.