Advertisement

ಕೋರಿಕೆಗೆ ಸ್ಪಂದಿಸಿದ ಅಮ್ಮಂದಿರು: ಎದೆಹಾಲಿಲ್ಲದೆ ಕಂಗೆಟ್ಟಿದ್ದ ತಾಯಿಗೆ ನೆರವು!

11:06 AM May 19, 2022 | Team Udayavani |

ಮಂಗಳೂರು: ಎದೆಹಾಲು ಬತ್ತಿ ಎಳೆಯ ಶಿಶುವಿಗೆ ಪೌಷ್ಟಿಕ ಆಹಾರ ನೀಡಲಾಗದೆ ಕಂಗೆಟ್ಟಿದ್ದ ತಾಯಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಲವು ತಾಯಂದಿರು ತಮ್ಮ ಎದೆಹಾಲು ನೀಡುವ ಮೂಲಕ ಸಾಂತ್ವನ ನೀಡಿದ್ದಾರೆ!

Advertisement

ಮಂಗಳೂರಿನ ರಥಬೀದಿ ನಿವಾಸಿ ಅನುಷಾ ಎರಡು ತಿಂಗಳ ಹಿಂದೆ ಮಗುವಿಗೆ ಜನ್ಮನೀಡಿದ್ದರು.

ಗರ್ಭಿಣಿಯಾಗಿದ್ದಾಗ ಪ್ರಿಕ್ಲಾಂಪ್ಸಿಯಾ ಎಂಬ ಆರೋಗ್ಯ ಸಮಸ್ಯೆ ಎದುರಾಗಿದ್ದು ತಾಯಿ, ಮಗು ಇಬ್ಬರಿಗೂ ಅಪಾಯಕಾರಿಯಾಗಿ ಪರಿಣಮಿಸಿತ್ತು. ಆದ್ದರಿಂದ ಏಳು ತಿಂಗಳ ಗರ್ಭಿಣಿಯಾದಾಗಲೇ ಅನಿವಾರ್ಯವಾಗಿ ಶಸ್ತ್ರಕ್ರಿಯೆ ನಡೆಸಿ ಮಗುವನ್ನು ಹೊರತೆಗೆಯ ಬೇಕಾಯಿತು.

ಕನಿಷ್ಠ 2.5 ಕೆ.ಜಿ ತೂಕ ಇರಬೇಕಿದ್ದ ಮಗು 90 ಗ್ರಾಂ ಮಾತ್ರವೇ ಇತ್ತು. ಎರಡು ದಿನ ಹಿಂದೆ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವಾಗ ತುಸು ಚೇತರಿಸಿಕೊಂಡು ತೂಕ 1.4 ಕೆ.ಜಿಗೆ ಏರಿಕೆಯಾಗಿತ್ತು. ಎಳೆ ಕಂದನಿಗೆ ಅಗಾಗ ಸ್ತನ್ಯಪಾನ ಅತ್ಯಾವಶ್ಯಕ. ಆದರೆ ಅವಧಿಪೂರ್ವ ಹೆರಿಗೆಯಿಂದಾಗಿ ತಾಯಿಗೆ ಎದೆಹಾಲಿನ ಕೊರತೆ ಕಾಡುತ್ತಿತ್ತು.

ಪ್ರತೀ 2 ಗಂಟೆಗೊಮ್ಮೆ 30 ಮಿಲಿ ಲೀಟರ್‌ ಎದೆಹಾಲು ಕುಡಿಸಲೇಬೇಕು, ಹಾಗಿದ್ದರೆ ಮಾತ್ರ ಮಗು ಆರೋಗ್ಯಯುತವಾಗಿ ಬೆಳವಣಿಗೆ ಸಾಧಿಸಬಹುದು ಎಂದು ವೈದ್ಯರು ತಿಳಿಸಿದ್ದರು. ಬೇರೆ ವಿಧಿಯಿಲ್ಲದೆ ಅನುಷಾ ಹಾಗೂ ಕುಟುಂಬದವರು ಮಂಗಳೂರಿನ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಇತ್ತೀಚೆಗೆ ಪ್ರಾರಂಭಿಸಲಾದ ಎದೆಹಾಲು ಬ್ಯಾಂಕನ್ನು ಸಂಪರ್ಕಿಸಿದರು.

