Advertisement

ಏರ್‌ಪೋರ್ಟ್‌ ಸುಧಾರಣೆ: ಸಮಾಲೋಚನೆ

09:32 AM Dec 11, 2018 | |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಚ್ಚುವರಿ ವಿಮಾನ ಹಾರಾಟ, ಹೊಸ ಸಂಪರ್ಕ ರಸ್ತೆ ನಿರ್ಮಾಣ ಸಹಿತ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳ ಕುರಿತು ಸಂಸದ ನಳಿನ್‌ ಕುಮಾರ್‌ ಮಂಗಳವಾರ ಕೇಂದ್ರ ವಿಮಾನಯಾನ ಸಚಿವ ಸುರೇಶ್‌ ಪ್ರಭು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ.
ಸಚಿವರು ಡಿ. 11ರಂದು ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಸಂಸದರು ಹಾಗೂ ನಿಲ್ದಾಣದ ಅಧಿಕಾರಿಗಳ ಜತೆಗೆ ಸಭೆ ನಡೆಸುವ ಸಾಧ್ಯತೆಯಿದೆ.

Advertisement

ಅಭಿಯಾನಕ್ಕೆ ಸ್ಪಂದನೆ
ಮಂಗಳೂರು ಏರ್‌ಪೋರ್ಟ್‌ ಮೂಲ ಸೌಕರ್ಯ ಹಾಗೂ ಪ್ರಯಾಣಿಕ ಸ್ನೇಹಿ ಸವಲತ್ತುಗಳನ್ನು ಉತ್ತಮಪಡಿಸಿ ಹೊಸ ಮಾರ್ಗಗಳಲ್ಲಿ ಸೇವೆ ಪ್ರಾರಂಭಿಸುವ ಕುರಿತು “ಉದಯವಾಣಿ’ಯು “ಮಂಗಳೂರು ಏರ್‌ಪೋರ್ಟ್‌ ಸಾಧ್ಯತೆ-ಸವಾಲು’ ಅಭಿಯಾನ ನಡೆಸಿತ್ತು. ಇದಕ್ಕೆ ಸ್ಪಂದಿಸಿರುವ ಸಂಸದ ನಳಿನ್‌, ಸಚಿವರನ್ನು ಭೇಟಿ ಮಾಡಿ ಮಂಗಳೂರು ಏರ್‌ಪೋರ್ಟ್‌ ಪ್ರಗತಿಗೆ ಪೂರಕ ಬೇಡಿಕೆ ಈಡೇರಿಸುವಂತೆ ಮನವಿ ಮಾಡಲಿದ್ದಾರೆ.

ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ನಳಿನ್‌ , ಸಚಿವರ ಜತೆ ನಮ್ಮ ಏರ್‌ಪೋರ್ಟ್‌ಗೆ ಸಂಬಂಧಿಸಿದ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಕೆನರಾ ಚೇಂಬರ್‌ ಆಫ್‌ ಕಾಮರ್ಸ್‌ ನಿಯೋಗವು ಶನಿವಾರ ನನ್ನನ್ನು ಭೇಟಿ ಮಾಡಿ ನಿಲ್ದಾಣ ಅಭಿವೃದ್ಧಿ ಸಂಬಂಧ ವಿವಿಧ ಬೇಡಿಕೆಗಳಿಗೆ ಸ್ಪಂದಿಸುವಂತೆ ಮನವಿ ನೀಡಿದೆ. ನಿಲ್ದಾಣದ ಸುಧಾರಣೆ ಕ್ರಮಗಳ ಬಗ್ಗೆ ನಮ್ಮ ಕಡೆಯಿಂದಲೂ ಮನವಿ ಸಿದ್ಧಪಡಿಸಿದ್ದು, ಸಚಿವರಿಗೆ ಮನವರಿಕೆ ಮಾಡಲಾಗುವುದು. ಮಂಗಳೂರು -ಅಬುಧಾಬಿ ಏರ್‌ ಇಂಡಿಯಾ ವಿಮಾನ ಸಮಯ ಬದಲಾವಣೆ, ಹೊಸ ಮಾರ್ಗಗಳಲ್ಲಿ ಸೇವೆ ಆರಂಭ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿರುವ ಕಾರಣ, ಅವನ್ನು ಶೀಘ್ರ ಕಾರ್ಯರೂಪಕ್ಕೆ ತರುವಂತೆ ಒತ್ತಾಯಿ ಸಲಾಗುವುದು. ಕೆಂಜಾರು ರೈಲು ನಿಲ್ದಾಣದಿಂದ ಮಳವೂರಿಗೆ 2 ಕಿ.ಮೀ. ಹೊಸ ರಸ್ತೆ ನಿರ್ಮಿಸಿ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಬಗ್ಗೆಯೂ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಕೆನರಾ ಚೇಂಬರ್ ನಿಯೋಗ ಭೇಟಿ
ಇನ್ನೊಂದೆಡೆ, ಕೆನರಾ ಚೇಂಬರ್ ಆಫ್‌ ಕಾಮರ್ಸ್‌ ನಿಯೋಗವು ಕಾಸರಗೋಡಿನ ಬೇಕಲದಲ್ಲಿ ಸೋಮ ವಾರ ಸಚಿವ ಸುರೇಶ್‌ ಪ್ರಭು ಅವರನ್ನು ಭೇಟಿ ಮಾಡಿದೆ. ಮಲಬಾರ್‌ ಚೇಂಬರ್‌ ಆಫ್‌ ಕಾಮರ್ಸ್‌ ಸಭೆ ಸಂದರ್ಭ ಸಚಿವರನ್ನು ಭೇಟಿ ಮಾಡಿ ರನ್‌ವೇ ವಿಸ್ತರಣೆ, “ಪ್ರಿಸಿಷನ್‌ ಅಪ್ರೋಚ್‌ ಲೈಟ್ಸ್‌’ ಅಳವಡಿಕೆ ಹಾಗೂ ಹೊಸ ಮಾರ್ಗಗಳಲ್ಲಿ ಯಾನ ಪ್ರಾರಂಭಿಸು ವಂತೆ ಮನವಿ ಮಾಡಲಾಗಿದೆ. ಏರ್‌ಪೋರ್ಟ್‌ ಖಾಸಗೀಕರಣ ವಿಚಾರದಲ್ಲೂ ಸ್ಪಷ್ಟತೆ ಹಾಗೂ ಪಾರದರ್ಶಕತೆಗೆ ಕೋರಲಾಗಿದ್ದು, ಸಚಿವರು ನಮ್ಮ ಎಲ್ಲ ಬೇಡಿಕೆಗಳಿಗೂ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಕೆನರಾ ಚೇಂಬರ್‌ ಆಫ್‌ ಕಾಮರ್ಸ್‌ನ ಅಧ್ಯಕ್ಷ ಪಿ.ಬಿ. ಅಬ್ದುಲ್‌ ಹಮೀದ್‌ ಹೇಳಿದ್ದಾರೆ.

ಖಾಸಗೀಕರಣ ವಿರೋಧಿಸಿ ಉಪವಾಸ 


ಮಂಗಳೂರು: ಮಂಗಳೂರು ಸಹಿತ ದೇಶದ 6 ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡುವ ಕೇಂದ್ರ ಸರಕಾರದ ನಿಲುವನ್ನು ಪ್ರತಿಭಟಿಸಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಮಿಕರ ಸಂಘ (ಎಎಇಯು) ಮತ್ತು ಇತರ ಸಂಘಟನೆಗಳ ಕಾರ್ಯಕರ್ತರು ಸೋಮವಾರ 3 ದಿನಗಳ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. 

Advertisement

ಎಎಇಯು ಮಂಗಳೂರು ಶಾಖೆಯ ಅಧ್ಯಕ್ಷ ಅರವಿಂದ ಗಾಂವ್‌ಕರ್‌ ಮತ್ತು ಕಾರ್ಯದರ್ಶಿ ಶ್ರಾವಣ್‌ ಕುಮಾರ್‌ ಅವರ ಭಾಷಣದೊಂದಿಗೆ ಉಪವಾಸ ಸತ್ಯಾಗ್ರಹ ಉದ್ಘಾಟನೆಗೊಂಡಿತು. ಕಾಸರಗೋಡು ಸಂಸದ ಪಿ. ಕರುಣಾಕರನ್‌ ಅವರು ಸತ್ಯಾಗ್ರಹ ನಿರತರನ್ನು ಭೇಟಿ ಮಾಡಿ ಖಾಸಗೀಕರಣ ವಿರುದ್ಧ ಸಂಸತ್ತಿನಲ್ಲಿ ಪ್ರಸ್ತಾವಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next