ಮಾರಾಟವಾಗದಿದ್ದರೆ, ಆರ್ಥಿಕ ಪ್ಯಾಕೇಜ್ ಸಿಗದಿದ್ದರೆ ಲಾಕ್‌ಔಟ್ ಸಾಧ್ಯತೆ
– 60,000 ಕೋಟಿ ರೂ. ಸಾಲ ಹೊತ್ತಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆ
– 2011-12ರಿಂದ ಈವರೆಗೆ ಸಂಸ್ಥೆಗೆ 30,520.21 ಕೋಟಿ ರೂ. ಸಹಾಯ
– ಮತ್ತಷ್ಟು ಆರ್ಥಿಕ ಪ್ಯಾಕೇಜ್ ನೀಡುವ ಸ್ಥಿತಿಯಲ್ಲಿ ಇಲ್ಲದ ಕೇಂದ್ರ ಸರ್ಕಾರ
– ಪರಭಾರೆ ಹಾಗೂ ಬಂಡವಾಳ ಹಿಂತಗೆತವೇ ಪ್ರಮುಖ ದಾಳವಾಗಿಸಿರುವ ಸರ್ಕಾರ
ನವದೆಹಲಿ: ತೀವ್ರ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯನ್ನು ಸದ್ಯದಲ್ಲೇ ಯಾರೂ ಕೊಳ್ಳಲು ಮುಂದೆ ಬಾರದಿದ್ದರೆ ಅಥವಾ ಸರ್ಕಾರದಿಂದ ಮತ್ತಷ್ಟು ಆರ್ಥಿಕ ಪರಿಹಾರದ ಪ್ಯಾಕೇಜ್‌ಗಳು ಲಭ್ಯವಾಗದಿದ್ದರೆ ಮುಂದಿನ ಜೂನ್ ಹೊತ್ತಿಗೆ ಆ ಸಂಸ್ಥೆ ಶಾಶ್ವತವಾಗಿ ಮುಚ್ಚಿಹೋಗಲಿದೆ ಎಂದು ಅದೇ ಸಂಸ್ಥೆಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ತಲೆಯ ಮೇಲೆ ಸದ್ಯಕ್ಕೆ 60,000 ಕೋಟಿ ರೂ.ಗಳನ್ನು ಹೊತ್ತುಕೊಂಡಿರುವ ಏರ್ ಇಂಡಿಯಾ ಸಂಸ್ಥೆಗೆ ಪುನಶ್ಚೇತನ ನೀಡಲು ಹಾಗೂ ಅದನ್ನು ಪರಭಾರೆ ಮಾಡುವ ನಿರಂತರ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ತಲ್ಲೀನವಾಗಿದೆ. ಈ ಪ್ರಕ್ರಿಯೆಗಳನ್ನು ಸರಾಗವಾಗಿ ನಡೆಸಲು ಸಂಸ್ಥೆಯಲ್ಲಿ ತಾನು ಹೊಂದಿದ್ದ ಬಂಡವಾಳ ಹಿಂಪಡೆತಕ್ಕೂ ಕೈ ಹಾಕಿದೆ. ಆದರೂ, ಸಂಸ್ಥೆಯನ್ನು ಖರೀದಿಸಲು ಬೇರ್ಯಾವುದೇ ಕಂಪನಿ ಆಸಕ್ತಿ ವಹಿಸುತ್ತಿಲ್ಲವಾದ್ದರಿಂದ ಸದ್ಯದ ಮಟ್ಟಿನ ಚೇತರಿಕೆಗಾಗಿ ಆರ್ಥಿಕ ಪ್ಯಾಕೇಜ್‌ಗಳು ಅಥವಾ ಮತ್ಯಾವುದೇ ವಿತ್ತೀಯ ಅನುಕೂಲತೆಗಳು ಸಂಸ್ಥೆಗೆ ಸಿಗಲೇಬೇಕಿದೆ. ಅಷ್ಟು ಸಿಕ್ಕಿದರೂ, ಈಗಾಗಲೇ ಹಾರಾಟ ನಿಲ್ಲಿಸಿರುವ ಕಂಪನಿಯ 12 ವಿಮಾನಗಳನ್ನು ಮತ್ತೆ ಸೇವೆಗೆ ಸಜ್ಜುಗೊಳಿಸಬಹುದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ, 2011-12ರಿಂದ 2019ರ ಡಿಸೆಂಬರ್‌ವರೆಗೂ ಸಂಸ್ಥೆಯ ಅನುಕೂಲಕ್ಕಾಗಿ 30,520.21 ಕೋಟಿ ರೂ.ಗಳಷ್ಟು ಹಣವನ್ನು ನೀಡಿದೆ. ಈಗ, ಮತ್ತಷ್ಟು ಆರ್ಥಿಕ ಪ್ಯಾಕೇಜ್‌ಗಳನ್ನು ನೀಡುವ ಸ್ಥಿತಿಯಲ್ಲಿ ಕೇಂದ್ರವೂ ಇಲ್ಲ. ಹಾಗಾಗಿ, ಬೇರೆ ರೀತಿಯ ಆರ್ಥಿಕ ಅನುಕೂಲಗಳು ಸಿಕ್ಕರೂ ಸಾಕು ಏರ್ ಇಂಡಿಯಾ ಕೊಂಚವಾದರೂ ಚಿಗುರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇಂಥ ಪ್ಯಾಕೇಜ್‌ಗಳು ಸಿಗದಿದ್ದರೆ 25 ವರ್ಷಗಳ ಕಾಲ ಸತತ ಸೇವೆ ನೀಡಿ ಈಗ ನೇಪಥ್ಯಕ್ಕೆ ಸರಿದ ಜೆಟ್ ಏರ್‌ವೆàಸ್ ಸಂಸ್ಥೆಯ ಸಾಲಿಗೆ ಏರ್ ಇಂಡಿಯಾ ಕೂಡ ಸೇರ್ಪಡೆಯಾಗುವುದು ಖಾತ್ರಿ ಎಂದು ಅವರು ತಿಳಿಸಿದ್ದಾರೆ.