ಮಣಿಪಾಲ : ಸೋಂಕು ನಿಯಂತ್ರಣಕ್ಕಾಗಿ ಜಾರಿ ಮಾಡಿರುವ ಲಾಕ್‌ಡೌನ್ ಸಾಕಷ್ಟು ಜನರ ಉದ್ಯೋಗಕ್ಕೆ ಕನ್ನ ಹಾಕಿದ್ದು, ಆದಾಯ ಮೂಲಗಳಿಲ್ಲದೆ ಲಕ್ಷಾಂತರ ಕುಟುಂಬಗಳು ಪರದಾಡುತ್ತಿವೆ. ಆದರೆ ಕೆಲವೊಂದು ಕಂಪನಿಗಳು ಉದ್ಯೋಗ ವಜಾಕ್ಕಿಂತ ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದು, ಪಾಳಿ ಮಾದರಿಯಲ್ಲಿ ಕೆಲಸ ನಿಯೋಜಿಸುತ್ತಿದೆ.
ಈ ಹಿನ್ನಲೆಯಲ್ಲಿಯೇ ಏರ್‌ಇಂಡಿಯಾ ಖಾಯಂ ಉದ್ಯೋಗಿಗಳಿಗೆ ವಾರದ ಮೂರು ದಿನ ಮಾತ್ರ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದ್ದು, ಶೇ.60ರಷ್ಟು ಮಾತ್ರ ವೇತನ ನೀಡುವುದಾಗಿ ತಿಳಿಸಿದೆ.
ಏರ್ ಇಂಡಿಯಾ ಸಂಸ್ಥೆ ಶುಕ್ರವಾರ ಸುದ್ಧಿ ಗೋಷ್ಠಿ ನಡೆಸಿ ಈ ನಿರ್ಧಾರವನ್ನು ತಿಳಿಸಿದ್ದು, ಕೋವಿಡ್-19 ಬಿಕ್ಕಟ್ಟಿನಿಂದಾಗಿ ಸಂಸ್ಥೆ ಸಾಕಷ್ಟು ನಷ್ಟದಲ್ಲಿದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಅನಗತ್ಯ ವೆಚ್ಚ ಕಡಿತಗೊಳಿಸಲು ಮತ್ತು ಹಣಕಾಸು ಪರಿಸ್ಥಿತಿ ಸುಧಾರಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.
ಇನ್ನು ಈ ನಿಯಮ ಕೇವಲ ಖಾಯಂ ಉದ್ಯೋಗಿಗಳಿಗೆ ಅನ್ವಯ ಆಗಲಿದ್ದು, ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಸದಸ್ಯರು ಇದರ ಪ್ರಯೋಜನ ಸಿಗುವುದಿಲ್ಲ ಎಂದು ಕಂಪನಿಯ ಅಧಿಕೃತ ಮೂಲಗಳು ತಿಳಿಸಿದೆ. ಜತೆಗೆ ಈ ಒಂದು ನಿಯಮ ಮುಂದಿನ ಒಂದು ವರ್ಷ ಇಡೀ ಪಾಲನೆ ಆಗಲಿದ್ದು, ಉದ್ಯೋಗಿಗಳು ಇತರೆ ರಜಾ ದಿನಗಳಲ್ಲಿ ಅನ್ಯ ಉದ್ಯೋಗ ಮಾಡುವಂತಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದೆ.
ಒಟ್ಟಾರೆ ಕೋವಿಡ್-19ನ ಬಿಸಿ ವಾಯುಯಾನ ಸಂಸ್ಥೆಗಳೆಗೆ ಕೊಂಚ ಹೆಚ್ಚಾಗಿಯೇ ತಟ್ಟಿದ್ದು, ಏರ್‌ಇಂಡಿಯಾ ಉದ್ಯಮ ನಷ್ಟದ ಸುಳಿಯಲ್ಲಿ ಸಿಲುಕುವುದರೊಂದಿಗೆ ಸುಮಾರು 60,000 ಕೋಟಿ ರೂ. ಸಾಲ ಸಂಸ್ಥೆಯ ಮೇಲಿದೆ ಎನ್ನಲಾಗುತ್ತಿದೆ. ಇನ್ನು ದೇಶದ ಬಹುತೇಕ ಸಂಸ್ಥೆಗಳದ್ದು ಕೂಡ ಇದೇ ಪರಿಸ್ಥಿತಿ ಆಗಿದ್ದು, ನೌಕರರ ವೇತನ ಕಡಿತ, ಉದ್ಯೋಗ ಕಡಿತದಂತಹ ದಾರಿಗಳನ್ನು ಆಯ್ದುಕೊಂಡಿವೆ.