ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್)ದಿಂದ ಕಳೆದೊಂದು ವರ್ಷದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 2.69 ಕೋಟಿ (26.91 ದಶಲಕ್ಷ) ಪ್ರಯಾಣಿಕರು ಸಂಚರಿಸಿದ್ದು, 1.97 ಲಕ್ಷ ವಿಮಾನಗಳು ಹಾರಾಟ ನಡೆಸಿವೆ. ಈ ಮೂಲಕ ಪ್ರಯಾಣಿಕರ ಸಂಖ್ಯೆ ಶೇ.17.6ರಷ್ಟು ಹಾಗೂ ವಿಮಾನಗಳ ಸಂಚಾರ ದಟ್ಟಣೆಯಲ್ಲಿ ಶೇ.10.7ರಷ್ಟು ವೃದ್ಧಿಯಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಅಂಕಿ ಅಂಶಗಳ ಮಾಹಿತಿ ನೀಡಿರುವ ಬಿಐಎಎಲ್, ದೇಶೀ ವಿಮಾನಗಳಲ್ಲಿ 2.31 ಕೋಟಿ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಲ್ಲಿ 30.81 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶೀ ವಿಮಾನಗಳಲ್ಲಿ 1.92 ಕೋಟಿ ಹಾಗೂ ಅಂತಾರಾಷ್ಟ್ರೀಯ 36 ಲಕ್ಷ ಪ್ರಯಾಣಿಕರು (ಸುಮಾರು 2.28 ಕೋಟಿ) ಸಂಚರಿಸಿದ್ದರು. ಅಲ್ಲದೆ, ಈ ಅವಧಿಯಲ್ಲಿ ಸರಕು ಸಾಗಣೆಯಲ್ಲಿ ಶೆ.9.1ರಷ್ಟು ಪ್ರಗತಿ ದಾಖಲಾಗಿದೆ ಎಂದು ತಿಳಿಸಿದೆ.
ದಾಖಲೆಗಳಿಗೆ ಸಾಕ್ಷಿ: ಇಷ್ಟೇ ಅಲ್ಲ, ಪ್ರಸಕ್ತ ವರ್ಷ ಹಲವು ದಾಖಲೆಗಳಿಗೂ ಬಿಐಎಎಲ್ ಸಾಕ್ಷಿಯಾಗಿದೆ. 2018ರ ಫೆ.19ರಂದು 91,339 ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದಾರೆ. ಅದೇ ರೀತಿ, ಮಾ.16ರಂದು ಅತಿ ಹೆಚ್ಚು, ಅಂದರೆ 664 ವಿಮಾನಗಳು ಹಾರಾಟ ನಡೆಸಿವೆ. ಮಾ.25ರಂದು 1.50 ಕೋಟಿ ಪ್ರಯಾಣಿಕರು ಸೇವೆ ಪಡೆದಿದ್ದಾರೆ. ಇದೇ ವೇಳೆ ಮಾರ್ಚ್ ತಿಂಗಳಲ್ಲಿ ಅತ್ಯಧಿಕ ಪ್ರಯಾಣಿಕರು ಸಂಚರಿಸಿದ ದಾಖಲೆ ನಿರ್ಮಾಣವಾಗಿದೆ.
2021ಕ್ಕೆ ಟರ್ಮಿನಲ್-2 ಕಾರ್ಯಾರಂಭ: 2021ರ ವೇಳೆಗೆ ಟರ್ಮಿನಲ್-2 ಕಾರ್ಯಾರಂಭಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಎರಡು ಹಂತಗಳಲ್ಲಿ ಉದ್ದೇಶಿತ ಟರ್ಮಿನಲ್ ನಿರ್ಮಾಣಗೊಳ್ಳಲಿದ್ದು, ಮೊದಲ ಹಂತದಲ್ಲಿ 25 ದಶಲಕ್ಷ ಪ್ರಯಾಣಿಕರಿಗೆ ಮತ್ತು 2ನೇ ಹಂತದಲ್ಲಿ 20 ದಶಲಕ್ಷ ಪ್ರಯಾಣಿಕರ ಸಾಮರ್ಥ್ಯ ಹೆಚ್ಚಿಸಲಿದೆ. ಆಗ, ಬಿಐಎಎಲ್ ನಿಲ್ದಾಣದ ಒಟ್ಟಾರೆ ಸಾಮರ್ಥ್ಯ 65 ದಶಲಕ್ಷ ತಲುಪಲಿದೆ ಎಂದು ಹರಿ ಮರಾರ್ ವಿಶ್ವಾಸ ವ್ಯಕ್ತಪಡಿಸಿದರು.
ವಿಮಾನಗಳ ಸಂಚಾರ ಪ್ರಗತಿ
-ವಿಮಾನ 2016-17 2017-18 ಪ್ರಗತಿ
-ದೇಶೀ 1,54,095 1,72,665 ಶೇ.12.1
-ಅಂತಾರಾಷ್ಟ್ರೀಯ 24,022 24,665 ಶೇ.2.7
-ಒಟ್ಟು 1,78,117 1,97,330 ಶೇ.10.8
2018-19ನೇ ಸಾಲಿನಲ್ಲಿ ತಂತ್ರಜ್ಞಾನ ಮತ್ತು ಮೂಲ ಸೌಕರ್ಯ ಸುಧಾರಣೆಗೆ ಒತ್ತು ನೀಡಲಿದ್ದೇವೆ. ಡಿಜಿಟಲ್ ರೂಪಾಂತರ ನಮ್ಮ ಎಲ್ಲ ಚಟುವಟಿಕೆಗಳ ಕೇಂದ್ರವಾಗಿರಲಿದ್ದು, ಈ ಮೂಲಕ ದೇಶದ ಅಗ್ರಮಾನ್ಯ ವಿಮಾನ ನಿಲ್ದಾಣಗಳಲ್ಲಿ ಬಿಐಎಎಲ್ ಮುಂಚೂಣಿಯಲ್ಲಿ ನಿಲ್ಲಲಿದೆ.
-ಹರಿ ಮರಾರ್, ಬಿಐಎಎಲ್ ಎಂಡಿ ಮತ್ತು ಸಿಇಒ