ಪೋರ್ಟ್ ಬ್ಲೇರ್ : ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ನಿರಂತರ ಜಡಿಮಳೆ ಸುರಿಯುತ್ತಿರುವ ಪರಿಣಾಮವಾಗಿ ಇಲ್ಲಿನ ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣವಾಗಿ ನೀರಿನಿಂದ ತುಂಬಿಕೊಂಡಿದೆ.
ಪ್ರಯಾಣಿಕರ ಬ್ಯಾಗೇಜ್‌ಗಳನ್ನು ತಪಾಸಿಸುವ ಮತ್ತು ಅವುಗಳನ್ನು ಮರಳಿ ಪಡೆಯುವ ತಾಣಗಳಲ್ಲಿ ಮೊಣಕಾಲ ವರೆಗೆ ನೀರು ತುಂಬಿದ್ದು ಪ್ರಯಾಣಿಕರ ನಿರ್ವಹಣೆಗೆ ಸವಾಲಾಗಿದೆ.
ಅಂಡಮಾನ್ ಕ್ರಾನಿಕಲ್ ವರದಿಯ ಪ್ರಕಾರ ಮಂಗಳವಾರ ಸಂಜೆಯಿಂದೀಚೆಗೆ ಕನಿಷ್ಠ 9 ವಿಮಾನಗಳ ಹಾರಾಟ ವಿಳಂಬವಾಗಿದೆ. ಇವುಗಳಲ್ಲಿ ಏರಿಂಡಿಯದ ನಾಲ್ಕು, ಇಂಡಿಗೋ ದ ಮೂರು ಮತ್ತು ಗೋ ಏರ್ ನ ಎರಡು ವಿಮಾನಗಳ ಹಾರಾಟ ಸೇರಿವೆ.
ಇಂದು ಬುಧವಾರ ಮಧ್ಯಾಹ್ನದ ಹೊತ್ತಿಗೆ ವಿಮಾನಗಳ ಅವರೋಹಣ (ಲ್ಯಾಂಡಿಂಗ್) ಪುನರಾರಂಭಗೊಂಡಿದೆ. ಹಾಗಿದ್ದರೂ ವಿಮಾನ ನಿಲ್ದಾಣದ ಅಧಿಕಾರಿಗಳು ಈಗಲೂ ನಿಲ್ದಾಣದಲ್ಲಿ ತುಂಬಿರುವ ನೀರನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ಅಂತೆಯೇ ವಿಮಾನ ಅವರೋಹಣ ಪಟ್ಟಿಯಲ್ಲಿ ಎಲ್ಲಿಯೂ ನೀರು ನಿಂತಿಲ್ಲದಿರುವುದನ್ನು ಖಾತರಿ ಪಡಿಸಿಕೊಳ್ಳುತ್ತಿದ್ದಾರೆ.
ಎರಡು ದಿನಗಳ ಹಿಂದೆ ಬಂಗಾಲ ಕೊಲ್ಲಿಯ ಮಧ್ಯಪೂರ್ವ ಭಾಗದಲ್ಲಿ ವಾಯು ನಿಮ್ನತೆ ಒತ್ತಡ ಉಂಟಾಗಿದ್ದುದರ ಪರಿಣಾಮವಾಗಿ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಜಡಿಮಳೆಯಾಗುತ್ತಿದೆ ಎಂದು ಹವಾಮಾನ ವೀಕ್ಷಕರು ತಿಳಿಸಿದ್ದಾರೆ.
ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಇನ್ನೂ ಒಂದು ದಿನ ಭಾರೀ ಮಳೆಯಾಗಲಿದೆಯಾದರೂ ಕ್ರಮೇಣ ಅದರ ತೀವ್ರತೆ ಕಡಿಮೆಯಾಗಲಿದೆ ಎಂದು ವೀಕ್ಷಕರು ಹೇಳಿದ್ದಾರೆ.