ಮೈಸೂರು: ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಅ.2ರಂದು ಬನ್ನಿಮಂಟಪ ಮೈದಾನದಲ್ಲಿ ಭಾರತೀಯ ವಾಯುಸೇನೆಯಿಂದ ಏರ್ ಶೋ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ಮೊದಲ ವಾರದಲ್ಲೇ ಭಾರತೀಯ ವಾಯುಸೇನೆ ಸಪ್ತಾಹ ಇರುವುದರಿಂದ ಈ ಬಾರಿ ಮೈಸೂರಿನಲ್ಲಿ ಏರ್‌ಶೋ ಕೈತಪ್ಪುವ ಸಾಧ್ಯತೆ ಇತ್ತು. ಸರ್ಕಾರದ ಮಟ್ಟದಲ್ಲಿ ಬಹಳ ಪ್ರಯತ್ನ ಮಾಡಿದ್ದರಿಂದ ಏರ್ ಶೋ ಆಯೋಜನೆ ಸಾಧ್ಯವಾಗಿದೆ ಎಂದರು.
ಏರ್ ಶೋ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಭಾರತೀಯ ವಾಯುಸೇನೆಯ ತಂಡ ಪೂರ್ವ ತಾಲೀಮು ನಡೆಸಿದೆ. ಅ.2ರಂದು ಬೆಳಗ್ಗೆ 11.30ಕ್ಕೆ ಏರ್ ಶೋ ಆರಂಭವಾಗಲಿದ್ದು, 40 ರಿಂದ 45 ನಿಮಿಷಗಳ ಕಾಲ ಏರ್ ಶೋನಲ್ಲಿ ಫ್ಲವರ್ ಪೆಟಲ್ ಡ್ರಾಪ್, ಸ್ಲಿಥೆರಿಂಗ್ ಮತ್ತು ಏರ್ ಡ್ರಾಪ್, ಸ್ಕೈಡೈವಿಂಗ್ ಪ್ರದರ್ಶನ ನೀಡಲಿದ್ದಾರೆ.
ಆ್ಯಂಬುಲೆನ್ಸ್ ಮತ್ತು ಅಗ್ನಿಶಾಮಕ ದಳವನ್ನು ಬನ್ನಿಮಂಟಪ ಮೈದಾನಕ್ಕೆ ನಿಯೋಜಿಸಿದ್ದು, ವಾಯುಸೇನೆ ಯೋಧರು ಸಾಹಸ ಪ್ರದರ್ಶನ ನೀಡುವ ಪ್ರದೇಶದಲ್ಲಿ ದೂಳು ಏಳದಂತೆ ನಿಯಂತ್ರಿಸಲಾಗುವುದು. ಜೊತೆಗೆ ಸಾಹಸ ಪ್ರದರ್ಶನದ ನಡುವೆ ಜನರು ಓಡಾಡಬಾರದು. ಜತೆಗೆ ಸಾಹಸ ಪ್ರದರ್ಶನದ ವೇಳೆ ಯೋಧರ ಬಳಿ ಹೋಗದಂತೆ ಅವರು ಮನವಿ ಮಾಡಿದರು.
ನಿವೃತ್ತ ವಿಂಗ್ ಕಮಾಂಡರ್ ಶ್ರೀಕುಮಾರ್, ಸ್ಕ್ವಾಡ್ರನ್ ಲೀಡರ್ ನಿತೀಶ್ ಶರ್ಮಾ, ಡಿಸಿಪಿ ಮುತ್ತುರಾಜು , ಮುಡಾ ಆಯುಕ್ತ ಪಿ.ಎಸ್. ಕಾಂತರಾಜ್ ಮತ್ತಿತರ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.
ತಿಂಡಿ ತಿನಿಸು ಚೆಲ್ಲಿದರೆ ಏರ್‌ಶೋಗೆ ಅಡ್ಡಿ: ಏರ್ ಶೋ ನಿಗದಿತ ಸಮಯಕ್ಕೆ ಆರಂಭವಾಗುವುದರಿಂದ ಜನರು ಮುಂಚಿತವಾಗಿ ಬಂದು ಆಸೀನರಾಗಬೇಕು. ತಿಂಡಿ-ತಿನಿಸುಗಳನ್ನು ತಂದು ಚೆಲ್ಲಬಾರದು. ಚೆಲ್ಲಿದ ತಿಂಡಿಗಳನ್ನು ತಿನ್ನಲು ಪಕ್ಷಿಗಳು ಹಾರಾಡುವುದರಿಂದ ಅವರ ಕಾರ್ಯಾಚರಣೆಗೆ ತೊಂದರೆಯಾಗಲಿದೆ. ಏರ್ ಶೋ ಯುವ ಜನರಿಗೆ ಪ್ರೇರಣಾದಾಯಕವಾಗಿರುವುದರಿಂದ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು.