Advertisement

‘ಪ್ರಕೃತಿಯೊಂದಿಗಿನ ಸಂಘರ್ಷದಲ್ಲಿ ಮನುಷ್ಯನಿಗೆ ಸೋಲು’

11:20 AM Mar 15, 2018 | Team Udayavani |

ಉಡುಪಿ: ಪರಿಸರ ಮತ್ತು ಮನುಷ್ಯನ ನಡುವೆ ಸಂಘರ್ಷ ಏರ್ಪಟ್ಟರೆ ಅದರಲ್ಲಿ ಮನುಷ್ಯನೇ ಸೋಲುತ್ತಾನೆ. ನಾವು ನಿಸರ್ಗದ ವಿರುದ್ಧ ಹೋದಷ್ಟು ನಿಸರ್ಗ ತನ್ನ ತಾಪವನ್ನು ತೋರಿಸುತ್ತದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಅಭಿಪ್ರಾಯಪಟ್ಟರು. ಮಾ. 14ರಂದು ಉಡುಪಿ ಬೋರ್ಡ್‌ ಹೈಸ್ಕೂಲ್‌ ಆವರಣದಲ್ಲಿ ನಿರಂತರ ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಆಹಾರ, ನೀರನ್ನು ಗುಣಮಟ್ಟ ನೋಡಿ ಸ್ವೀಕರಿಸುವಂತೆ ಗಾಳಿಯ ಗುಣಮಟ್ಟ ಕೂಡ ಪರೀಕ್ಷಿಸುವಂತಾಗಬೇಕು. ಇದಕ್ಕೆ ಇಂತಹ ಮಾಪನ ಕೇಂದ್ರ ನೆರವಾಗಲಿದೆ. ಈ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಲು ಸಾಧ್ಯವಿದೆ ಎಂದು ಸಚಿವರು ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌, ಹಿರಿಯ ಪರಿಸರ ಅಧಿಕಾರಿ ರಾಜಶೇಖರ್‌ ಬಿ.ಪುರಾಣಿಕ್‌, ಪರಿಸರ ಅಧಿಕಾರಿಗಳಾದ ಜಯಪ್ರಕಾಶ್‌ ನಾಯಕ್‌, ಡಾ| ನಾಗಪ್ಪ ಉಪಸ್ಥಿತರಿದ್ದರು. ಪರಿಸರ ಅಧಿಕಾರಿ ಡಾ| ಎಚ್‌.ಲಕ್ಷ್ಮೀಕಾಂತ ಸ್ವಾಗತಿಸಿದರು. ಸಹಾಯಕ ಪರಿಸರ ಅಧಿಕಾರಿ ಪ್ರಮೀಳಾ ವಂದಿಸಿದರು. ರವೀಂದ್ರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. 

24 ಗಂಟೆ ಕಾರ್ಯನಿರ್ವಹಣೆ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗ ಸೂಚಿಯಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಾಯು ಗುಣಮಟ್ಟ ಮಾಪನ ಕೇಂದ್ರ ಸ್ಥಾಪಿಸಲಾಗುತ್ತಿದೆ. ರಾಜ್ಯದ ಬೆಂಗಳೂರು, ಮಂಗಳೂರಿನಲ್ಲಿ ಇಂತಹ ಕೇಂದ್ರಗಳು ಆರಂಭವಾಗಿವೆ. ಉಳಿದ ಜಿಲ್ಲೆಗಳಲ್ಲಿ ಒಂದು ತಿಂಗಳೊಳಗೆ ಆರಂಭಗೊಳ್ಳಲಿದೆ. ಒಂದು ಕೇಂದ್ರ ಸ್ಥಾಪನೆಗೆ 1.36 ಕೋ.ರೂ. ಮತ್ತು 5 ವರ್ಷಗಳ ಕಾಲ ನಿರ್ವಹಣೆಗೆ ಒಂದು ಕೋ.ರೂ. ವೆಚ್ಚವಾಗುತ್ತದೆ. ಇದು 1 ಕಿ.ಮೀ. ವ್ಯಾಪ್ತಿಯಲ್ಲಿ ಗಾಳಿಯಲ್ಲಿರುವ 8 ಮಲಿನಕಾರಕಗಳ ಪ್ರಮಾಣವನ್ನು ನಿರಂತರವಾಗಿ ಮಾಪನ ಮಾಡಲಿದೆ. ಮಾಪನದಿಂದ ದೊರೆಯುವ ಮಾಹಿತಿಯನ್ನು ಸಾರ್ವಜನಿಕರು ಕೂಡ ವೀಕ್ಷಿಸಬಹುದು ಎಂದು ಅಧಿಕಾರಿಗಳು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next