ಮಣಿಪಾಲ: ಭಾರತೀಯ ವಾಯುಪಡೆಗೆ ಇಂದು (ಗುರುವಾರ) 88ನೇ ದಿನಾಚರಣೆ ಸಂಭ್ರಮ.
ಸಂಭ್ರಮದ ಮನೆಯಲ್ಲಿ ಬಣ್ಣ ಬಣ್ಣದ ಬಟ್ಟೆಯನ್ನು ಉಟ್ಟು ಓಡಾಡುವಂತೆ ಗಗನದಲ್ಲಿ ವರ್ಣರಂಜಿತವಾದ ಬಣ್ಣಗಳನ್ನು ಲೋಹದ ಹಕ್ಕಿಗಳು ಉಂಟುಮಾಡಿದ್ದವು.
ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶ ಮಾತ್ರವಲ್ಲದೇ ಜಗತ್ತಿನ ಹಲವು ರಾಷ್ಟ್ರಗಳು ಕಾಯುತ್ತಿದ್ದವು.
ವಾಯುಪಡೆ ಹಿನ್ನೆಲೆಯಲ್ಲಿ ಗುರುವಾರ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಹಿಂಡನ್ ಏರ್‌ಬೇಸ್‌ನಲ್ಲಿ ಸರಳ ಸಮಾರಂಭವನ್ನು ಆಯೋಜಿಸಲಾಗಿತ್ತು. ಇಲ್ಲಿ ಜಗತ್ತಿನ ಬಲಿಷ್ಠ ವಾಯುಪಡೆಗಳಲ್ಲಿ ಒಂದಾಗಿರುವ ಭಾರತೀಯ ವಾಯುಪಡೆಯ ಬಲ ಪ್ರದರ್ಶನಕ್ಕೆ ಜಗತ್ತು ಸಾಕ್ಷಿಯಾಯಿತು.
1932ರಲ್ಲಿ ಭಾರತೀಯ ವಾಯುಪಡೆ ಸ್ಥಾಪನೆಯಾಯಿತು. ಅಂದಿನಿಂದ ಐಎಎಫ್ ಹಲವಾರು ಪ್ರಮುಖ ಯುದ್ಧಗಳು ಮತ್ತು ಕಾರ್ಯಾಚರಣೆಗಳಲ್ಲಿ ಭಾಗಿಯಾಗಿ ಪ್ರ ಮುಖ ಪಾತ್ರ ವಹಿಸುತ್ತಾ ಬಂದಿದೆ. ವಿಶ್ವದಲ್ಲಿ ಇನ್ನು ಮುಂದೆ ನಡೆಯುವ ಯುದ್ಧದಲ್ಲಿ ವಾಯುಪಡೆಗಳೇ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬುದು ಸತ್ಯ. ಈ ಹಿನ್ನೆಲೆಯಲ್ಲಿ ಎಲ್ಲ ರಾಷ್ಟ್ರಗಳು ತನ್ನ ಗಡಿ ಸುರಕ್ಷತೆಗಾಗಿ ವಾಯುಪಡೆಯನ್ನು ಹೆಚ್ಚು ಬಲಿಷ್ಠ ಗೊಳಿಸಲು ಕಾರ್ಯಪ್ರವೃತ್ತವಾಗಿದೆ.
ಈ ಬಾರಿಯ ವಾಯುದಿನದ ವಿಶೇಷವಾಗಿ ಇದೇ ಮೊದಲ ಬಾರಿಗೆ ಕುಟುಂಬ ಹೊಸ ಸದಸ್ಯ ರಾಫೆಲ್ ಜೆಟ್ ಕೂಡ ಸಂಭ್ರಮದಲ್ಲಿ ಜತೆಯಾಯಿತು.ಮುಖ್ಯ ರಕ್ಷಣಾ ಸಿಬಂದಿ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರ್ವಾನೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ವಾಯುಪಡೆಯ ಮುಖ್ಯ ವಾಯು ಮುಖ್ಯಸ್ಥ ಮಾರ್ಷಲ್ ಆರ್ಕೆಎಸ್ ಭದೌರಿಯಾ ಉಪಸ್ಥಿತರಿದ್ದರು.
ಲಡಾಖ್ ಗಡಿಯಲ್ಲಿ ಪ್ರಸ್ತುತ ವಿವಾದದ ಮಧ್ಯೆ ನಮ್ಮ ವಾಯು ಪಡೆಯ ಯೋಧರು ಬಲಪ್ರದರ್ಶನಗೊಳಿಸಿದ್ದಾರೆ. ಈ ಬಾರಿ ಪ್ರದರ್ಶನದಲ್ಲಿ ರಫೇಲ್ ಸೇರಿದಂತೆ 56 ವಿಮಾನಗಳು ಭಾಗವಹಿಸಿದ್ದವು. ಫ್ಲೈ ಪಾಸ್ಟ್‌ನಲ್ಲಿ ರಫೇಲ್ ಮಾತ್ರವಲ್ಲದೆ, ಲಘು ಯುದ್ಧ ವಿಮಾನಗಳಾದ ತೇಜಸ್, ಜಾಗ್ವಾರ್ಸ್, ಮಿಗ್ -29, ಮಿಗ್ -21, ಸುಖೋಯ್ -30 ಸಹ ಭಾಗಿಯಾಗಿದ್ದವು.
