ವಿಜಯಪುರ: ಮದಭಾವಿ ಬಳಿ ಉದ್ದೇಶಿತ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಮೊದಲ ಹಂತದಲ್ಲಿ ಕಾಮಗಾರಿಗೆ ಟೆಂಡರ್ ನಿಗದಿಯಾಗಿದೆ. ಅತಿ ಶೀಘ್ರವೇ ವಿಮಾನ ನಿಲ್ದಾಣ ಕಾಮಗಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಭೂಮಿಪೂಜೆ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಆಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯಿಂದ ಯೋಜನೆಯನ್ನು ನಿರ್ವಹಿಸಲು ಉದ್ದೇಶಿಸಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಡಿಸಿಎಂ ಗೋವಿಂದ ಕಾರಜೋಳ ಅವರು ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರಂತರ ಮಾಹಿತಿ ಪಡೆಯುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ, ನದಿಗಳ ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪದಿಂದ ಕಳೆದ ಏಪ್ರಿಲ್‌ನಿಂದ ಈವರೆಗೆ 14 ಜೀವ ಹಾನಿಯಾಗಿದ್ದು, ಎಲ್ಲ ಪ್ರಕರಣಗಳಲ್ಲೂ ಬಾ ಧಿತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ವಿತರಿಸಿದ್ದೇವೆ. ಇದಲ್ಲದೇ ಜಾನುವಾರು ಹಾನಿಗೆ ಹಾಗೂ ಮನೆ ಹಾನಿಗೆ ಸಂಬಂಧಪಟ್ಟಂತೆ ಪರಿಹಾರ ವಿತರಿಸಲಾಗಿದೆ.
ಇದನ್ನೂ ಓದಿ:ಲಸಿಕೆ ಸಂಗ್ರಹಕ್ಕೆ ಸಂಪೂರ್ಣ ಸಿದ್ದತೆ : ಮೊದಲ ಹಂತದಲ್ಲಿ 13.90 ಲಕ್ಷ ಡೋಸ್ ಲಸಿಕೆ
ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯಲ್ಲಿ 2 ಲಕ್ಷ ಹೆಕ್ಟೇರ್ ಗೂ ಮೀರಿ ಕೃಷಿ ಬೆಳೆ ಹಾನಿಯಾಗಿದ್ದರೆ, 159 ಕೋಟಿ ರೂ. ನಷ್ಟ ಸಂಭವಿಸಿದೆ. 15,564 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆಯ ವಿವಿಧ ಬೆಳೆ ಹಾನಿಯಾಗಿದ್ದು, 19.44 ಕೋಟಿ ರೂ. ನಷ್ಟವಾಗಿದೆ. ಕೃಷಿ-ತೋಟಗಾರಿಕೆ ಎರಡೂ ಬೆಳೆ ಸೇರಿದಂತೆ ಜಿಲ್ಲೆಯಲ್ಲಿ 2.23 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು 178.46 ಕೋಟಿ ರೂ. ನಷ್ಟವಾಗಿದೆ. ಬೆಳೆ ಹಾನಿಯಾದ ರೈತರಿಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ 165 ಖರೀದಿ ಕೇಂದ್ರ ತೆರೆಯಲಾಗಿದ್ದು ಈಗಾಗಲೇ 66,332 ರೈತರು ಹೆಸರು ನೋಂದಾಯಿಸಿದ್ದಾರೆ. ಇದಲ್ಲದೇ ಖರೀದಿ ಕೇಂದ್ರದಲ್ಲಿ ವಿದ್ಯುತ್, ಕಂಪ್ಯೂಟರ್ ಸೇರಿದಂತೆ ಮೂಲಭೂತ ಸೌಲಭ್ಯ ಇರುವಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಿಲ್ಲೆಯಲ್ಲಿ 12 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ನಿರ್ಧರಿಸಿದ್ದು 8.49 ಲಕ್ಷ ಗೋಣಿ ಚೀಲ ಸಂಗ್ರಹ ಇದ್ದು, ಇನ್ನೂ 8 ಲಕ್ಷ ಗೋಣಿ ಚೀಲಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.