Advertisement

ಏರೋಸ್ಪೇಸ್ ಉತ್ಪನ್ನ ಉತ್ಪಾದನೆ ಶೇ.60 ಕ್ಕೆ ಏರಿಸುವ ಗುರಿ : ಸಿಎಂ ಬೊಮ್ಮಾಯಿ

07:38 PM Sep 03, 2021 | Team Udayavani |

ಬೆಂಗಳೂರು: ಕರ್ನಾಟಕ, ದೇಶದ ಶೇ. 40 ರಷ್ಟು  ಏರೋಸ್ಪೇಸ್ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು, ಇದನ್ನು ಶೇ.60 ಕ್ಕೆ ಏರಿಸುವುದು ನಮ್ಮ ಗುರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ತಿಳಿಸಿದರು.

Advertisement

ಇಂದು ನಡೆದ ಅಮೆರಿಕನ್ ಛೇಂಬರ್ ಆಫ್ ಕಾಮರ್ಸ್ನ ಇನ್ ಇಂಡಿಯಾ (ಆಮ್‌ಚಾಮ್) ಸಂಸ್ಥೆಯ 29 ನೇ ವಾರ್ಷಿಕ  ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು  ಮಾತನಾಡುತ್ತಿದ್ದರು.

ಆಮ್‌ಚಾಮ್ ಸಂಸ್ಥೆಯೊಂದಿಗೆ ಗುರುತಿಸಿಕೊಳ್ಳುವುದು ಕರ್ನಾಟಕಕ್ಕೆ  ಹೆಮ್ಮೆಯ ಸಂಗತಿ. ಕರ್ನಾಟಕವು ಅಮೆರಿಕಾದಂತೆಯೇ ಆಧುನಿಕ ತಂತ್ರಜ್ಞಾನದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನ ಸ್ಥಾನಮಾನ ಹೊಂದಿದೆ. ರಾಜ್ಯ  ಕೈಗಾರಿಕೋದ್ಯಮದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿದೆ. ಸ್ವಾತಂತ್ರ್ಯ ಪೂರ್ವದಿಂದಲೂ, ಖಾಸಗಿ ವಲಯದವರು ಇಲ್ಲದ ಸಂದರ್ಭದಲ್ಲಿ ಬಿ.ಹೆಚ್.ಇ.ಎಲ್, ಹೆಚ್.ಎಂ.ಟಿ ಮುಂತಾದ ಪ್ರಮುಖ ಸಂಸ್ಥೆಗಳು ಇಲ್ಲಿದ್ದವು ಎಂದರು.

ಭಾರತ ನಿರ್ಮಾಣದಲ್ಲಿ ಕರ್ನಾಟಕ ರಾಜ್ಯ ತನ್ನದೇ ಕೊಡುಗೆ ನೀಡಿದೆ.  ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿಯೂ ಕರ್ನಾಟಕ ಪ್ರಮುಖ ಪಾತ್ರವನ್ನು ವಹಿಸಿದೆ. ಅತಿ ಹೆಚ್ಚು ಉಪಗ್ರಹಗಳನ್ನು ಉಡಾಯಿಸುವ  ಇಸ್ರೋ  ತನ್ನ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿ ಹೊಂದಿದೆ. ರಾಜ್ಯದಲ್ಲಿ ಅತಿ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜುಗಳಿದ್ದು, ಐಐಟಿ, ಐಐಎಂ ಹಾಗೂ ಐಐಎಸ್ಸಿ ಮುಂತಾದ ಶ್ರೇಷ್ಠ ಕಾಲೇಜುಗಳನ್ನು ಬೆಂಗಳೂರು ಹೊಂದಿದೆ. ಇವುಗಳು ರಾಜ್ಯದ ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿ ಯಲ್ಲಿರುವ ರಾಜ್ಯ. ನೀತಿ ಆಯೋಗದ ಸೂಚ್ಯಂಕದಲ್ಲಿ ಕರ್ನಾಟಕ ೨೦೧೯ ಹಾಗೂ ೨೦೨೦ರಲ್ಲಿ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಅಮೆರಿಕ  ಮತ್ತು ಕರ್ನಾಟಕದ ಮಧ್ಯೆ ಉತ್ತಮ ಸಂಬಂಧವಿದ್ದು, ಈ ಸಂಬಂಧವು ಸಂಸ್ಕೃತಿ ಹಾಗೂ ಚಿಂತನೆಗಳಲ್ಲಿ  ನಾವೀನ್ಯತೆಯನ್ನು ತರುವಲ್ಲಿ ಸಹಕಾರಿಯಾಗಲಿದೆ. ಕರ್ನಾಟಕದೊಂದಿಗಿನ ಸಹಭಾಗಿತ್ವವು ಅಮೆರಿಕಾ ಹಾಗೂ ಕರ್ನಾಟಕಕ್ಕೆ ಲಾಭದಾಯಕವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Advertisement

ಕೋವಿಡ್ 19 ಸಾಂಕ್ರಾಮಿಕವು  ಸವಾಲುಗಳ ಜೊತೆ ಅವಕಾಶಗಳನ್ನೂ ಒದಗಿಸಿದೆ ಎಂದ ಅವರು, ಕೋವಿಡ್ ಸಂದರ್ಭದಲ್ಲಿ ನೆರವಿಗೆ ನಿಂತ ಅಮೆರಿಕ ಹಾಗೂ ಉಳಿದ ಎಲ್ಲ  ಖಾಸಗಿ ವಲಯದ ಸಂಸ್ಥೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಅಮೆರಿಕಾ ಹೊಸ ತಂತ್ರಜ್ಞಾನ ಮತ್ತು ನಾವೀನ್ಯತೆಯ ಮೂಲಕ ಮನುಕುಲದ ಏಳಿಗೆಗೆ ಬದ್ಧವಾಗಿರುವುದನ್ನು ಶ್ಲಾಘಿಸಿದರು.

ಕರ್ನಾಟಕದಲ್ಲಿ ಹೂಡಿಕೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡುವುದಾಗಿ ಭರವಸೆಯಿತ್ತ ಮುಖ್ಯಮಂತ್ರಿಗಳು, ಆರ್ಥಿಕತೆಯಲ್ಲಿ ಯಾವುದೇ ಚಮತ್ಕಾರ ಸಾಧ್ಯವಿಲ್ಲ, ಕೇವಲ ಫಲಿತಾಂಶ ಮಾತ್ರ ಎಂದು ಅರಿತಿದ್ದು, ಜಾಗತಿಕ ಆರ್ಥಿಕತೆಯಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳಲು ಕರ್ನಾಟಕ ಶ್ರಮಿಸುತ್ತಿದೆ ಎಂದರು. ಮುಂಬರುವ ದಿನಗಳಲ್ಲಿ ಆಮ್‌ಚಾಮ್‌ನ ಸಹಕಾರದಿಂದ  ನಾವೀನ್ಯತೆಯಲ್ಲಿ ಕರ್ನಾಟಕ ಹೆಚ್ಚಿನ ಸಾಧನೆ ಮಾಡುವ ಇಂಗಿತವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next