ಪ್ರಧಾನಿ ನರೇಂದ್ರ ಮೋದಿ ಅವರು ವಾಯುಪಡೆಯ ಮಾಹಿತಿಗೆ ಸಂಬಂಧಿಸಿದ ವಿಡಿಯೋ ಹಂಚಿಕೊಳ್ಳುವ ಮೂಲಕ ಸೈನಿಕರನ್ನು ಅಭಿನಂದಿಸಿದ್ದಾರೆ. ವಾಯುಪಡೆಯ ದಿನದಂದು ಭಾರತೀಯ ವಾಯುಪಡೆಯ ಎಲ್ಲ ಧೈರ್ಯಶಾಲಿ ಯೋಧರಿಗೆ ಅಭಿನಂದನೆಗಳು. ನೀವು ದೇಶದ ವಾಯು ಪ್ರದೇಶವನ್ನು ಸುರಕ್ಷಿತವಾಗಿರಿಸುವುದಲ್ಲದೆ, ವಿಪತ್ತು ಸಮಯದಲ್ಲಿ ಮಾನವೀಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದೀರಿ. ನಿಮ್ಮ ಧೈರ್ಯ, ಶೌರ್ಯ ಮತ್ತು ಸಮರ್ಪಣೆ ಎಲ್ಲರಿಗೂ ಸ್ಫೂರ್ತಿ ನೀಡಲಿದೆ ಎಂದು ಹೇಳಿದ್ದಾರೆ.
ಅಧ್ಯಕ್ಷ ರಾಮನಾಥ್ ಕೋವಿಂದ್ ಅವರು “ನಮ್ಮ ವಾಯುಸೇನೆಯ ಸೈನಿಕರು ಮತ್ತು ಅವರ ಕುಟುಂಬಗಳ ಬಗ್ಗೆ ನಮಗೆ ಹೆಮ್ಮೆ ಇದೆ. ನಮ್ಮ ನೆಲವನ್ನು ರಕ್ಷಿಸುವ ಮತ್ತು ವಿಪತ್ತು ಎದುರಾದ ಸಂದರ್ಭ ನಮ್ಮನ್ನು ಕಾಪಾಡುವ ವಾಯುಪಡೆಗೆ ನಾಡು ಚಿರಋಣಿಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಇಂದು ಭಾರತೀಯ ವಾಯುಪಡೆ ದಿನ: ಐಎಎಫ್ ಜಗತ್ತಿನ ಬಲಿಷ್ಠ ವಾಯುಪಡೆ
ಜುಲೈ 29 ರಂದು ಭಾರತಕ್ಕೆ ಬಂದ 5 ರಾಫೆಲ್ 2 ಎಂಜಿನ್ ಹೊಂದಿರುವ ರಾಫೆಲ್ ಫೈಟರ್ ಜೆಟ್ 2 ಪೈಲಟ್‌ಗಳನ್ನು ಕೂರಿಸಬಹುದಾದ ಸಾಮರ್ಥ್ಯ ಹೊಂದಿದೆ. ಈ ಜೆಟ್ ಒಂದು ನಿಮಿಷದಲ್ಲಿ 60 ಸಾವಿರ ಅಡಿ ಎತ್ತರವನ್ನು ತಲುಪಬಹುದಾಗಿದೆ. ಈ ವರ್ಷ ಜುಲೈ 29 ರಂದು 5 ರಫೇಲ್ ಜೆಟ್‌ಗಳು ಫ್ರಾನ್ಸ್‌ನಿಂದ ಭಾರತಕ್ಕೆ ಬಂದವು. ಸೆಪ್ಟೆಂಬರ್ 10 ರಂದು ಅವುಗಳನ್ನು ವಾಯುಪಡೆಗೆ ಸೇರಿಸಲಾಗಿದೆ. ಇನ್ನು ಮುಂದೆ ಬರಲಿರುವ ರಫೇಲ್ ವಿಮಾನವನ್ನು ಅಂಬಲಾ ಮತ್ತು ಬಂಗಾಳದ ಹಸಿಮಾರ ವಾಯುನೆಲೆಯಲ್ಲಿ ಇರಿಸಲಾಗುತ್ತದೆ ಎಂಬ ಮಾಹಿತಿ ಇದೆ. ಹಸಿಮರ ವಾಯುನೆಲೆ ಚೀನ ಮತ್ತು ಭೂತಾನ್ ಗಡಿಗೆ ಹತ್ತಿರದಲ್ಲಿದೆ.