Advertisement

ಅಲ್ಲೂ ಹೆಚ್ಚುವರಿ ಹಾಲು ಲಭ್ಯವಿಲ್ಲದ ಕಾರಣ ಸಹಾಯ ಸಿಗಲಿಲ್ಲ. ಕೊನೆಯಲ್ಲಿ ಅವರಿಗಿದ್ದ ಆಯ್ಕೆ ಬೆಂಗಳೂರಿಗೆ ಹೋಗುವುದು; ಆದರೆ ಆಗಲೇ ಅನುಷಾ ಆಸ್ಪತ್ರೆ ಖರ್ಚು ಹೆಚ್ಚಿದ್ದರಿಂದ ಕಷ್ಟಕರವಾಗಿತ್ತು.

ಜಾಲತಾಣದಿಂದ ನೆರವು
ಕೊನೆಯ ಪ್ರಯತ್ನವೆಂಬಂತೆ ಅನುಷಾ ಹಾಗೂ ಕುಟುಂಬದವರು ಸಾಮಾಜಿಕ ಜಾಲತಾಣ ಮುಖೇನ ತಮ್ಮ ಸಂಕಷ್ಟ ಹಾಗೂ ಮನವಿಯನ್ನು ಹಂಚಿಕೊಂಡರು. ಮಂಗಳೂರಿನ ಪ್ರಮುಖ ಪೇಜ್‌ಗಳಲ್ಲೊಂದಾದ ಮಂಗಳೂರು ಮೇರಿಜಾನ್‌ ಮೂಲಕವೂ ಕೋರಿಕೆ ಹಂಚಲ್ಪಟ್ಟಿತು.

ಇದಾಗಿ 24 ಗಂಟೆಗಳಲ್ಲೇ ಅನುಷಾಗೆ 25ರಷ್ಟು ಕರೆಗಳು ದ.ಕ., ಉಡುಪಿ ಜಿಲ್ಲೆಯಿಂದ ಬಂದವು. ಕೆಲವು ತಾಯಂದಿರು ಹೆಚ್ಚುವರಿ ಎದೆಹಾಲನ್ನು ಹಂಚಿಕೊಳ್ಳುವುದಕ್ಕೆ ಸಿದ್ಧರಾಗಿದ್ದರು.

ಮೊದಲ ಹಂತದ ಎದೆಹಾಲನ್ನು ಪುತ್ತೂರು, ಕಾರ್ಕಳದಿಂದ ಪಡೆದುಕೊಳ್ಳಲಾಯಿತು. ಪ್ರಸ್ತುತ ಮಂಗಳೂರಿನಲ್ಲೇ ಐವರು ತಾಯಂದಿರು ತಮ್ಮ ಎದೆಹಾಲನ್ನು ಸಂಗ್ರಹಿಸಿ ನೀಡುತ್ತಿದ್ದಾರೆ. ಅನುಷಾ ಅವರ ಪತಿ ಈ ತಾಯಂದಿರ ಮನೆಗಳಿಗೆ ಹೋಗಿ ಎದೆಹಾಲು ತರುತ್ತಾರೆ. ಮಗುವಿಗೆ ಅದನ್ನು ನೀಡುವ ಮೊದಲು ಸರಿಯಾಗಿ ತಪಾಸಣೆ ನಡೆಸಲಾಗುತ್ತದೆ.

ಈ ರೀತಿ ಅನಿರೀಕ್ಷಿತವಾಗಿ ಸಿಕ್ಕಿರುವ ನೆರವಿಗೆ ಅನುಷಾ ಖುಷಿ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next