ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಏಮ್ಸ್ ಬಂದರೆ ಉತ್ತಮ. ಕೇಂದ್ರ ಸರ್ಕಾರ ಯಾವ ನಿರ್ಣಯ ಕೈಗೊಳ್ಳುತ್ತದೆ ಎಂದು ನೋಡೋಣಾ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದರು.
ರಾಜ್ಯದಲ್ಲಿ ಎರಡು ಏಮ್ಸ್ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಮನವಿ ಮಾಡಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಒಂದು, ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೊಂದು ಕೊಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಈ ಬಗ್ಗೆ ನಿನ್ನೆ ವಿತ್ತ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ನಿನ್ನೆ ಕೋವಿಡ್ ಬಗ್ಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಕಲಬುರಗಿ ಜಿಲ್ಲೆ ಕೂಡಾ ಗಡಿಜಿಲ್ಲೆಯಾಗಿದೆ. ಹೀಗಾಗಿ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ಬಿಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೊರ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಾಳೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಪ್ರಮುಖವಾಗಿ ಲಾಕ್ ಡೌನ್ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದರು.
ಮೀಸಲಾತಿಗಾಗಿ ಪಂಚಮಸಾಲಿ ಸಮಾಜ ಹೋರಾಟ ವಿಚಾರ ಕಾನೂನು ವ್ಯಾಪ್ತಿಯಲ್ಲಿ ತೀರ್ಮಾನ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಕಾನೂನು ತಜ್ಞರ ವರದಿ ಪಡೆದು ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ. ಸೌಲಭ್ಯಗಳಿಂದ ವಂಚಿತ ಸಮುದಾಯಗಳಿಗೆ ನ್ಯಾಯ ದೊರಕಿಸಿ ಕೊಡುತ್ತಾರೆ ಎಂದರು.
ಇದನ್ನೂ ಓದಿ:ದೇಣಿಗೆ ನೀಡುವುದಿಲ್ಲವಾದರೆ ಸಿದ್ದು, HDK ಬಾಯಿ ಮುಚ್ಚಿಕೊಂಡು ತೆಪ್ಪಗಿರಲಿ: ಪ್ರಹ್ಲಾದ್ ಜೋಶಿ
ಸಮಯ ನಿಗದಿ ಮಾಡಿ ಸರ್ಕಾರಕ್ಕೆ ಒತ್ತಾಯ ಮಾಡುವುದು ಸರಿಯಲ್ಲ. ಮೀಸಲಾತಿ ಬಹಳ ಸೂಕ್ಷ್ಮ ವಿಷಯವಾಗಿದೆ. ಯಾವುದೇ ಸಮುದಾಯಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ನಂತರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವರು, ರಾಜ್ಯದ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಏಮ್ಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.