ಬೆಂಗಳೂರು: ಜನಾಶೀರ್ವಾದ ಯಾತ್ರೆಯ ಕೊನೆಯ ಹಂತದ ಪ್ರವಾಸ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಶನಿವಾರ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯಲ್ಲಿ ರೋಡ್ ಶೋ ನಡೆಸಿ ಸಮಾವೇಶದಲ್ಲಿ ಪಾಲ್ಗೊಂಡರು.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ರೋಡ್ ಶೋ ನಡೆಸಿದರು. ಬಳಿಕ, ಚಿಕ್ಕಬಳ್ಳಾಪುರದಲ್ಲಿ ಸಂಜೆ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ಬೆಂಗಳೂರಿಗೆ ಆಗಮಿಸಿದ ಅವರು ಸಂಜೆ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದು ಮಾತುಕತೆ ನಡೆಸಿದರು. ನಂತರ, ಕುಮಾರಕೃಪಾ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದರು.
ಭಾನುವಾರ ಮಧ್ಯಾಹ್ನ ಅರಮನೆ ಮೈದಾನದಲ್ಲಿ ನಡೆಯುವ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ರಾಹುಲ್ ಪಾಲ್ಗೊಳ್ಳಲಿದ್ದು, ಅದಕ್ಕೂ ಮೊದಲು ಬೆಳಗ್ಗೆ 9.30ಕ್ಕೆ ಸಫಾಯಿ ಕರ್ಮಚಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉದ್ಯಮಿಗಳೊಂದಿಗೆ ಸಭೆ ನಡೆಸಲಿದ್ದಾರೆ. ರಾಜ್ಯಾದ್ಯಂತ ನಾಲ್ಕು ವಿಭಾಗಗಳಲ್ಲಿ ಜನಾಶೀರ್ವಾದ ಯಾತ್ರೆ ಮುಗಿಸಿರುವ ರಾಹುಲ್, ಟಿಕೆಟ್ ಹಂಚಿಕೆ ನಂತರ ಮತ್ತೂಂದು ಸುತ್ತಿನ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ನಾನು ನನ್ನ ಯಾವುದೇ ಭಾಷಣದಲ್ಲಿ ಯಾರನ್ನೂ ಕೆಟ್ಟದಾಗಿ ಟೀಕಿಸಿಲ್ಲ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ದೇಶದ ಎಲ್ಲಾ ವಿರೋಧ ಪಕ್ಷಗಳ ಮುಖಂಡರನ್ನು ಜಾನುವಾರುಗಳಿಗೆ ಹೋಲಿಸಿದ್ದಾರೆ. ನಾಯಿ, ಬೆಕ್ಕು ಎಂದು ಟೀಕಿಸಿದ್ದಾರೆ. ಇದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ.
– ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ.
ಬಿಜೆಪಿಯವರು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ತಿದ್ದುಪಡಿ ಮಾಡಿದರೆ ದೇಶದಲ್ಲಿ ರಕ್ತಪಾತ ನಡೆಯುತ್ತದೆ. ಕೋಮುವಾದಿ ಬಿಜೆಪಿ, ಅವಕಾಶವಾದಿ ಜೆಡಿಎಸ್ ಪಕ್ಷಗಳಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿ 25, ಜೆಡಿಎಸ್ 20 ಸ್ಥಾನಗಳಷ್ಟೆ ಬರುತ್ತದೆ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ.
– ಸಿದ್ದರಾಮಯ್ಯ, ಮುಖ್ಯಮಂತ್ರಿ.