ಹೊಸದಿಲ್ಲಿ: ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಮತ್ತು ಪುತ್ರ ಕಾರ್ತಿ ಚಿದಂಬರಂಗೆ ನ.26ರವರೆಗೆ ಬಂಧನದಿಂದ ರಕ್ಷಣೆ ಸಿಕ್ಕಿದೆ. ಚಿದು ಅವರನ್ನು ತಮ್ಮ ವಶಕ್ಕೆ ಪಡೆದು ತನಿಖೆ ನಡೆಸಬೇಕಾಗಿದೆ ಎಂದು ಜಾರಿ ನಿರ್ದೇಶನಾಲಯವು ದಿಲ್ಲಿ ಕೋರ್ಟ್‌ಗೆ ಕೋರಿಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ವಕೀಲರಾದ ಕಪಿಲ್ ಸಿಬಲ್ ಹಾಗೂ ಸಿಂಘ್ವಿ ಅವರು ಗುರುವಾರ, ಚಿದು ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿ ವಾದಿಸುವುದಾಗಿಯೂ, ಇ.ಡಿ.ಗೆ ಪ್ರತಿಕ್ರಿಯೆ ನೀಡುವುದಾಗಿಯೂ ಹೇಳಿದ್ದು, ಈ ಹಿನ್ನೆಲೆಯಲ್ಲಿ ಕೋರ್ಟ್ ನ.26ರವರೆಗೆ ಚಿದುಗೆ ಬಂಧನದಿಂದ ರಕ್ಷಣೆ ನೀಡಿದೆ. ಇದೇ ವೇಳೆ, ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಕಾರ್ತಿ ಸಲ್ಲಿಸಿದ್ದ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದು ತ್ವರಿತ ವಿಚಾರಣೆಗೆ ಅರ್ಹವಾದ ಅರ್ಜಿಯೇನೂ ಅಲ್ಲ ಎಂದಿದೆ ಕೋರ್ಟ್.