ಕೈರೋ (ಈಜಿಪ್ಟ್): ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಭಾರತಕ್ಕೆ ಮತ್ತೂಂದು ಚಿನ್ನದ ಪದಕ ಒಲಿದಿದೆ. ಒಲಿಂಪಿಯನ್ ಶೂಟರ್ ಐಶ್ವರಿ ಪ್ರತಾಪ್ ಸಿಂಗ್ ತೋಮರ್ 50 ಮೀ. ರೈಫಲ್ 3 ಪೊಸಿಶನ್‌ನಲ್ಲಿ ಬುಧವಾರ ಸ್ವರ್ಣಕ್ಕೆ ಗುರಿ ಇರಿಸಿದರು.
ಇದು ಭಾರತಕ್ಕೆ ಒಲಿದ 6ನೇ ಪದಕ. ಇದರಲ್ಲಿ 4 ಚಿನ್ನಗಳು ಸೇರಿವೆ. ಈ ಸಾಧನೆಯೊಂದಿಗೆ ಭಾರತ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
22 ವರ್ಷದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಫೈನಲ್‌ನಲ್ಲಿ ಆಸ್ಟ್ರೇಲಿಯದ ಅಲೆಕ್ಸಾಂಡರ್ ಶ್ಮಿರ್ಲ್ ಅವರನ್ನು 16-6 ಅಂತರದಿಂದ ಮಣಿಸಿದರು.
ರ್‍ಯಾಂಕಿಂಗ್ ರೌಂಡ್‌ನಲ್ಲಿ ತೋಮರ್ 406.4 ಅಂಕಗಳೊಂದಿಗೆ ದ್ವಿತೀಯ ಸ್ಥಾನಿ ಯಾಗಿದ್ದರು. ಆಗ ಶ್ಮಿರ್ಲ್ ಅಗ್ರ ಸ್ಥಾನ ದಲ್ಲಿದ್ದರು (407.9). ಅರ್ಹತಾ ಸುತ್ತಿ ನಲ್ಲಿ ತೋಮರ್ 588 ಅಂಕ ಪಡೆದು ಅಗ್ರಸ್ಥಾನ ಪಡೆದಿದ್ದರು. ಅದು 3 ವಿಭಾಗಗಳ ಸ್ಪರ್ಧೆ ಆಗಿತ್ತು. ಭಾರತದ ಮತ್ತೋರ್ವ ಶೂಟರ್ ಅಖೀಲ್ ಶೋರನ್ ದ್ವಿತೀಯ ಸ್ಥಾನಿಯಾಗಿದ್ದರು (587). ಕಳೆದ ವರ್ಷ ಚಾಂಗನ್ ವಿಶ್ವಕಪ್‌ನಲ್ಲೂ ತೋಮರ್ ಬಂಗಾರದ ಪದಕ ಜಯಿಸಿದ್ದರು.
ದಿನದ ಮೊದಲ ಪದಕ ಸ್ಪರ್ಧೆಯಾದ, ವನಿತೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ರಿದಂ ರ್‍ಯಾಂಕಿಂಗ್ ಸುತ್ತಿಗೆ ಅರ್ಹತೆ ಪಡೆದರೂ ಫೈನಲ್-4 ತಲುಪಲು ವಿಫಲರಾದರು. ಇಲ್ಲಿ ಹಂಗೇರಿಯ ವೆರೋನಿಕಾ ಮೇಜರ್ ಬಂಗಾರ ಗೆದ್ದರು. ಭಾರತದ ಮನು ಭಾಕರ್ 32ನೇ, ಇಶಾ ಸಿಂಗ್ 34ನೇ ಸ್ಥಾನಕ್ಕೆ ಕುಸಿದರು.