ಸವದತ್ತಿ: ರೈತರ ಜಮೀನುಗಳ ಪಹಣಿಯಲ್ಲಿ ನೀರಾವರಿ ನಿಗಮದ ಹೆಸರು ಕಾನೂನು ಬಾಹಿರವಾಗಿ ನಮೂದಿಸಲಾಗಿದೆ ಹಾಗೂ ಬೆಳೆ ಮತ್ತು ಮನೆ ಹಾನಿ ಪರಿಹಾರಕ್ಕೆ ಒತ್ತಾಯಿಸಿ ಭಾರತೀಯ ಕಿಸಾನ ಸಂಘ ಹಾಗೂ ರಾಜ್ಯ ರೈತ ಸಂಘದಿಂದ ಗ್ರೇಡ್-2 ತಹಶೀಲ್ದಾರ್ ಎಂ.ವಿ. ಗುಂಡಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು.
ಮಲಪ್ರಭಾ ಹಿನ್ನೀರು ಮತ್ತು ಇದೀಗ ಕಾಲುವೆಗಳಿಗೆ ಭೂಸ್ವಾಧೀನವಾದ ಪ್ರಕರಣಗಳು ಕಾನೂನು ಬಾಹಿರವಾಗಿದೆ. 1970 ರ ದಾಖಲೆ ಪರಿಗಣಿಸಿ ಮುನ್ಸೂಚನೆ ನೀಡದೇ ಪಹಣಿಯಲ್ಲಿ ನೀರಾವರಿ ನಿಗಮದ ಹೆಸರು ನಮೂದಿಸಲಾಗಿದೆ.
ಈ ರೀತಿ ಬದಲಾವಣೆಯಾಗಲು ಕಾರಣವೇನೆಂದು ತಿಳಿಸಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮವಹಿಸಬೇಕು. ಈ ಯೋಜನೆಯಲ್ಲಿ ಸರಿಯಾದ ಅವಾರ್ಡ್ ಪ್ರಕ್ರಿಯೆ ನಡೆದಿಲ್ಲ. ಭೂ ಸ್ವಾಧೀನದಿಂದ ರೈತನ ಎಲ್ಲ ವ್ಯವಹಾರಗಳು ಸ್ಥಗಿತಗೊಂಡು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ದಾಖಲಾತಿ ಪರಿಶೀಲಿಸಿ ಸ್ವಾಧೀನ ಪಡಿಸಿಕೊಂಡ ಜಮೀನನ್ನು ರೈತರಿಗೆ ಮರಳಿಸಬೇಕು. ಕಂದಾಯ, ಭೂ ಸ್ವಾಧೀನ ಮತ್ತು ಸಮೀಕ್ಷಾಧಿಕಾರಿಗಳ ನೇತೃತ್ವದಲ್ಲಿ ಜಂಟಿ ಸಮೀಕ್ಷೆ ನಡೆಸಿ ತ್ವರಿತವಾಗಿ ನೊಂದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಮಳೆಯಿಂದ ಬೆಳೆ ಹಾಗೂ ಮನೆಗಳು ಹಾನಿಗೀಡಾಗಿವೆ. ಇಲ್ಲಿಯವರೆಗೆ ಸರಕಾರದಿಂದ ಯಾವುದೇ ಪರಿಹಾರ ನೀಡಿಲ್ಲ. ಹಾನಿಯಾದ ಮನೆಗಳ ಪರಿಹಾರದ ಕುರಿತು ಕ್ರಮ ಕೈಗೊಂಡಿಲ್ಲ. ಕೂಡಲೇ ಕೃಷಿ ಇಲಾಖೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು. ಭೂಸ್ವಾಧೀನ ಹಾಗೂ ಹಾನಿ ಪರಿಹಾರ ನೀಡದಿದ್ದರೆ ಸೆ. 1 ರಂದು ತಹಶೀಲ್ದಾರ್ ಮತ್ತು ಜಿಲ್ಲಾ ಧಿಕಾರಿ ಕಚೇರಿ ಎದುರು ಆಹೋರಾತ್ರಿ ಧರಣಿ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.
ರಾಜ್ಯಾಧ್ಯಕ್ಷ ಚನ್ನಪ್ಪ ಪೂಜೇರ, ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯಕ, ರೇಣಪ್ಪ ಗುಡೆನ್ನವರ, ಮುಸ್ತಾಕ ಸಯ್ಯದ, ಸುರೇಶ ಸಂಪಗಾಂವಿ, ವೀರೇಶ ಮಂಡೇದ, ಬರಮು ಕಮಲಾಪೂರ, ದ್ಯಾಮನಗೌಡ ಪಾಟೀಲ, ಶಿವು ಇಳಗೇರ, ಶಿವಾನಂದ ಸರದಾರ, ಅಲ್ಲಿಸಾಬ ನೂಲಗಿ, ಮಹಾಂತೇಶ ಚರಂತಿಮಠ ಹಾಗೂ ಪ್ರಮುಖರು ಇದ್ದರು.