ಹೊಸದಿಲ್ಲಿ: ನಾಳೆ, ಅಂದರೆ ರವಿವಾರ ಆಗಸದಲ್ಲಿ ಹೆಲಿಕಾಪ್ಟರ್‌ಗಳು ಸ್ವತ್ಛಂದವಾಗಿ ಹಾರಾಡುತ್ತಾ ಪುಷ್ಪ ವೃಷ್ಟಿ ಸುರಿಸಲಿವೆ. ತಿಂಗಳಿನಿಂದ ಸಮುದ್ರ ತೀರ ದಲ್ಲಿ ಚಲಿಸದೇ ನಿಂತಿದ್ದ ಎಲ್ಲ ಹಡಗುಗಳ ದೀಪಗಳು ಪ್ರಜ್ವಲಿಸಲಿವೆ. ರಕ್ಷಣಾ ಪಡೆಯ ವಿಮಾನಗಳು ಬಾನಂಗಳದಲ್ಲಿ ಶಿಸ್ತಿನಿಂದ ಗೌರವ ಹಾರಾಟ ನಡೆಸಲಿವೆ!
ಇಷ್ಟೆಲ್ಲ ಏಕೆ ಅಂತೀರಾ? ಇದು, ಕೋವಿಡ್-19 ವಿರುದ್ಧ ಮುನ್ನೆಲೆಯಲ್ಲಿ ನಿಂತು ಹೋರಾಡುತ್ತಿರುವ ಆರೋಗ್ಯ ವೀರರಿಗೆ ಗೌರವ ಸಲ್ಲಿಸಲು ದೇಶದ ಸಶಸ್ತ್ರ ಪಡೆಗಳು ಹಾಕಿಕೊಂಡಿರುವ ಯೋಜನೆ.
ಶುಕ್ರವಾರ ಸಂಜೆ ನಡೆದ ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರ ಸುದ್ದಿಗೋಷ್ಠಿಯಲ್ಲಿ ರಕ್ಷಣಾ ಸಿಬಂದಿ ಮುಖ್ಯಸ್ಥ ಬಿಪಿನ್ ರಾವತ್ ಈ ಕುರಿತು ಮಾಹಿತಿ ನೀಡಿದರು.
ಸೋಂಕು ಹರಡದಂತೆ ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಸಹಿತ ಎಲ್ಲ ಆರೋಗ್ಯ ವೀರರು ಹಾಗೂ ದೇಶದ ನಾಗ ರಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಮೂರೂ ರಕ್ಷಣಾ ಪಡೆಗಳು ಜಂಟಿಯಾಗಿ ಮೇ 3ರಂದು ವಿಶೇಷ ಕಾರ್ಯಕ್ರಮ ರೂಪಿಸಿವೆ.
ಈ ವೇಳೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಈಶಾನ್ಯದ ಅಸ್ಸಾಂನಿಂದ ಗುಜರಾತ್‌ನ ಕಚ್‌ವರೆಗೆ ವಾಯು ಪಡೆ ವಿಮಾನಗಳಿಂದ ಗೌರವ ಹಾರಾಟ ನಡೆಯಲಿದೆ. ಜತೆಗೆ ದೇಶದ ಕರಾವಳಿ ತೀರದುದ್ದಕ್ಕೂ ನಿಂತಿರುವ ಹಡಗುಗಳ ದೀಪಗಳನ್ನು ಬೆಳಗಿಸುವ ಮೂಲಕ ನೌಕಾ ಪಡೆ ವಿಶೇಷ ಗೌರವ ಸಲ್ಲಿಸಲಿದೆ.
ಮೂರನೆಯದಾಗಿ ದೇಶದ ಆಸ್ಪತ್ರೆಗಳ ಮೇಲೆ ಹೆಲಿಕಾಪ್ಟರ್‌ಗಳ ಮೂಲಕ ಪುಷ್ಪ ವೃಷ್ಟಿ ಸುರಿಸುವ ಜತೆಗೆ ಬಹುತೇಕ ಜಿಲ್ಲೆಗಳಲ್ಲಿನ ವೈದ್ಯಕೀಯ ಕಟ್ಟಡಗಳ ಹೊರಗೆ ಸೇನಾ ಬ್ಯಾಂಡ್ ನುಡಿಸುವ ಮೂಲಕ ಆರೋಗ್ಯ ವೀರರಿಗೆ ವಿಶೇಷ ಕೃತಜ್ಞತೆಯ ಗೌರವ ಸಲ್ಲಿಸಲಾಗುವುದು ಎಂದು ರಾವತ್ ಅವರು ಮಾಹಿತಿ ನೀಡಿದರು.