Advertisement

Guest Lectures: ಸೇವೆ ಖಾಯಂ ಆಗ್ರಹಿಸಿ ಅಹೋರಾತ್ರಿ ಧರಣಿ

11:13 PM Jan 04, 2024 | Team Udayavani |

ಬೆಂಗಳೂರು: ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆ ಖಾಯಂಗೊಳಿಸಲು ಆಗ್ರಹಿಸಿ ಕರ್ನಾಟಕ ಅತಿಥಿ ಉಪನ್ಯಾಸಕರ ಸಂಘದ ಸಾವಿರಾರು ಕಾರ್ಯಕರ್ತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ಪ್ರಾರಂಭಿಸಿದ್ದಾರೆ.

Advertisement

ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಗುರುವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶಗೊಂಡರು. 430 ಪ್ರಥಮ ದರ್ಜೆ ಕಾಲೇಜಿನ ಶೇ.80ರಷ್ಟು ಅತಿಥಿ ಶಿಕ್ಷಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದಾಗಿ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ| ಹನುಮಂತಗೌಡ ಆರ್‌.ಕಲ್ಮನಿ ತಿಳಿಸಿದ್ದಾರೆ. ಅತಿಥಿ ಉಪನ್ಯಾಸಕರ ಗೈರಿನಿಂದ ರಾಜ್ಯದ ಕೆಲವು ಕಾಲೇಜುಗಳಲ್ಲಿ ಬೋಧಕರಿಲ್ಲದೇ ವಿದ್ಯಾರ್ಥಿಗಳಿಗೆ ಕೊಂಚ ತೊಡಕಾಯಿತು ಎಂದು ತಿಳಿದು ಬಂದಿದೆ.

ಪಾದಯಾತ್ರೆ ಮೂಲಕ ರಾಜಧಾನಿಗೆ ಪ್ರವೇಶ
ಕಳೆದ ಸೋಮವಾರ ತುಮಕೂರಿನ ಸಿದ್ಧಗಂಗಾ ಮಠದಿಂದ ಆರಂಭಿಸಿದ ಪಾದಯಾತ್ರೆ ಮಂಗಳವಾರ ದಾಬಸಪೇಟೆಗೆ ಆಗಮಿಸಿತ್ತು. ಬುಧವಾರ ಬೆಳಗ್ಗೆ ಮತ್ತೆ ಪಾದಯಾತ್ರೆ ಮುಂದುವರಿಸಿದ್ದರು. ಆದರೆ ನೆಲಮಂಗಲ ತಲುಪುತ್ತಿದ್ದಂತೆ ಉಪನ್ಯಾಸಕರನ್ನು ತಡೆದ ಪೊಲೀಸರು, ಬಸ್‌ಗಳಲ್ಲಿ ತುಂಬಿ ಫ್ರೀಡಂಪಾರ್ಕ್‌ಗೆ ಕರೆತಂದರು. ಗುರುವಾರ ಬೆಳಗ್ಗಿನಿಂದ ಫ್ರೀಡಂ ಪಾರ್ಕ್‌ನಲ್ಲೇ ಧರಣಿ ಕೂತಿರುವ ಪ್ರತಿಭಟನಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸುವ ಬಗ್ಗೆ ಆಶ್ವಾಸನೆ ಕೊಡುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ವಿಧಾನ ಪರಿಷತ್‌ ಸದಸ್ಯರಾದ ಎಸ್‌.ವಿ.ಸಂಕನೂರು, ಹನುಮಂತ ನಿರಾಣಿ, ಪುಟ್ಟಣ್ಣ, ಮೇಲ್ಮನೆ ಮಾಜಿ ಸದಸ್ಯರಾದ ಶ್ರೀಕಂಠೇಗೌಡ, ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ಸರಕಾರಿ ಪಪೂ ಕಾಲೇಜಿನ ರಾಜ್ಯಾಧ್ಯಕ್ಷ ನಿಂಗೇಗೌಡ, ಸಂಘದ ಗೌರವಾಧ್ಯಕ್ಷ ತಿಮ್ಮಯ್ಯ ಪುರ್ಲೆ, ವಕೀಲರ ಸಂಘದ ಅಧ್ಯಕ್ಷ ರಂಗನಾಥ್‌ ಮತ್ತಿತರರು ಬೆಂಬಲ ಸೂಚಿಸಿದರು.

