Advertisement
ಅಧಿಕಾರ ಸ್ವೀಕರಿಸಿ ಮಾತನಾಡಿದ ಸುನೀಲ್ ಕುಮಾರ್, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮೊದಲ ಆದ್ಯತೆ ನೀಡುವ ಜತೆಗೆ, ಅಪರಾಧ ತಡೆ, ಅಪರಾಧ ಪತ್ತೆ ಹಾಗೂ ಹೆಣ್ಣು ಮಕ್ಕಳ ಸುರಕ್ಷತೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಹದ್ಯೋಗಿಗಳಿಗೆ ಸೂಚಿಸಲಾಗುವುದು. ಈ ಮೂಲಕ ನಗರದಲ್ಲಿ ಶಾಂತಿ ಕಾಪಾಡಲು ಕ್ರಮ ಕೈಗೊಂಡು ಜನರ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇವೆ. ಒಟ್ಟಾರೆ ಜನಸ್ನೇಹಿಯಾಗಿ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಸೈಬರ್ ಅಪರಾಧಗಳನ್ನು ತಡೆಗಟ್ಟುವ ದೃಷ್ಟಿಯಿಂದ ರಾಜ್ಯದ್ಯಂತ ಎಲ್ಲೆಡೆ ಸೈಬರ್ ಠಾಣೆ ತೆರೆಯಲು ಸರ್ಕಾರ ಮುಂದಾಗಿದೆ. ಇಸೈಬರ್ ಅಪರಾಧಗಳನ್ನು ನಿರ್ವಹಿಸುವ ಸಿಬ್ಬಂದಿಗೆ ಇನ್ನಷ್ಟು ತರಬೇತಿ ನೀಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನುರಿತ ಸೈಬರ್ ತಜ್ಞರಿಂದ ತರಬೇತಿ ನೀಡಲಾಗುವುದು. ಹಾಗೆಯೇ ಪಿಂಕ್ ಹೊಯ್ಸಳ, ಹೊಯ್ಸಳ, ನಮ್ಮ-100ಗೆ ಇನ್ನಷ್ಟು ಸಿಬ್ಬಂದಿ ನಿಯೋಜಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.
Related Articles
ನಗರದಲ್ಲಿ ನಡೆಯುತ್ತಿರುವ ಸರಕಳುವಿನ ಬಗ್ಗೆ ಮಾಹಿತಿಯಿದೆ. ಸ್ಥಳೀಯರು ಮಾತ್ರವಲ್ಲದೇ ಹೊರ ರಾಜ್ಯದ ಕಳ್ಳರು ಕೂಡ ಸರಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಈ ಹಿನ್ನೆಲಯಲ್ಲಿ ಸರಕಳವು ಪ್ರಕರಣಗಳು ನಿಗದಿತ ಸಮಯಕ್ಕೆ ಸರಿಯಾಗಿ ಪತ್ತೆಯಾಗುತ್ತಿಲ್ಲ. ಈ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇವೆ.
Advertisement
ಮೂಲ ಆಂಧ್ರ; ಸೇವೆ ಕರುನಾಡಲ್ಲೇ!ಆಂಧ್ರಪ್ರದೇಶದ ಚಿತ್ತೂರಿನಲ್ಲಿ 1960ರಲ್ಲಿ ಜನಿಸಿದ ಸುನೀಲ್ ಕುಮಾರ್ ತೋಟಗಾರಿಕೆಯಲ್ಲಿ ಎಂಎಸ್ಸಿ ಪೂರೈಸಿದ್ದಾರೆ. ಬಳಿಕ 1989ರಲ್ಲಿ ಐಪಿಎಸ್ ಉತ್ತೀರ್ಣರಾದ ಅವರು, ಕರ್ನಾಟಕ ಕೆಡರ್ ಅಧಿಕಾರಿಯಾಗಿ ನೇಮಕಗೊಂಡರು. ಬೀದರ್‌ನ ಹುಮ್ನಾಬಾದ್‌ನಲ್ಲಿ ಸಹಾಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಆರಂಭಿಸಿದರು. ನಂತರ ಬಡ್ತಿ ಪಡೆದು ಕೆಜಿಎಫ್ ಮತ್ತು ರಾಯಚೂರಿನಲ್ಲಿ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಬೆಂಗಳೂರು ಕಮಿಷನರೇಟ್‌ಗೆ ವರ್ಗಾವಣೆಗೊಂಡ ಸುನೀಲ್ ಕುಮಾರ್, ದಕ್ಷಿಣ ವಿಭಾಗ ಡಿಸಿಪಿಯಾಗಿ, ನಂತರ ಬಡ್ತಿ ಪಡೆದು ಅಗ್ನಿ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಐಜಿಯಾದರು. ಮುಂಬಡ್ತಿ ಪಡೆದು ಗೃಹ ಇಲಾಖೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 2010ರಲ್ಲಿ ನಗರ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಮುಂಬಡ್ತಿ ಪಡೆದುಕೊಂಡರು. ಬಳಿಕ ಉಡುಪಿ ವಿಭಾಗದ ನಕ್ಸಲ್ ನಿಗ್ರಹ ಪಡೆಯು ಮುಖ್ಯಸ್ಥರಾಗಿದ್ದರು. ಬಿಎಂಟಿಎಫ್, ಆಂತರಿಕ ಭದ್ರತಾ ಪಡೆ, ಬಿಎಂಟಿಎಫ್ನ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿಯೂ ಹಾಗೂ ಇತ್ತೀಚೆಗೆ ಪೊಲೀಸ್ ವಸತಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ವರ್ಗಾವಣೆ ವಿಷಯ ಕೇಳಿ ಶಾಕ್ ಆಯ್ತು!
“ವರ್ಗಾವಣೆ ವಿಚಾರ ನನಗೂ ತಿಳಿದಿರಲಿಲ್ಲ. ಈ ವಿಚಾರ ಕೇಳಿ ಶಾಕ್ ಆಯ್ತು. ಆದರೂ ಸರ್ಕಾರದ ಆದೇಶ ಪಾಲಿಸುವುದು ಅಧಿಕಾರಿಯಾಗಿ ನನ್ನ ಕರ್ತವ್ಯ. ಈ ಹಿಂದೆ ಪೊಲೀಸ್ ಆಯುಕ್ತನಾಗಿ ನೇಮಕ ಮಾಡಿದಾಗಲೂ ನಾನು ಯಾಕೆ ಎಂದು ಕೇಳಿಲ್ಲ. ಈಗಲೂ ಕೇಳುವುದಿಲ್ಲ. ಸಂತೋಷದಿಂದ ಅಧಿಕಾರ ಸ್ವೀಕರಿಸುತ್ತೇನೆ,’ ಎಂದವರು ಸಂವಹನ, ಲಾಜಿಸ್ಟಿಕ್ ಮತ್ತು ಆಧುನೀಕರಣ ವಿಭಾಗಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ನಿಯೋಜನೆಗೊಂಡ ಪ್ರವೀಣ್ ಸೂದ್. ಲಂಡನ್ ಮಾದರಿ ಪೊಲೀಸ್ ಸಹಾಯವಾಣಿಯನ್ನು “ನಮ್ಮ-100′ ಆಗಿ ಅಭಿವೃದ್ಧಿಗೊಳಿಸಿದ ಪ್ರವೀಣ್ ಸೂದ್, ತಾವು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ನಿರ್ಗಮಿಸುವ ಮೊದಲು ಕೇಂದ್ರಕ್ಕೆ ಭೇಟಿ ನೀಡಿ ಸಿಬ್ಬಂದಿಯನ್ನು ಅಭಿನಂದಿಸಿದರು. “ನನ್ನ ಕನಸಿಗೆ ಬೆನ್ನುಲುಬಾದ ಎಲ್ಲರಿಗೂ ಧನ್ಯವಾದಗಳು. ಸಾರ್ವಜನಿಕರ ರಕ್ಷಣೆಯೇ ನಮ್ಮ ಉದ್ದೇಶ. ಅದೇ ಆಶಯದಂತೆ ಕೆಲಸ ಮಾಡಿ,’ ಎಂದು ಸಲಹೆ ನೀಡಿದರು. ಆಶಿಶ್ ಮೋಹನ್ ಪ್ರಸಾದ್ ವರ್ಗಾವಣೆ
ಸಂವಹನ, ಲಾಜಿಸ್ಟಿಕ್ ಮತ್ತು ಆಧುನೀಕರಣ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ 1985ನೇ ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿ ಆಶಿಶ್ ಮೋಹನ್ ಪ್ರಸಾದ್ ಅವರನ್ನು ರಾಜ್ಯ ಗುಪ್ತಚರ ಇಲಾಖೆಯ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರಾದ ಪ್ರವೀಣ್ ಸೂದ್ ಅವರನ್ನು ನಿಯೋಜನೆಗೊಳಿಸಿದೆ. ಸುದೀರ್ಘ ಸಭೆ ನಡೆಸಿದ ನೂತನ ಆಯುಕ್ತರು
ಬೆಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ಟಿ.ಸುನೀಲ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ 11 ಮಂದಿ ಡಿಸಿಪಿಗಳ ಜತೆ ಸುಮಾರು ಒಂದೂವರೆ ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ನಗರದ ಕಾನೂನು ಸುವ್ಯವಸ್ಥೆ, ಅಪರಾಧ ಚಟುವಟಿಕೆ, ಸುರಕ್ಷತೆ ಹಾಗೂ ಬಹುಮುಖ್ಯವಾದ ಹಳೇ ಪ್ರಕರಣಗಳ(ಕಡಬಗೆರೆ ಶ್ರೀನಿವಾಸ್ ಹಲ್ಲೆ ಪ್ರಕರಣ, ಕನ್ನಡ ಪರ ಸಂಘಟನೆಗಳ ವಿರುದ್ಧ ದಾಖಲಾದ ಎಫ್ಐಆರ್ ಸೇರಿದಂತೆ) ಸರಕಳವು ಪ್ರಕರಣಗಳ ಹಾಗೂ ರಸ್ತೆ ಸುರಕ್ಷತೆ, ಸಂಚಾರ ವ್ಯವಸ್ಥೆ ಬಗ್ಗೆ ಸುದೀರ್ಘ ಒಂದೂವರೆ ಗಂಟೆಗಳ ಕಾಲ ಚರ್ಚಿಸಿದ್ದಾರೆ. ಇದೇ ವೇಳೆ ಮುಂದೆ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬುದರ ಬಗ್ಗೆಯೂ ಸಹೋದ್ಯೋಗಿಗಳಿಂದ ಮಾಹಿತಿ ಪಡೆದ ಅವರು, ಎಲ್ಲ ಡಿಸಿಪಿಗಳಿಗೆ ಕಾನೂನು ಸುವ್ಯವಸ್ಥೆ ಹಾಗೂ ಅಫರಾಧ ಕೃತ್ಯಗಳು, ಕೆಲ ಹಳೇ ರೌಡಿಶೀಟರ್‌ಗಳ ಚಟುವಟಿಕೆಗಳ ಬಗ್ಗೆ ನಿಗಾವಹಿಸುವಂತೆ,. ಪ್ರಮುಖವಾಗಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತರಾಗಿರುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಜತೆ ಪ್ರತ್ಯೇಕವಾಗಿ ಸುಮಾರು 15-20 ನಿಮಿಷಗಳ ಕಾಲ ಕೆಲ ಪ್ರಮುಖ ಪ್ರಕರಣಗಳ ಬಗ್ಗೆ ಚರ್ಚಿಸಿದ್ದು, ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಸಭೆ ನಡೆಸಿದ ಬಳಿಕ ಸುನೀಲ್ ಕುಮಾರ್ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ಅವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕಡಿಮೆ ಅವಧಿಯಲ್ಲಿ ವರ್ಗವಾದವರು
ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ ವರ್ಗಾವಣೆ ಪಟ್ಟಿಯಲ್ಲಿ ಪ್ರವೀಣ್ ಸೂದ್ ಮಾತ್ರವಲ್ಲದೇ, ಈ ಹಿಂದೆಯೂ ಇಬ್ಬರು ಆಯುಕ್ತರು ಕೆಲವೇ ತಿಂಗಳಲ್ಲಿ ವರ್ಗಾವಣೆಯಾಗಿದ್ದಾರೆ. 1976ರಲ್ಲಿ ಟಿ. ಅಲ್ಬರ್ಟ್ ಕೇವಲ ನಾಲ್ಕೇ ತಿಂಗಳು ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು 80ರ ದಶಕದಲ್ಲಿ ಬಾಲಕೃಷ್ಣರಾಜು ಅವರು ಕೇವಲ 11 ತಿಂಗಳಲ್ಲೇ ವರ್ಗಾವಾಣೆಯಾಗಿದ್ದಾರೆ.