ನವದೆಹಲಿ: ಸುಮಾರು 69 ವರ್ಷಗಳ ಬಳಿಕ ಭಾರತ ಸರ್ಕಾರ ಏರ್ ಇಂಡಿಯಾವನ್ನು ಗುರುವಾರ (ಜನವರಿ 27) ಟಾಟಾ ಗ್ರೂಪ್ ಗೆ ಅಧಿಕೃತವಾಗಿ ಹಸ್ತಾಂತರಿಸಿದೆ. ಆದರೆ ಇಂದಿನಿಂದಲೇ ಏರ್ ಇಂಡಿಯಾ ವಿಮಾನಗಳು ಟಾಟಾ ಗ್ರೂಪ್ ಬ್ಯಾನರ್ ನಡಿ ಹಾರಾಟ ನಡೆಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿಗಳ ಪ್ರತಿಭಟನೆ; ಬಿಹಾರದಲ್ಲಿ ಕೋಟ್ಯಂತರ ರೂ. ರೈಲ್ವೆ ಆಸ್ತಿ ಬೆಂಕಿಗಾಹುತಿ
ಮೂಲಗಳ ಪ್ರಕಾರ, ಏರ್ ಇಂಡಿಯಾ ಕಚೇರಿಯಲ್ಲಿ ಔಪಚಾರಿಕವಾಗಿ ಟಾಟಾ ಗ್ರೂಪ್ ಗೆ ಹಸ್ತಾಂತರಿಸುವ ಮುನ್ನ ಟಾಟಾ ಗ್ರೂಪ್ ನ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು ಎಂದು ವರದಿ ತಿಳಿಸಿದೆ.
ಸುಮಾರು 69 ವರ್ಷಗಳ ಬಳಿಕ ಏರ್ ಇಂಡಿಯಾ ಟಾಟಾ ಸಂಸ್ಥೆಗೆ ಸೇರಿದಂತಾಗಿದೆ. ಇಂದಿನಿಂದ ಟಾಟಾ ಕಂಪನಿಯ ಶೇ.100 ಪ್ರತಿಶತ ಶೇರುಗಳನ್ನು ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್ ಗೆ ವರ್ಗಾಯಿಸುವುದರೊಂದಿಗೆ ಏರ್ ಇಂಡಿಯಾ ನಿರ್ವಹಣೆಯ ನಿಯಂತ್ರಣ ಟಾಟಾ ಗ್ರೂಪ್ ತೆಕ್ಕೆಗೆ ಬಿದ್ದಂತಾಗಿದೆ.
2,700 ಕೋಟಿ ರೂಪಾಯಿ ಹಣವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರಕ್ಕೆ ಬಂದಿದ್ದು, ಇದೀಗ ಟ್ಯಾಲೇಸ್ ಏರ್ ಇಂಡಿಯಾದ ನೂತನ ಮಾಲೀಕರಾಗಿರುವುದಾಗಿ ಡಿಐಪಿಎಂ ಕಾರ್ಯದರ್ಶಿ ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಕೇಂದ್ರ ಸರ್ಕಾರ ಏರ್ ಇಂಡಿಯಾವನ್ನು 18,000 ಕೋಟಿ ರೂಪಾಯಿಗೆ ಟಾಟಾ ಗ್ರೂಪ್ಸ್ ನ ಹೋಲ್ಡಿಂಗ್ ಕಂಪನಿಗೆ ಮಾರಾಟ ಮಾಡಿತ್ತು. ನಂತರ ಕೇಂದ್ರ ಸರ್ಕಾರ ಏರ್ ಇಂಡಿಯಾ ಶೇ.100 ಪ್ರತಿಶತ ಶೇರುಗಳನ್ನು ಮಾರಾಟ ಮಾಡಲು ಒಲವು ತೋರಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಮತ್ತು ಟಾಟಾ ಗ್ರೂಪ್ ಷೇರು ಖರೀದಿಯ ಒಪ್ಪಂದಕ್ಕೆ ಸಹಿ ಹಾಕಿತ್ತು.