Advertisement

ಗೋಡೆಗೆ ಗುದ್ದಿಯೂ ಹಾರಿದ ವಿಮಾನ!

09:59 AM Oct 13, 2018 | Team Udayavani |

ತಿರುಚಿರಾಪಳ್ಳಿ: ತಿರುಚಿರಾಪಳ್ಳಿಯಿಂದ ದುಬೈಗೆ ಹೊರಟಿದ್ದ ವಿಮಾನ, ತಿರುಚಿರಾಪಳ್ಳಿಯಿಂದ ಟೇಕ್‌ ಆಫ್ ಆಗುತ್ತಿದ್ದಂತೆ ನಿಲ್ದಾಣದ ಹೊರ ಗೋಡೆಗೆ ಢಿಕ್ಕಿ ಹೊಡೆದಿದೆ. ಅಚ್ಚರಿಯ ಸಂಗತಿಯೆಂದರೆ, ಗೋಡೆಗೆ ಢಿಕ್ಕಿ ಹೊಡೆದು ವಿಮಾನ ಭಾರೀ ಪ್ರಮಾಣದಲ್ಲಿ ಹಾನಿಯಾದರೂ ಅದು 4 ಗಂಟೆಗಳ ಕಾಲ ಎಂದಿನಂತೆ ಹಾರಾಟ ನಡೆಸಿದೆ. ವಿಮಾನದೊಳಗಿದ್ದ ಎಲ್ಲ 136 ಪ್ರಯಾಣಿಕರು ಹಾಗೂ ಸಿಬಂದಿಗೆ ಯಾವುದೇ ತೊಂದರೆಯಾಗಿಲ್ಲ. ಅನಂತರ ಮುಂಬೈನಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.

Advertisement

ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಬೋಯಿಂಗ್‌ 737-800 ವಿಮಾನ ಇದಾಗಿದ್ದು, ಢಿಕ್ಕಿ ಹೊಡೆದ ಪರಿಣಾಮ ತಿರುಚ್ಚಿ ವಿಮಾನ ನಿಲ್ದಾಣದ ಹೊರ ಪ್ರಾಕಾರ ಭಾಗಶಃ ಕುಸಿದಿದೆ. ಇದನ್ನು ಕೆಂಪು ಕಲ್ಲಿನಿಂದ ನಿರ್ಮಿಸಲಾಗಿತ್ತು. ವಿಮಾನ ಭಾರೀ ಪ್ರಮಾಣದಲ್ಲಿ ನುಜ್ಜುಗು ಜ್ಜಾಗಿದೆ. ವಿಮಾನದ ಹೊರಭಾಗಕ್ಕೆ ಹಾನಿಯಾ ಗಿದ್ದರೂ, ವಿಮಾನದ ಎಲ್ಲ ಸಿಸ್ಟಂಗಳು ಸಹಜ ವಾಗಿ ಕೆಲಸ ಮಾಡುತ್ತಿದ್ದವು. ಹೀಗಾಗಿ ವಿಮಾನ ಹಾರಾಟ ನಡೆಸಲು ನಿರ್ಧರಿಸಲಾಯಿತು.

ಗೋಡೆಗೆ ಬಡಿದ ವಿಚಾರವನ್ನು ಸಿಐಎಸ್‌ಎಫ್ ಸಿಬಂದಿ ವಿಮಾನ ಸಂಚಾರ ನಿಯಂತ್ರಕ(ಎಟಿಸಿ)ರಿಗೆ ಮಾಹಿತಿ ನೀಡಿದ್ದು, ಕೂಡಲೇ ಅವರು ಪೈಲಟ್‌ಗಳನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದಾರೆ. ಆದರೆ, ವಿಮಾನದ ಎಲ್ಲ ವ್ಯವಸ್ಥೆಗಳೂ ಸುಸೂತ್ರವಾಗಿವೆ ಎಂದು ಪೈಲಟ್‌ ಹೇಳಿದ್ದಾರೆ. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಮುಂಬೈಗೆ ತಿರುಗಿಸಲು ಸೂಚಿಸಲಾಯಿತು. ಅದರಂತೆ, ಮುಂಬೈನಲ್ಲಿ ವಿಮಾನ ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿವೆ. ತಿರುಚ್ಚಿಯಿಂದ ಮುಂಬಯಿವರೆಗೆ ಸುಮಾರು 4 ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿದೆ. ಸದ್ಯ ಪೈಲಟ್‌ ಗಣೇಶ್‌ ಬಾಬು ಹಾಗೂ ಅನುರಾಗ್‌ರನ್ನು ಅಮಾನತಿನಲ್ಲಿಡಲಾಗಿದೆ. ಇದೇ ರೀತಿಯ ಘಟನೆ 2010ರಲ್ಲಿ ಮಂಗಳೂರಿನಲ್ಲಿ ನಡೆದಾಗ 158 ಜನರು ಸಾವನ್ನಪ್ಪಿದ್ದರು. ಆದರೆ ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಅಪಾಯವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next