ಮುದ್ದೇಬಿಹಾಳ: ಮನುಷ್ಯನ ಕೈಗಳಿಗೆ ಬೆಲೆ ಬರುವುದು ಆತ ದಾನ, ಧರ್ಮ, ಮಾನವೀಯತೆಯ ನೆರವಿನ ಮನೋಭಾವ ಮೈಗೂಡಿಸಿಕೊಂಡಾಗಲೇ ಹೊರತು ಅನ್ಯ ಕಾರ್ಯ ಮಾಡಿದಾಗಲ್ಲ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ದೇವರು ನುಡಿದರು.
ಮುದ್ದೇಬಿಹಾಳ ತಾಲೂಕಿನ ಇಣಚಗಲ್ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದ ಗ್ರಾಮದೇವತೆಯ ಮೂರ್ತಿ ಪ್ರತಿಷ್ಠಾಪನೆ, ದೇವಾಲಯದ ಕಟ್ಟಡದ ಉದ್ಘಾಟನೆ ಹಾಗೂ ಧರ್ಮಸಭೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಕಣ್ಣುಗಳಿಗೆ ಬೆಲೆ ಬರುವುದು ಲಿಂಗವನ್ನು ಪೂಜಿಸು ವುದರಿಂದ, ಕಿವಿಗಳಿಗೆ ಬೆಲೆ ಬರುವುದು ಶಿವನ ನುಡಿಗಳನ್ನು ಆಲಿಸುವುದರಿಂದ ಅಂತೆಯೆ ಕೈಗಳಿಗೆ ಬೆಲೆ ಬರುವುದು ದಾನ ಧರ್ಮಗಳಿಂದ ಎನ್ನುವುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು ಎಂದರು.
ಜಾಗತೀಕರಣದ ಪ್ರಭಾವದಿಂದಾಗಿ ಮಾನವೀಯ ಸಂಬಂಧಗಳು ಸ್ವಾರ್ಥಕ್ಕೆ ಸಿಲುಕಿ ನಶಿಸಿ ಹೋಗುತ್ತಿವೆ. ಮಾನವನ ಬದುಕು ಯಾಂತ್ರಿಕವಾಗಿ ಧರ್ಮದಿಂದ, ಸತ್ ಕರ್ಮಗಳಿಂದ ದೂರವಾಗುತ್ತಿದೆ. ಮನುಷ್ಯನಿಗೆ ಬೆಲೆ ಬರುವುದು ಮಾನವೀಯತೆಯ ಗುಣಗಳಿಂದ ಮಾತ್ರ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ನಾನು ಜಿಪಂ ಉಪಾಧ್ಯಕ್ಷನಾಗಿದ್ದ ಅವ ಧಿಯಲ್ಲಿ ದೇವಸ್ಥಾನಕ್ಕೆ 1.40 ಲಕ್ಷ ರೂ. ಅನುದಾನ ನೀಡಿದ್ದೇನೆ. ಈ ಊರಿನ ಜನ ನನಗೆ ಓಟು ಹಾಕಿ ಜಿಪಂ ಸದಸ್ಯನಾಗಿ ಗೆಲ್ಲಿಸಿದ್ದರಿಂದ ಅದಕ್ಕೆ ಪ್ರತಿರೂಪವಾಗಿ ಈ ಅನುದಾನ ನೀಡಿದ್ದೇನೆಯೇ ಹೊರತು ನಾ ಏನು ಹಾಗೇ ನೀಡಿಲ್ಲ. ನೀವು ಓಟು ಹಾಕಿದ್ರಿ, ನಾ ಅದಕ್ಕ ಅನುದಾನ ಕೊಟ್ಟೆ. ನಿಮ್ಮೂರಿನ ಯಾವುದೇ ಸೇವೆಗೆ ನಾನು ಸದಾ ಸಿದ್ಧ ಎಂದರು.
ಕುಂಟೋಜಿ ಗ್ರಾಪಂ ಅಧ್ಯಕ್ಷ ಶಿವಬಸು ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ಅಧ್ಯಕ್ಷ ಸತೀಶಕುಮಾರ ಓಸ್ವಾಲ, ಗ್ರಾಪಂ ಸದಸ್ಯ ಶಾಂತಪ್ಪ, ಪಿಡಿಒ ಆನಂದ ಹಿರೇಮಠ, ಗ್ರಾಮದ ಪ್ರಮುಖರು ಸೇರಿ ಹಲವರು ವೇದಿಕೆಯಲ್ಲಿದ್ದರು. ಕಾರ್ಯಕ್ರಮಕ್ಕೂ ಮುನ್ನ ದೇವಿಯ ಮೂರ್ತಿಯನ್ನು ಗಂಗಸ್ಥಳಕ್ಕೆ ಕರೆದೊಯ್ದು ಮೆರವಣಿಗೆ ಮೂಲಕ ಮರಳಿ ಕರೆ ತಂದು ಪ್ರತಿಷ್ಠಾಪಿಸಲಾಯಿತು. ಮುತ್ತೈದೆಯರು ದೇವತೆಗೆ ಉಡಿ ತುಂಬಿ ಭಕ್ತರು ಹರ್ಷ ಪಟ್ಟರು. ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಊರಿನಲ್ಲೆಲ್ಲ ಸಕಲ ವಾದ್ಯ ವೈಭವಗಳೊಂದಿಗೆ ಸಂಚರಿಸಿ ಸಾಕಷ್ಟು ಮೆರುಗು ತಂದುಕೊಟ್ಟಿತು.