ನವದೆಹಲಿ: ವಿವಿಐಪಿ ಸಂಸ್ಕೃತಿ ಹಾಗೂ ಅಶಿಸ್ತಿನಿಂದ ವರ್ತಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ಏರ್ ಇಂಡಿಯಾ ಇದೀಗ ವಿಳಂಬಕ್ಕೆ ಕಾರಣರಾಗಲಿರುವ ಪ್ರಯಾಣಿಕರ ಮೇಲೆ ಭಾರೀ ಪ್ರಮಾಣದ ದಂಡ ವಿಧಿಸುವ ಹೊಸ ನಿಯಮ ಜಾರಿಗೆ ತರಲು ನಿರ್ಧರಿಸಿದೆ.
ಇನ್ಮುಂದೆ ಏರ್ ಇಂಡಿಯಾ ವಿಮಾನದ ಟಿಕೆಟ್ ಬುಕ್ಕಿಂಗ್ ಮಾಡಿ ಅಶಿಸ್ತಿನಿಂದ ಅಥವಾ ಗೂಂಡಾಗಿರಿ ಪ್ರದರ್ಶಿಸಿದರೆ, ವಿಳಂಬವಾಗಿ ಹೋದರೆ ಅಂತಹ ಪ್ರಯಾಣಿಕ ಭಾರೀ ಮೊತ್ತದ ದಂಡ ತೆರಬೇಕಾಗಲಿದೆ.
ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶದ ಪ್ರಕಾರ, 2016ರ ಏಪ್ರಿಲ್ ನಿಂದ 2017ರ ಫೆಬ್ರುವರಿವರೆಗೆ 18, 242 ಪ್ರಯಾಣಿಕರು ವಿಳಂಬವಾಗಿ ಆಗಮಿಸಿದ್ದರಿಂದ ವಿಮಾನ ಪ್ರಯಾಣ ನಿರಾಕರಿಸಲಾಗಿತ್ತು.
2015ರಲ್ಲಿ ವೈಎಸ್ ಆರ್ ಕಾಂಗ್ರೆಸ್ ಸಂಸದರೊಬ್ಬರು ತಿರುಪತಿಯಲ್ಲಿ ವಿಳಂಬವಾಗಿ ಬಂದಿದ್ದಕ್ಕೆ ಪ್ರಯಾಣಿಸಲು ಅವಕಾಶ ನೀಡಲ್ಲ ಎಂದು ಹೇಳಿದ್ದ ಏರ್ ಇಂಡಿಯಾ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದರು. ಕಳೆದ ತಿಂಗಳು ಶಿವಸೇನೆಯ ಸಂಸದ ರವೀಂದ್ರ ಗಾಯಕ್ವಾಡ್ ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದಿದ್ದರು. ತೃಣಮೂಲ ಕಾಂಗ್ರೆಸ್ ಸಂಸದ ಕೂಡಾ ಇದೇ ನಡವಳಿಕೆ ತೋರಿದ್ದರಿಂದ ಏರ್ ಇಂಡಿಯಾ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ ಎಂದು ವರದಿ ವಿವರಿಸಿದೆ.
ಎಷ್ಟು ದಂಡ ತೆರಬೇಕು:
ಎಎನ್ಐ ವರದಿ ಪ್ರಕಾರ, ಯಾವುದೇ ಪ್ರಯಾಣಿಕ ಒಂದು ತಾಸು ತಡವಾಗಿ ಬಂದರೆ 5 ಲಕ್ಷ ರೂಪಾಯಿ ದಂಡ ತೆರಬೇಕು.
ಒಂದು ವೇಳೆ 1ರಿಂದ 2 ತಾಸು ವಿಳಂಬವಾದರೆ 10 ಲಕ್ಷ ರೂಪಾಯಿ ದಂಡ
2ಗಂಟೆಗಿಂತ ಹೆಚ್ಚು ವಿಳಂಬವಾದರೆ 15 ಲಕ್ಷ ರೂಪಾಯಿ ದಂಡ