ನವದೆಹಲಿ: ಡಿಜಿಟಲ್ ವ್ಯವಸ್ಥೆಯಲ್ಲಿ ಸಕ್ರಿಯರಾಗಿರುವ ವ್ಯಕ್ತಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್- ಎಐ) ನಿಯಂತ್ರಣಗೊಳಿಸಲು ಸರ್ಕಾರ ಬದ್ಧವಾಗಿದೆ.
ಜತೆಗೆ ಅದರಿಂದ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂಬ ಭಾವನೆ ವ್ಯಕ್ತವಾದರೆ ಪ್ರತಿಬಂಧಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ಒಂಭತ್ತು ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿ ಅವರು ಮಾತನಾಡಿದರು. ಸದ್ಯದ ಸ್ಥಿತಿಯಲ್ಲಿ ಕೃತಕ ಬುದ್ಧಿಮತ್ತೆ ವ್ಯವಸ್ಥೆ ಉದ್ಯೋಗಗಳನ್ನು ಕಸಿಯುವ ಸ್ಥಿತಿಯಲ್ಲಿ ಇಲ್ಲ. ಯಾವುದೇ ರೀತಿಯ ತಂತ್ರಜ್ಞಾನದ ವಿರುದ್ಧ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳುವುದಿದ್ದರೂ, ಅದರಿಂದ ಉಂಟಾಗಬಹುದಾದ ಹಾನಿಗಳನ್ನು ಅಧ್ಯಯನ ನಡೆಸಿ ಅಥವಾ ಡಿಜಿಟಲ್ ವ್ಯವಸ್ಥೆಯಲ್ಲಿ ಸಕ್ರಿಯವಾಗಿರುವವರ ಹಿತಕ್ಕೆ ಧಕ್ಕೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಹಿಂಜರಿಯಲಾರದು ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.
ಇದೇ ನಿಯಮಗಳು ವೆಬ್3 ಸೇರಿದಂತೆ ಇನ್ನಿತರ ಯಾವುದೇ ತಾಂತ್ರಿಕ ಅಂಶಗಳಿಗೆ ಅನ್ವಯವಾಗುತ್ತವೆ. ಎಂದರು.
Related Articles
ತಾಂತ್ರಿಕ ವ್ಯವಸ್ಥೆ ಬಲಪಡಿಸಲು ನೆರವು:
ಇದೇ ವೇಳೆ, ಓಪನ್ ಎಐ ಸಂಸ್ಥೆಯ ಸಿಇಒ ಸ್ಯಾಮ್ ಆಲ್ಟ್ಮನ್ ಜತೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭೇಟಿಯ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿಯವರು “ದೇಶದ ತಾಂತ್ರಿಕ ಕ್ಷೇತ್ರವನ್ನು ಇನ್ನಷ್ಟು ವಿಸ್ತಾರಗೊಳಿಸಲು ಮತ್ತು ಬಲಪಡಿಸಲು ಕೃತಕ ಬುದ್ಧಿಮತ್ತೆ (ಎಐ)ನೆರವಾಗಲಿದೆ. ಈ ನಿಟ್ಟಿನಲ್ಲಿ ಸಹಕಾರಿಯಾಗಲಿರುವ ಎಲ್ಲ ರೀತಿಯ ಸಹಭಾಗಿತ್ವವನ್ನು ನಾವು ಸ್ವಾಗತಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ. ಪ್ರಧಾನಿ ಜತೆಗಿನ ಭೇಟಿ ಬಗ್ಗೆ ಟ್ವೀಟ್ ಮಾಡಿರುವ ಸ್ಯಾಮ್ “ದೇಶದ ಅತ್ಯುತ್ತಮ ತಾಂತ್ರಿಕ ವ್ಯವಸ್ಥೆಯ ಬಗ್ಗೆ ಪ್ರಧಾನಿ ಮೋದಿಯವರ ಜತೆಗೆ ಅತ್ಯುತ್ತಮ ಮಾತುಕತೆ ನಡೆಸಿದ್ದೇನೆ. ಎಐನಿಂದ ದೇಶಕ್ಕೆ ಯಾವ ರೀತಿ ಅನುಕೂಲವಾಗಬಹುದು ಎಂಬ ವಿಚಾರ ವಿನಿಮಯ ನಡೆಸಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.