Advertisement

Tamilnadu Assembly: ವಿಪಕ್ಷ ನಾಯಕ ಪಳನಿಸ್ವಾಮಿ ಸೇರಿ AIADMK ಶಾಸಕರು ಅಮಾನತು

04:17 PM Jun 26, 2024 | Team Udayavani |

ಚೆನ್ನೈ: ವಿಧಾನಸಭಾ ಕಲಾಪಕ್ಕೆ ಪದೇ, ಪದೇ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಸೇರಿದಂತೆ ಎಐಎಡಿಎಂಕೆಯ ಶಾಸಕರನ್ನು ಪ್ರಸ್ತುತ ನಡೆಯುತ್ತಿರುವ ಕಲಾಪದ ಅಂತ್ಯದವರೆಗೂ ಅಮಾನತುಗೊಳಿಸಿರುವುದಾಗಿ ವರದಿ ತಿಳಿಸಿದೆ.

Advertisement

ಒಂದು ದಿನದ ಅಮಾನತು ಶಿಕ್ಷೆಯ ನಂತರ ಬುಧವಾರ (ಜೂನ್‌ 26) ವಿಧಾನಸಭಾ ಕಲಾಪಕ್ಕೆ ಕಪ್ಪುಬಟ್ಟೆ ಧರಿಸಿ ಬಂದ ವಿಪಕ್ಷ ಸದಸ್ಯರು, ಇಂದೂ ಕೂಡಾ ಕಲ್ಲಕುರುಚಿ ಕಳ್ಳಭಟ್ಟಿ ಸಾರಾಯಿ ಪ್ರಕರಣದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಘೋಷಣೆ ಕೂಗಿದ್ದರು.

ಈ ಸಂದರ್ಭದಲ್ಲಿ ಸ್ಪೀಕರ್‌ ಎಂ.ಅಪ್ಪಾವು ಅವರು ಈ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದರು. ಆದರೆ ಎಐಎಡಿಎಂಕೆ ಶಾಸಕರು ಇದೊಂದು ಮುಖ್ಯವಾದ ವಿಷಯವಾಗಿದ್ದು, ಕೂಡಲೇ ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಲು ಆರಂಭಿಸಿದ್ದರು.

ಸದಸ್ಯರು ಕಲಾಪದಲ್ಲಿ ಕೋಲಾಹಲ ನಡೆಸದೇ, ತಮ್ಮ ಸ್ಥಾನಗಳಿಗೆ ಮರಳುವಂತೆ ಸ್ಪೀಕರ್‌ ಮನವಿ ಮಾಡಿಕೊಂಡಿದ್ದರು. ಕೊನೆಗೆ ಗದ್ದಲ ಮುಂದುವರಿಸಿದಾಗ ಎಐಎಡಿಎಂಕೆ ಶಾಸಕರುಗಳನ್ನು ಜೂನ್‌ 29ರವರೆಗೆ ನಡೆಯಲಿರುವ ಕಲಾಪದವರೆಗೆ ಅಮಾನತುಗೊಳಿಸುವಂತೆ ಸದನದಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಯ್ತು ಎಂದು ವರದಿ ವಿವರಿಸಿದೆ.‌

ಜೂನ್‌ 19ರಂದು ಕಲ್ಲಕುರುಚಿಯಲ್ಲಿ ಕಳ್ಳಭಟ್ಟಿ ಸಾರಾಯಿ ಕುಡಿದು ಸುಮಾರು 58 ಜನರು ಸಾವನ್ನಪ್ಪಿದ್ದರು. ಆದರೂ ಇನ್ನಷ್ಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next