ಹೊಸದಿಲ್ಲಿ : ಬಳಕೆಯಲ್ಲಿ ಇಲ್ಲದ ರನ್ ವೇ ಯಲ್ಲಿ ಪ್ರಮಾದ ವಶಾತ್ ಇಳಿದಿರುವ ಏರಿಂಡಿಯಾ ವಿಮಾನ, ಮಾಲ್ದೀವ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದೆ.
ವಿಮಾನದಲ್ಲಿರುವ ಎಲ್ಲ 136 ಪ್ರಯಾಣಿಕರು ಮತ್ತು ಚಾಲಕ ಸಿಬಂದಿಗಳು ಸುರಕ್ಷಿತರಾಗಿದ್ದಾರೆ. ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಅದರ ಎರಡು ಮುಖ್ಯ ಚಕ್ರಗಳ ಗಾಳಿ ನಷ್ಟವಾಗಿದೆ. ಆದುದರಿಂದ ಅದನ್ನು ಪಾರ್ಕಿಂಗ್ ಬೇ ಕಡೆಗೆ ಎಳೆದು ತರಲಾಗಿದೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಹಾರಾಟ ಸಂಖ್ಯೆ ಎಐ 263 ಏರಿಂಡಿಯಾ ವಿಮಾನ ಪೈಲಟ್ ತಪ್ಪಿನಿಂದಾಗಿ ಬಳಕೆಯಲ್ಲಿ ಇಲ್ಲದ ರನ್‌ವೇಯಲ್ಲಿ ಇಳಿಯುವ ಮೂಲಕ ಮಾಲ್ದೀವ್ಸ್‌ನ ಮಾಲೇ ವೆಲಾನಾ ಇಂಟರ್ ನ್ಯಾಶನಲ್ ಏರ್‌ಪೋರ್ಟ್ ನಲ್ಲಿ ಸಿಲುಕಿಕೊಂಡಿದೆ ಎಂದು ತಿಳಿದು ಬಂದಿದೆ.
ಅನಂತರದ ಎಎನ್‌ಐ ವರದಿಯ ಪ್ರಕಾರ ಏರಿಂಡಿಯಾ ವಿಮಾನ 320 ಎನ್‌ಇಓ ವಿಮಾನ ವಿಟಿ ಇಎಕ್ಸ್‌ಎಲ್ ನಿರ್ಮಾಣ ಹಂತದಲ್ಲಿರುವ ರನ್‌ವೇಯಲ್ಲಿ ಇಳಿದಿದೆ ಎಂದು ಗೊತ್ತಾಗಿದೆ.
ವಿಮಾನವು ಇಳಿದಾಗ ಉಂಟಾದ ಘರ್ಷಣೆಯಿಂದಾಗಿ ರನ್‌ವೇ ಮೇಲಿನ ಹೊದಿಕೆ ವಿಮಾನದ ಚಕ್ರಗಳಿಗೆ ಸಿಲುಕಿಕೊಂಡಿರುವುದು ವಿಡಿಯೋ ಚಿತ್ರಿಕೆಯಲ್ಲಿ ಕಂಡು ಬಂದಿದೆ.
ಈಚಿನ ವರದಿಗಳ ಪ್ರಕಾರ ಮಾಲ್ದೀವ್ಸ್‌ನ ಈ ವಿಮಾನ ನಿಲ್ದಾಣದ ಈ ಹೊಸ ರನ್ ವೇ ನಿರ್ಮಾಣ ಕಾರ್ಯ ಈಚೆಗಷ್ಟೇ ಮುಗಿದಿತ್ತು. ಅಂತೆಯೇ ರನ್‌ವೇ ಚಿಹ್ನೆಗಳು ಮತ್ತು ದೀಪಗಳ ಅಳವಡಿಕೆ ಕೆಲಸವೂ ಮುಗಿದಿತ್ತು. ಈ ತಿಂಗಳಲ್ಲೇ ಅದರ ಬಳಕೆಯನ್ನು ಆರಂಭಗೊಳಿಸುವುದಿತ್ತು.