ಬೀದರ: ಮುಂಜಾಗ್ರತೆ ವಹಿಸಿದಲ್ಲಿ ಎಚ್‌ಐವಿ-ಏಡ್ಸ್ ರೋಗ ಹರಡದಂತೆ ನಿಯಂತ್ರಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶ ಎಂ.ಎಸ್.ಪಾಟೀಲ ಹೇಳಿದರು. ನಗರದ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಿಂದ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಿಲೆ ಪೀಡಿತರು ಎಚ್‌ಐವಿ-ಏಡ್ಸ್ ಮಾರಕ ರೋಗವೆಂದು ಚಿಂತೆಗೆ ಒಳಗಾಗದೇ ಸಂಯಮ ಮತ್ತು ಧೈರ್ಯದಿಂದ ಜೀವನ ನಡೆಸಬೇಕು. ರೋಗ ಪೀಡಿತರನ್ನು ನಿರ್ಲಕ್ಷಿಸದೇ ಎಲ್ಲರಂತೆ ಗೌರವದಿಂದ ಕಾಣುವ ಮನೋಭಾವ ಎಲ್ಲರಲ್ಲಿ ಬೆಳೆಯಬೇಕು. ಪೀಡಿತರು ಮಾನಸಿಕವಾಗಿ ಖನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇವರಿಗೆ ಮಾನಸಿಕ ಧೈರ್ಯ ನೀಡಲು ಮುಂದಾಗಬೇಕು. ಚಿಕಿತ್ಸೆಗೆ ನಿಸ್ವಾರ್ಥದಿಂದ ಸಹಕರಿಸಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆರ್.ಸೆಲ್ವಮಣಿ ಮಾತನಾಡಿ, ಎಚ್‌ಐವಿ ರೋಗ ಕುರಿತು ಜನರಲ್ಲಿ ಇನ್ನಷ್ಟು ತಿಳುವಳಿಕೆ ಮೂಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಜಿಲ್ಲೆಯಲ್ಲಿ ಎಚ್‌ಐವಿಯನ್ನು ಸೊನ್ನೆಗೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮ ವಹಿಸಬೇಕಿದೆ ಎಂದು ಹೇಳಿದರು. ಬ್ರಿಮ್ಸ್ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಸಿ.ಎಸ್. ರಗಟೆ ಮಾತನಾಡಿ, ದೇಶದಲ್ಲಿ ಏಡ್ಸ್ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ.
ರಾಜ್ಯದಲ್ಲಿಯೂ ರೋಗ ಪ್ರಮಾಣ ತಗ್ಗಿದೆ. ಆದರೆ ಎಚ್‌ಐವಿಯನ್ನು ಸೊನ್ನೆಗೆ ತರುವ ಅಗತ್ಯವಿದೆ. ಎಚ್ ಐವಿಯು ವೈರಸ್‌ನಿಂದ ಬರುವ ರೋಗವಾಗಿದ್ದು, ಶೇ.85ರಷ್ಟು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುತ್ತದೆ ಎಂದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ| ಮಾರ್ತಾಂಡರಾವ್ ಖಾಶೆಂಪೂರಕರ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್. ರಾಘವೇಂದ್ರ, ಚರ್ಮರೋಗ ತಜ್ಞ ಡಾ| ಅಶೋಕ ನಾಗೂರೆ ಅವರು ಮಾತನಾಡಿದರು. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್. ರಾಘವೇಂದ್ರ ಅವರು ಏಡ್ಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು. ಡಿಎಚ್‌ಒ ಡಾ| ಎಂ.ಎ. ಜಬ್ಟಾರ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ| ದೀಪಾ ಖಂಡ್ರೆ, ಕಾರ್ಯಕ್ರಮ ಅಧಿಕಾರಿ ಡಾ| ಬಿ. ಶಿವಶಂಕರ, ಡಾ| ರಾಜಶೇಖರ ಪಾಟೀಲ, ಡಾ| ಅನೀಲ ಚಿಂತಾಮಣಿ, ಡಾ| ಇಂದುಮತಿ ಪಾಟೀಲ, ಡಾ| ರವೀಂದ್ರ ಸಿರ್ಸೆ ಸೇರಿದಂತೆ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗಮನಸೆಳೆದ ಜಾಗೃತಿ ಜಾಥಾ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಜಾಗ್ರತಿ ಜಾಥಾ ಗಮನ ಸೆಳೆಯಿತು. ಜಿಪಂ ಸಿಇಒ ಡಾ| ಆರ್.ಸೆಲ್ವಮಣಿ ಅವರು ಜಾಥಾಗೆ ಚಾಲನೆ ನೀಡಿದರು. ಜಾಥಾ ಡಿಎಚ್‌ಒ ಕಚೇರಿಯಿಂದ ಹೊರಟು ಕನ್ನಡಾಂಬೆ ವೃತ್ತ ಹಾಗೂ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾ ರಂಗಮಂದಿರಕ್ಕೆ ತೆರಳಿ ಮುಕ್ತಾಯಗೊಂಡಿತು. ಏಡ್ಸ್ ನಿಯಂತ್ರಣದ ಕುರಿತ ಘೋಷಣೆಗಳನ್ನು ಕೂಗುತ್ತ ಜಾಗೃತಿ ಮೂಡಿಸಲಾಯಿತು. ಬಿವಿಬಿ ಕಾಲೇಜು, ಎಸ್‌ಜಿಎನ್ ನರ್ಸಿಂಗ್ ಕಾಲೇಜು, ಸಿದ್ಧಾರ್ಥ ಕಾಲೇಜು, ಜಾಬ್ಬಶೆಟ್ಟಿ ಆಯುರ್ವೇದಿಕ್ ಕಾಲೇಜು, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಸಾಯಿ ಆದರ್ಶ ಪ್ರೌಢ ಶಾಲೆ, ಸಿದ್ಧಾರ್ಥ ಪ್ರೌಢಶಾಲೆ ಹಾಗೂ ಪನ್ನಲಾಲ್ ಹಿರಾಲಾಲ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.