ಜಿನೇವಾ: ಜಗತ್ತಿನ ಎಂಟನೇ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕ್ರೆಡಿಟ್ ಸೂಸಿ ಪತನದ ಭೀತಿಯಿಂದ ಸದ್ಯಕ್ಕೆ ಪಾರಾಗಿದೆ. ಸ್ವಿಜರ್ಲೆಂಡ್‌ನ ಸೆಂಟ್ರಲ್ ಬ್ಯಾಂಕ್‌ನಿಂದ 54 ಬಿಲಿಯನ್ ಡಾಲರ್ ವಿತ್ತೀಯ ನೆರವು ಪಡೆದ ಬಳಿಕ ಬ್ಯಾಂಕ್‌ನ ಷೇರುಗಳು ಚೇತರಿಸಿಕೊಂಡಿವೆ. ಇದರಿಂದಾಗಿ ಆ ಬ್ಯಾಂಕ್‌ನ ಷೇರುದಾರರು, ಹೂಡಿಕೆದಾರರ ವಿಶ್ವಾಸ ವೃದ್ಧಿಯಾಗಿದೆ. ಸಿಲಿಕಾನ್ ವ್ಯಾಲಿ ಮತ್ತು ಸಿಗ್ನೇಚರ್ ಬ್ಯಾಂಕ್ ಪತನದ ಬಳಿಕ ಜ್ಯೂರಿಚ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕ್ರೆಡಿಟ್ ಸೂಸಿ ಬ್ಯಾಂಕ್ ಪತನಗೊಳ್ಳಲಿದೆ ಎಂದು 2008ರಲ್ಲಿ ಆರ್ಥಿಕ ಹಿಂಜರಿತದ ಬಗ್ಗೆ ಭವಿಷ್ಯ ನುಡಿದಿದ್ದ ಆರ್ಥಿಕ ತಜ್ಞ ರಾಬರ್ಟ್ ಕಿಯೋಸಾಕಿ ಮುನ್ನೆಚ್ಚರಿಕೆ ನೀಡಿದ್ದರು. ಇದರಿಂದಾಗಿ ಬುಧವಾರ ಜಗತ್ತಿನ ಷೇರುಪೇಟೆಗಳಲ್ಲಿ ಮತ್ತು ಅರ್ಥ ವ್ಯವಸ್ಥೆಯಲ್ಲಿ ಆತಂಕದ ಕಾರ್ಮೋಡ ಕವಿದಿತ್ತು.
ಸ್ವಿಜರ್ಲೆಂಡ್‌ನ ಬ್ಯಾಂಕ್‌ನ ಷೇರುಗಳ ಏರಿಕೆಯಿಂದಾಗಿ ಐರೋಪ್ಯ ಒಕ್ಕೂಟದ ಹಾಗೂ ಅಮೆರಿಕದ ಕೆಲವು ಬ್ಯಾಂಕ್‌ಗಳ ಷೇರುಗಳು ಬೇಡಿಕೆ ಪಡೆದುಕೊಂಡಿವೆ. ದ ಸ್ಟಾಕ್ ಯುರೋಪ್‌ನ ಸೂಚ್ಯಂಕ ಗುರುವಾರ ಶೇ.0.8ರಷ್ಟು ಏರಿಕೆ ಕಾಣಲು ಸಾಧ್ಯವಾಯಿತು. ಅದಕ್ಕೆ ಪೂರಕವಾಗಿ ಸ್ವಿಜರ್ಲೆಂಡ್ ಸರ್ಕಾರದ ಹಿರಿಯ ಅಧಿಕಾರಿಗಳು ಸದ್ಯಕ್ಕೆ ಅಲ್ಪ ವಿರಾಮ ಕಂಡಿರುವ ಬಿಕ್ಕಟ್ಟಿನ ಬಗ್ಗೆ ಸಭೆ ನಡೆಸಿ, ಪರಾಮರ್ಶೆ ನಡೆಸಿದ್ದಾರೆ.