12 ಉಪನ್ಯಾಸಕರಿಂದ ಉಪವಾಸ ಸತ್ಯಾಗ್ರಹ
ಪ್ರತಿಭಟನೆ ನಿರತರ ಪೈಕಿ 12 ಮಂದಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ತಿಪಟೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಲೋಕೇಶ್‌ ಅಸ್ವಸ್ಥರಾದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಫ್ರೀಡಂ ಪಾರ್ಕ್‌ನಲ್ಲೇ ರಾತ್ರಿ ಕಳೆದ ಶಿಕ್ಷಕರು
ಮಹಿಳೆಯರು, ಪುರುಷರೆನ್ನದೇ ಕರ್ನಾಟಕದ ದೂರದ ಊರುಗಳಿಂದ ಬಂದಿದ್ದ ಉಪನ್ಯಾಸಕರು ತಾವು ತಂದಿದ್ದ ಬ್ಯಾಗ್‌ ಅನ್ನೇ ತಲೆದಿಂಬು ಮಾಡಿಕೊಂಡು, ಶಾಲುಗಳನ್ನೇ ಹೊದಿಕೆಯಾಗಿ ಪರಿವರ್ತಿಸಿ ನಡುಗುವ ಚಳಿಯಲ್ಲೇ ರಾತ್ರಿ ಕಳೆದರು. ಪ್ರತಿಭಟನೆ ನಿರತರಿಗೆ ಎಂಎಲ್‌ಸಿ ಪುಟ್ಟಣ್ಣ ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಫ್ರೀಡಂ ಪಾರ್ಕ್‌ನಲ್ಲಿ ಶೌಚಗೃಹ ಸಹಿತ ಮೂಲ ಸೌಕರ್ಯಗಳಿಲ್ಲದ ಹಿನ್ನೆಲೆಯಲ್ಲಿ ಪರದಾಡಿದರು. ಮಕ್ಕಳನ್ನು ಕರೆತಂದಿದ್ದ ಕೆಲವು ಉಪನ್ಯಾಸಕಿಯರು ಮಡಿಲಲ್ಲೇ ಮಲಗಿಸಿಕೊಂಡಿದ್ದರು.

Advertisement

ರಾಜ್ಯದ‌ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಪ್ರತಿ ವರ್ಷ ಆನ್‌ಲೈನ್‌ನಲ್ಲಿ ಅರ್ಜಿ ಕರೆಯುವುದನ್ನು ಬಿಟ್ಟು ನಮ್ಮ ಸೇವೆಯನ್ನು ಖಾಯಂಗೊಳಿಸಬೇಕು. ನಮ್ಮ ಬೇಡಿಕೆಯನ್ನು ಸರಕಾರ ನಿರ್ಲಕ್ಷಿಸಿದರೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವುದು ಅನಿವಾರ್ಯ.
-ಡಾ| ಹನುಮಂತಗೌಡ ಆರ್‌.ಕಲ್ಮನಿ, ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ

ರಾಜ್ಯ ಸರಕಾರ ನಮ್ಮ ಸೇವೆಯನ್ನು ಖಾಯಂಗೊಳಿಸಿದರೆ ಅತಿಥಿ ಉಪನ್ಯಾಸಕರಿಗೆ ಬಹಳಷ್ಟು ಅನುಕೂಲವಾಗುತ್ತದೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುತ್ತೇವೆ.
-ಸ್ವಾತಿ, ಉಪನ್ಯಾಸಕಿ, ಜಿಎಫ್ಜಿಸಿ ಕಾಲೇಜು, ಯಲಹಂಕ

ಈಗಿರುವ ವೇತನದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟ. ಇನ್ನು ಸೇವಾ ಭದ್ರತೆ ಇಲ್ಲದೆ ಉಪನ್ಯಾಸಕರು ಕಂಗೆಟ್ಟು ಹೋಗಿದ್ದಾರೆ. ದಯಮಾಡಿ ನಮ್ಮ ಕೆಲಸವನ್ನು ಖಾಯಂ ಮಾಡಿ ಎಂದು ಸರಕಾರವನ್ನು ವಿನಂತಿಸುತ್ತೇವೆ.
– ಮಹೇಶ್‌, ಚಿಕ್ಕಮಗಳೂರು ಸರಕಾರಿ ಪ್ರಥಮ ದರ್ಜೆ ಕಾಲೇಜು

 

Advertisement

Udayavani is now on Telegram. Click here to join our channel and stay updated with the latest news.

Next