ನವದೆಹಲಿ: ಭಾರತೀಯ ವಾಯುಸೇನೆಯ ಮುಂದಿನ ನೂತನ ಮುಖ್ಯಸ್ಥರನ್ನಾಗಿ ಏರ್ ಮಾರ್ಷಲ್ ರಾಕೇಶ್ ಕುಮಾರ್ ಭದೌರಿಯಾ ಅವರನ್ನು ಆಯ್ಕೆ ಮಾಡಲಾಗಿದೆ.
ನೂತನ ಏರ್ ಚೀಫ್ ಆಗಲಿರುವ ರಾಕೇಶ್ ಅವರು ರಾಫೆಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿರುವ ಮೊದಲ ಐಎಎಫ್ ಫೈಲಟ್ ಎಂಬ ಹೆಗ್ಗಳಿಕೆ ಇವರದ್ದಾಗಿದೆ.
ದೇಶದ ವಾಯುಸೇನೆಯ ನೂತನ ಮುಖ್ಯಸ್ಥರನ್ನಾಗಿ ಆರ್ ಕೆಎಸ್ ಭದೌರಿಯಾ ಅವರನ್ನು ನೇಮಕ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ರಕ್ಷಣಾ ಸಚಿವಾಲಯ ಗುರುವಾರ ಟ್ವೀಟ್ ಮಾಡಿದೆ. ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಾಯುಸೇನೆಯ ಹಾಲಿ ಮುಖ್ಯಸ್ಥರಾಗಿರುವ ಏರ್ ಚೀಫ್ ಮಾರ್ಷಲ್ ಬಿರೇಂದರ್ ಸಿಂಗ್ ಧನೋವಾ ಅವರು ಸೆಪ್ಟೆಂಬರ್ 30ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಧನೋವಾ ಅವರು 2017ರ ಜನವರಿ 1ರಂದು ವಾಯುಸೇನೆಯ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು.
ಆಗ್ರಾ ಸಮೀಪದ ಭದೌರಿಯಾ ಎಂಬ ಹಳ್ಳಿಯಲ್ಲಿ ರಾಕೇಶ್ ಕುಮಾರ್ ಸಿಂಗ್ ಜನಿಸಿದ್ದರು. ಆರ್ ಕೆ ಎಸ್ ಅವರು ಪರಮ್ ವಿಶಿಷ್ಟ ಸೇವಾ ಪದಕ, ಅತೀ ವಿಶಿಷ್ಟ ಸೇವಾ ಪದಕ, ವಾಯುಸೇನಾ ಪದಕ ಪಡೆದಿದ್ದಾರೆ. ಆರ್ ಕೆಎಸ್ ಅವರು ಪುಣೆಯಯಲ್ಲಿ ಮಾಸ್ಟರ್ ಇನ್ ಡಿಫೆನ್ಸ್ ಸ್ಟಡೀಸ್ ನಲ್ಲಿ ಪದವಿ ಪಡೆದಿದ್ದರು. ಬಾಂಗ್ಲಾದೇಶದ ಕಮಾಂಡ್ ಅಂಡ್ ಸ್ಟಾಪ್ ಕಾಲೇಜಿನಲ್ಲಿ ರಕ್ಷಣಾ ಕಲಿಕೆಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದರು. 1980ರಲ್ಲಿ ಭಾರತೀಯ ವಾಯುಪಡೆಯಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದರು. ಈವರೆಗೆ ವಿವಿಧ ಯುದ್ಧ ವಿಮಾನಗಳಲ್ಲಿ ಸುಮಾರು 4250 ಗಂಟೆಗಳ ಕಾಲ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ. ಅಷ್ಟೇ ಅಲ್ಲ ಹಲವಾರು ಕಾರ್ಯಾಚರಣೆಯಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡಿದ್ದರು.