ಬೆಂಗಳೂರು: ವಿದೇಶಗಳಿಗೆ ರಾಜ್ಯದಿಂದ ನೇರವಾಗಿ ಹಣ್ಣು, ತರಕಾರಿ ರಫ್ತಿಗೆ ಕಾರ್ಗೋ ವಿಮಾನಯಾನ ಸೇವೆ ಒದಗಿಸಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹಾಗೂ ಸ್ಪೈಸ್ ಜೆಟ್ ಆಸಕ್ತಿ ತೋರಿವೆ. ಎಲ್ಲವೂ ಅಂದುಕೊಂಡಂತೇ ಆದರೆ ಮಂಗಳೂರು ಮತ್ತು ಬೆಂಗಳೂರು ಅಂ.ರಾ. ವಿಮಾನ ನಿಲ್ದಾಣಗಳಿಂದ ಹಣ್ಣು-ತರಕಾರಿ ವಿದೇಶಕ್ಕೆ ರಫ್ತಾಗಲಿವೆ.
ಸದ್ಯ ವಿದೇಶಿ ವಿಮಾನಯಾನ ಸಂಸ್ಥೆಗಳು ಕಾರ್ಗೋ ಸೇವೆ ಮುಂದುವರಿಸಿದ್ದು ಅವು ವಿಧಿಸುತ್ತಿರುವ ದರ ದುಬಾರಿಯಾದ ಕಾರಣ ವ್ಯವಹಾರ ನಡೆಸಲು ರಫ್ತುದಾರರು ಹಿಂದೇಟು ಹಾಕುವಂತಾಗಿದೆ. ದೇಶೀಯ ವಿಮಾನಯಾನ ಸಂಸ್ಥೆಗಳು ಕೇಳಿದ ದರ ಪಾವತಿಸಲು ಮುಂದಾದರೆ ಶೀಘ್ರ ಕಾರ್ಗೋ ಸೇವೆಗೆ ಚಾಲನೆ ಸಿಗುವ ನಿರೀಕ್ಷೆ ಮೂಡಿದೆ.
ಲಾಕ್‌ಡೌನ್ ಬಳಿಕ ವಿದೇಶಿ ಸಂಸ್ಥೆಗಳು ಮಾತ್ರ ಕಾರ್ಗೋ ಸೇವೆ ನೀಡುತ್ತಿದ್ದು ಎರಡು- ಮೂರು ಪಟ್ಟು ಹೆಚ್ಚಿನ ದರ ಸಂಗ್ರಹಿಸುತ್ತಿವೆ. ರಾಜ್ಯದ ಬೆಳೆಗಾರರು, ರೈತರು ತಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆಗೆ ರಫ್ತು ಮಾಡುವಂತಾಗಲಿ ಎಂಬ ಉದ್ದೇಶದಿಂದ ಕೃಷಿ, ತೋಟಗಾರಿಕೆ ಇಲಾಖೆಯು ರಾಜ್ಯದ ಪ್ರಮುಖ ರಫ್ತುದಾರರೊಂದಿಗೆ ಇತ್ತೀಚೆಗೆ ಸಭೆ ನಡೆಸಿತ್ತು. ಈ ವೇಳೆ ವಿದೇಶಿ ವಿಮಾನಯಾನ ಸಂಸ್ಥೆಗಳು ಪ್ರತಿ ಕೆ.ಜಿ.ಗೆ 250 ರೂ.ನಿಂದ 350 ರೂ. ದರ ವಿಧಿಸುತ್ತಿವೆ ದೇಶೀಯ ವಿಮಾನಯಾನ ಸಂಸ್ಥೆಗಳು ಸಾಮಾನ್ಯ ದರದಲ್ಲಿ ಸೇವೆ ಒದಗಿಸಿದರೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಅದರಂತೆ ಮುಖ್ಯ ಕಾರ್ಯದರ್ಶಿಗಳು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಎರಡು ಸಂಸ್ಥೆಗಳು ಸ್ಪಂದಿಸಿವೆ. ಸ್ಪೈಸ್ ಜೆಟ್ ಕೆಂಪೇಗೌಡ ಅಂ.ರಾ. ವಿಮಾನನಿಲ್ದಾಣದಿಂದ ಹಾಗೂ ಏರ್‌ಇಂಡಿಯಾ ಕೆಂಪೇಗೌಡ ಹಾಗೂ ಮಂಗಳೂರು ವಿಮಾನ ನಿಲ್ದಾಣದಿಂದ ಸೇವೆ ನೀಡಲು ಉತ್ಸಾಹ ತೋರಿವೆ.
ದರ ಶೇ. 10ರಷ್ಟು ಹೆಚ್ಚು
ಈ ಹಿಂದೆ ಹಣ್ಣು, ತರಕಾರಿ ಇತರೆ ಅಗತ್ಯ ವಸ್ತುಗಳ ರಫ್ತಿಗೆ ದೇಶೀಯ ವಿಮಾನಯಾನ ಸಂಸ್ಥೆಗಳು ಪ್ರತಿ ಕೆ.ಜಿ.ಗೆ 110 ರೂ.ನಿಂದ 130 ರೂ.ವರೆಗೆ ದರ ವಿಧಿಸುತ್ತಿದ್ದವು. ಇದೀಗ ಆ ದರ ಕೆ.ಜಿ.ಗೆ 140 ರೂ.ನಿಂದ 150 ರೂ.ವರೆಗೆ ಇದೆ. ಸಂಸ್ಥೆಗಳು ದರ ವಿವರ ನೀಡಿದ್ದು, ಅದನ್ನು ಸರ್ಕಾರ ರಾಜ್ಯದ ರಫ್ತುದಾರರಿಗೆ ರವಾನಿಸಿದೆ. ರಫ್ತುದಾರರು-ಆಮದುದಾರರು ಒಪ್ಪಿದರೆ ರಫ್ತು ಶುರುವಾಗಲಿದೆ.