ಚೆನ್ನೈ: ಕಾನೂನು ಸಮರದಲ್ಲಿ ಎಐಎಡಿಎಂಕೆ ಮುಖಂಡ ಓ ಪನ್ನೀರ್ ಸೆಲ್ವಂಗೆ ಹಿನ್ನೆಡೆಯಾಗಿದ್ದು, ಸೋಮವಾರ (ಜುಲೈ 11) ನಡೆದ ಪಕ್ಷದ ತುರ್ತು ಸಭೆಯಲ್ಲಿ ಪ್ರತಿಸ್ಪರ್ಧಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಮಧ್ಯಂತರ (ಹಂಗಾಮಿ) ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ರಾಜಪಕ್ಸೆ
ಎಐಎಡಿಎಂಕೆಯ ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದಲ್ಲಿ ಕರೆಯಲಾದ ಸಭೆಗೆ ತಡೆ ನೀಡಬೇಕೆಂದು ಕೋರಿ ಓ ಪನ್ನೀರ್ ಸೆಲ್ವಂ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸುವ ಮೂಲಕ ಎಐಎಡಿಎಂಕೆ ಸಭೆ ನಡೆಸುವ ಹಾದಿ ಸುಗಮವಾದಂತಾಗಿತ್ತು.
ಮದ್ರಾಸ್ ಹೈಕೋರ್ಟ್ ಓ ಪನ್ನೀರ್ ಸೆಲ್ವಂ ಅರ್ಜಿಯನ್ನು ವಜಾಗೊಳಿಸಿದ ನಂತರ ತಮಿಳ್ ಮಹಾನ್ ಹುಸೈನ್ ಅಧ್ಯಕ್ಷತೆಯಲ್ಲಿ ನಡೆದ ಎಐಎಡಿಎಂಕೆ ಸಭೆಯಲ್ಲಿ ಕೆ.ಪಳನಿಸ್ವಾಮಿಯನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿ ವಿವರಿಸಿದೆ. ಇದರೊಂದಿಗೆ ಎಐಎಡಿಎಂಕೆಯಲ್ಲಿನ ಪ್ರಸ್ತುತ ನಾಯಕತ್ವದ ಜಟಾಪಟಿಗೆ ಕಡಿವಾಣ ಹಾಕಿದಂತಾಗಿದೆ.
ಎಐಎಡಿಎಂಕೆ ಸಾಮಾನ್ಯ ಸಭೆಯಲ್ಲಿ, ಪಕ್ಷದಲ್ಲಿನ ಉಭಯ ನಾಯಕತ್ವ ರದ್ದುಗೊಳಿಸುವ ಬಗ್ಗೆ ನಿರ್ಣಯ ಕೈಗೊಂಡಿದೆ. ಅಲ್ಲದೇ ಎಐಎಡಿಎಂಕೆಗೆ ಉಪಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ರಚಿಸಲಾಗಿದೆ ಎಂದು ವರದಿ ತಿಳಿಸಿದೆ.
ಚೆನ್ನೈನ ವನಗ್ರಾಮ್ ನಲ್ಲಿ ಎಐಎಡಿಎಂಕೆಯ ಸಾಮಾನ್ಯ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಓ ಪನ್ನೀರ್ ಸೆಲ್ವಂ ಬೆಂಬಲಿಗರು ಎಡಪ್ಪಾಡಿ ಕೆ.ಪಳನಿಸ್ವಾಮಿ ಫೋಟೋಗಳಿಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಪಿಎಸ್-ಓಪಿಎಸ್ ಬೆಂಬಲಿಗರ ನಡುವೆ ಮಾರಾಮಾರಿ:
ನಾಯಕತ್ವದ ಜಂಗೀಕುಸ್ತಿಯಿಂದಾಗಿ ತಮಿಳುನಾಡಿನಲ್ಲಿ ಇ ಪಳನಿಸ್ವಾಮಿ ಮತ್ತು ಓ ಪನ್ನೀರ್ ಸೆಲ್ವಂ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದ್ದು, ಕೆಲವರು ಗಾಯಗೊಂಡಿರುವ ಘಟನೆ ನಡೆದಿದೆ.