ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದ ಗೆಲವು ಸಾಧಿಸಿದೆ. ಮೂರೂವರೆ ವರ್ಷ ಸರ್ಕಾರ ಮತ್ತು ಸಂಘಟನೆ ಒಟ್ಟಾಗಿ ಸಾಗುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸೀಟು ಗೆಲ್ಲಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸುವಷ್ಟು ಅಂತರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಹುತೇಕ ಅಭ್ಯರ್ಥಿಗಳು 45ರಿಂದ 50 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಗೆಲ್ಲಲೇ ಬೇಕು. ಇದಕ್ಕಾಗಿ ಈಗಿಂದಲೇ ಸಂಘಟನೆ ಕಾರ್ಯ ಆರಂಭಿಸಬೇಕು ಎಂದು ಕರೆ ನೀಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಬಗ್ಗೆ ಟೀಕೆ ಮಾಡುವುದು ಬೇಡ. ಉತ್ತರ ಕರ್ನಾಟಕ ಭಾಗದಲ್ಲಿ ಈ ಎರಡೂ ಪಕ್ಷ ಜನರಿಗೆ ಉತ್ತರ ನೀಡಲಾಗದ ಸ್ಥಿತಿಗೆ ಬಂದಿವೆ. ಆ ಪಕ್ಷಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮ ಸಂಘಟನೆ ಬಲಪಡಿಸಿ, ಅಭಿವೃದ್ಧಿ ಕಾರ್ಯಕ್ಕೆ ಗಮನ ನೀಡಬೇಕು. ಕರ್ನಾಟಕ ಅಭಿವೃದ್ಧಿಯಲ್ಲಿ ಮಾದರಿ ರಾಜ್ಯವಾಗಿ ಬೆಳೆಯಬೇಕು ಎಂದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಮತದಾರರು ಬೊಂಬಾಟ್ ಗೆಲುವು ಬಿಜೆಪಿಗೆ ನೀಡಿದ್ದಾರೆ. ಹೊಸಕೋಟೆ ಗೆಲ್ಲಬೇಕಾಗಿತ್ತು. ನಮ್ಮ ಪಕ್ಷದವರೇ ದ್ರೋಹ ಬಗೆದಿದ್ದರಿಂದ ಹೀಗಾಗಿದೆ. ಕ್ರಮ ತೆಗೆದುಕೊಳ್ಳಲಿದ್ದೇವೆ. ಉಪಚುನಾವಣೆಯಲ್ಲಿ ಪಕ್ಷವು ಒಂದು ತಂಡವಾಗಿ ಕೆಲಸ ಮಾಡಿದೆ. ಸಿದ್ದರಾಮಯ್ಯನವರ ಜ್ಯೋತಿಷ್ಯಾಲಯ ಮುಚ್ಚಿಹೋಗಿದೆ. ದಿನೇಶ್ ಗುಂಡೂರಾವ್ ಬಾಯಿ ಮುಚ್ಚಿಕೊಂಡಿದ್ದಾರೆ.
ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ. ರೇವಣ್ಣನ ಲಿಂಬೆಕಾಯಿ ಪತ್ತೆ ಇಲ್ಲ ಎಂದು ಲೇವಡಿ ಮಾಡಿದರು. ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಲಿಂಬಾವಳಿ, ಗೋಪಾಲಯ್ಯ, ವಿಧಾನ ಪರಿಷತ್ ಸದಸ್ಯರಾದ ತೇಜಸ್ವಿನಿ ಗೌಡ, ಎನ್.ರವಿಕುಮಾರ್, ಮಾಜಿ ಸಚಿವ ರಾಮಚಂದ್ರ ಗೌಡ ಉಪಸ್ಥಿತರಿದ್ದರು.
ಉಪಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿರುವುದಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲು ಹಾಗೂ ಸಮಸ್ತ ಕಾರ್ಯಕರ್ತರಿಗೆ ಅಭಿನಂದನೆಗಳು. ಬಿಜೆಪಿಯ ಮೇಲೆ ಅಚಲ ನಂಬಿಕೆ ಇಟ್ಟಿರುವ ಕರ್ನಾಟಕದ ಜನತೆಗೆ ಧನ್ಯವಾದಗಳು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದ ನಿರಂತರ ಅಭಿವೃದ್ದಿಗೆ ಬದ್ಧವಾಗಿದೆ.
-ಅಮಿತ್ ಶಾ, ಕೇಂದ್ರ ಗೃಹ ಸಚಿವ
ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದ ಜನತೆ ಬಿಜೆಪಿಗೆ ಜನಾದೇಶ ನೀಡಿದ್ದರು. ಈ ಉಪಚುನಾವಣೆ ಯಲ್ಲಿ ಜನಾದೇಶದ ಮೇಲೆ ಗೆಲುವಿನ ಮುದ್ರೆ ಒತ್ತಿದ್ದಾರೆ. ಸಿಎಂಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಮತ್ತು ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ.
-ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