Advertisement

ಏರೋ ಇಂಡಿಯಾಕ್ಕೆ ಸೂರ್ಯ ಗ್ರಹಣ 

12:30 AM Feb 20, 2019 | Team Udayavani |

ಬೆಂಗಳೂರು: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ ಶೋ-2019’ಕ್ಕೆ ಒಂದು ದಿನ ಬಾಕಿ ಇರುವಾಗಲೇ ಪ್ರದರ್ಶನದ ಪ್ರಮುಖ ಆಕರ್ಷಣೆಗಳಲ್ಲೊಂದಾದ “ಸೂರ್ಯಕಿರಣ’ ಏರೋಬಾಟಿಕ್‌ ತಂಡದ ಎರಡು ಯುದ್ಧವಿಮಾನಗಳು ತಾಲೀಮು ನಡೆಸುವ ವೇಳೆ ಪರಸ್ಪರ ಢಿಕ್ಕಿ ಹೊಡೆದು ಧರೆಗುರುಳಿದ ಘಟನೆ ಮಂಗಳವಾರ ಯಲಹಂಕ ವಾಯುನೆಲೆ ಸಮೀಪ ನಡೆದಿದೆ. ಪರಿಣಾಮ ಓರ್ವ ಪೈಲಟ್‌ ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ವಿಂಗ್‌ ಕಮಾಂಡರ್‌ ಸಾಹಿಲ್‌ ಗಾಂಧಿ ಘಟನೆಯಲ್ಲಿ ಮೃತಪಟ್ಟಿದ್ದು, ವಿಂಗ್‌ ಕಮಾಂಡರ್‌ ವಿ.ಟಿ. ಶೆಳ್ಕೆ ಮತ್ತು ಸ್ಕ್ವಾಡ್ರನ್‌ ಲೀಡರ್‌ ಟಿ.ಜೆ. ಸಿಂಗ್‌ ಗಾಯಗೊಂಡಿದ್ದಾರೆ. 

Advertisement

ಮಿರರ್‌ ಇಮೇಜ್‌ ಕಸರತ್ತು

ಬೆಳಗ್ಗೆ  ವಾಯುನೆಲೆಯಿಂದ ಎಂದಿನಂತೆ ಆಗಸಕ್ಕೆ ಚಿಮ್ಮಿದ ಒಂಬತ್ತು ವಿಮಾನಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸುತ್ತಿದ್ದವು. 11.15ರ ಸುಮಾರಿಗೆ ಮಿರರ್‌ ಇಮೇಜ್‌ ರೀತಿ ಕಸರತ್ತು ನಡೆಸುವಾಗ ಎರಡು ವಿಮಾನಗಳ ರೆಕ್ಕೆಗಳು ಆಕಸ್ಮಿಕವಾಗಿ ತಗುಲಿವೆ. ಇದರ ರಭಸಕ್ಕೆ ರೆಕ್ಕೆಗಳು ತುಂಡಾಗಿ ಕೆಳಗೆ ಬಿದ್ದಿದ್ದು, ಎರಡೂ ವಿಮಾನಗಳು ಹತ್ತಿರದ ಇಸ್ರೋ ಲೇಔಟ್‌ನ ಖಾಲಿ ಜಾಗಕ್ಕೆ ಅಪ್ಪಳಿಸಿವೆ. ಇದರ ರಭಸಕ್ಕೆ ವಿಮಾನದ ಅವಶೇಷಗಳು ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ವಾಯುನೆಲೆಯಿಂದ ಐದು ಕಿ.ಮೀ. ದೂರದಲ್ಲಿ ಹಾರಾಟ ನಡೆಸುವಾಗ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. 

ಏರ್‌ ಶೋದಲ್ಲಿ  ಮೊದಲ ಅವಘಡ
ವೈಮಾನಿಕ ಪ್ರದರ್ಶನದ ವೇಳೆ ದೇಶೀಯ ತಂಡದ ವಿಮಾನ ಪತನ ಹಾಗೂ ಅದರಲ್ಲಿ ಸಾವು ಸಂಭವಿಸಿದ ಮೊದಲ ಘಟನೆ ಇದಾಗಿದೆ. 2015ರಲ್ಲಿ “ರೆಡ್‌ಬುಲ್‌’ ಏರೋಬಾಟಿಕ್‌ ತಂಡದ ವಿಮಾನಗಳ ರೆಕ್ಕೆಗಳು ಪರಸ್ಪರ ತಗಲಿದ್ದವು. ಆದರೆ ಯಾವುದೇ ಅನಾಹುತ ಸಂಭವಿಸಿರಲಿಲ್ಲ. 

Advertisement

ಸೂರ್ಯ ಕಿರಣ ಪ್ರದರ್ಶನ ಇಲ್ಲ
ಅವಘಡದ ಹಿನ್ನೆಲೆಯಲ್ಲಿ ಮೊದಲ ದಿನದ ಸೂರ್ಯಕಿರಣ ಪ್ರದರ್ಶನ ರದ್ದು ಮಾಡಲಾಗಿದೆ. ಉಳಿದ ನಾಲ್ಕು ದಿನವೂ ಅನುಮಾನ ಎಂದು ಏರ್‌ ಮಾರ್ಷಲ್‌ ರಾಕೇಶ್‌ ಕುಮಾರ್‌ ಸಿಂಗ್‌ ಬಡೋರಿಯಾ ಹೇಳಿದ್ದಾರೆ.

ಪ್ಯಾರಾಚೂಟ್‌ನಿಂದ ಹಾರಿದರು
“ಸೂರ್ಯ ಕಿರಣ’ದ ಎರಡು ವಿಮಾನಗಳು ದುರಂತಕ್ಕೀಡಾಗುತ್ತಿದ್ದಂತೆ ಅದರಲ್ಲಿದ್ದ ವಿಂಗ್‌ ಕಮಾಂಡರ್‌ ಹಾಗೂ ಸ್ಕ್ವಾಡ್ರನ್‌ ಲೀಡರ್‌ ಸೇರಿ ಮೂವರೂ ಪ್ಯಾರಾಚೂಟ್‌ ಮೂಲಕ ಹೊರಕ್ಕೆ ಹಾರಿದ್ದಾರೆ. ಆದರೆ, ಆ ಪೈಕಿ ಒಂದು ಪ್ಯಾರಾಚೂಟ್‌ ತೆರೆದುಕೊಳ್ಳಲೇ ಇಲ್ಲ. ಸಾಹಿಲ್‌ ಗಾಂಧಿ ಅವರ ಪ್ಯಾರಚೂಟ್‌ ತೆರೆದುಕೊಳ್ಳದಿರುವುದರಿಂದ ನೆಲಕ್ಕೆ ಬಿದ್ದು ತೀವ್ರ ಗಾಯಗೊಂಡು, ಸಾವನ್ನಪ್ಪಿದರು. ಉಳಿದಿಬ್ಬರ ಪ್ಯಾರಚೂಟ್‌ಗಳು ತೆರೆದುಕೊಂಡಿದ್ದರಿಂದ ಅದೃಷ್ಟವಶಾತ್‌ ಬದುಕುಳಿದರು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next