ಬೆಂಗಳೂರು: ಒಕ್ಕಲಿಗರ ಸಂಘದ ಆಡಳಿತ ಮಂಡಳಿಯು ಅನಗತ್ಯವಾಗಿ ಸಿಬ್ಬಂದಿ ನೇಮಕ ಮಾಡಿಕೊಂಡಿದೆ ಎಂದು ಆರೋಪಿಸಿ ಒಕ್ಕಲಿಗರ ಸಂಘದ ಅಧೀನದಲ್ಲಿರುವ ಸಂಸ್ಥೆಗಳ ನೌಕರರ ಸಂಘ ಕಿಮ್ಸ್ ಆವರಣದಲ್ಲಿ ಆರಂಭಿಸಿರುವ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದು, ಶನಿವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಅಗತ್ಯವಿಲ್ಲದಿದ್ದರೂ ಸುಮಾರು 670 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಮೂಲಕ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಸಂಘವು ಕಳೆದ ಮಂಗಳವಾರದಿಂದ ಧರಣಿ ಆರಂಭಿಸಿತ್ತು. ಇದಕ್ಕೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಶನಿವಾರ ಕಿಮ್ಸ್ ಹಾಗೂ ದಂತ ವೈದ್ಯ ಆಸ್ಪತ್ರೆಯ ಹೊರರೋಗಿ ವಿಭಾಗದ ಸೇವೆ ಸ್ಥಗಿತಗೊಳಿಸಿದ್ದರು. ಇದರ ನಡುವೆಯೂ ನೇಮಕ ಮುಂದುವರಿದಿರುವ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದು, ಹೋರಾಟ ಗಂಭೀರ ಸ್ವರೂಪ ಪಡೆಯುವ ಲಕ್ಷಣ ಕಾಣುತ್ತಿದೆ.
ಒಕ್ಕಲಿಗರ ಸಂಘದಡಿ ಕಿಮ್ಸ್ ಆಸ್ಪತ್ರೆ, ಕೆಂಗಲ್ ಹನುಮಂತಯ್ಯ ಆಸ್ಪತ್ರೆ, ವೈದ್ಯಕೀಯ ಕಾಲೇಜು, ದಂತ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಪ್ರಾಥಮಿಕ ಶಾಲೆ ಸೇರಿದಂತೆ ಒಟ್ಟು 18 ಸಂಸ್ಥೆಗಳಿವೆ. ಈ ಸಂಸ್ಥೆಗಳಲ್ಲಿ 2,500 ಕಾಯಂ ನೌಕರ, ಸಿಬ್ಬಂದಿಯಿದ್ದು, ಪ್ರತಿ ತಿಂಗಳು ಸಕಾಲಕ್ಕೆ ವೇತನ ಪಾವತಿಯಾಗದೆ 23, 24ನೇ ತಾರೀಖೀನಂದು ವೇತನ ನೀಡಲಾಗುತ್ತಿದೆ. ವಾರ್ಷಿಕ ವೇತನ ಕೂಡ ಹೆಚ್ಚಳ ಮಾಡುತ್ತಿಲ್ಲ. ಹಾಗಿದ್ದರೂ ಅನಗತ್ಯವಾಗಿ ಸಿಬ್ಬಂದಿ ನೇಮಕಕ್ಕೆ ಮುಂದಾಗಿರುವುದು ಖಂಡನೀಯ ಎಂದು ರಾಜ್ಯ ಒಕ್ಕಲಿಗರ ಸಂಘದ ನೌಕರರ ಸಂಘದ ಅಧ್ಯಕ್ಷ ಡಾ.ವಿನೋದ್ ಕುಮಾರ್ ತಿಳಿಸಿದರು.
ನಾಲ್ಕು ತಿಂಗಳಿನಿಂದೀಚೆಗೆ ಸಹಾಯಕರು, ಕಂಪ್ಯೂಟರ್ ಆಪರೇಟರ್‌ಗಳು ಸೇರಿದಂತೆ ನಾನಾ ಹುದ್ದೆಗಳಿಗೆ 670ಕ್ಕೂ ಹೆಚ್ಚು ಸಿಬ್ಬಂದಿ ನೇಮಕ ನಡೆದಿದೆ. ವಾಸ್ತವಿಕವಾಗಿ ಸುಮಾರು 200 ಹುದ್ದೆಗಳಷ್ಟೇ ಅಗತ್ಯವಿದ್ದು, ಹೆಚ್ಚುವರಿ ನೇಮಕ ನಡೆದಿದೆ. ಒಂದೊಂದು ಹುದ್ದೆ ಭರ್ತಿಗೂ ಐದರಿಂದ ಎಂಟು ಲಕ್ಷ ರೂ. ಹಣ ಸಂಗ್ರಹಿಸಲಾಗಿದೆ ಎಂಬ ಮಾತು ಕೇಳಿಬಂದಿದೆ. ವಿಭಾಗವಾರು ಅಗತ್ಯ ಸಿಬ್ಬಂದಿ ವಿವರ ಪಡೆಯದೆ, ಆಯ್ಕೆ ಸಮಿತಿಯನ್ನೂ ರಚಿಸದೆ, ಮಾನದಂಡ, ಅರ್ಹತೆಯನ್ನೂ ನಿಗದಿಪಡಿಸದೆ ಹಣ ಪಡೆದು ಬೇಕಾದವರನ್ನು ನೇಮಕ ಮಾಡಲಾಗುತ್ತಿದೆ ಎಂದು ಹೇಳಿದರು.
ಅನಗತ್ಯವಾಗಿ ನೇಮಕ ಮಾಡಿಕೊಂಡವರನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿ ಜೂ.12ರಿಂದ ಧರಣಿ ಆರಂಭಿಸಲಾಯಿತು. ಸ್ಪಂದನೆ ಸಿಗದ ಕಾರಣ ಶನಿವಾರದಿಂದ ಒಪಿಡಿ ಸೇವೆ ಸ್ಥಗಿತಗೊಳಿಸಲಾಗಿತ್ತು. ಹಾಗಿದ್ದರೂ ನೇಮಕ ಪ್ರಕ್ರಿಯೆ ನಡೆಯುತ್ತಲೇ ಇದ್ದು, ಹೊಸ ಆದೇಶಗಳನ್ನು ನೀಡುತ್ತಲೇ ಇದ್ದಾರೆ. ಹಾಗಾಗಿ ಶನಿವಾರದಿಂದ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ. ನೇಮಕ ರದ್ದುಪಡಿಸುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಒಪಿಡಿ ಸೇವೆಯಲ್ಲಿ ವ್ಯತ್ಯಯವಿಲ್ಲ: ವೈದ್ಯರು, ನೌಕರರ ಧರಣಿಯಿಂದ ರೋಗಿಗಳಿಗೆ ಆರೋಗ್ಯ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಶನಿವಾರ ಸರ್ಕಾರಿ ರಜೆಯಿದ್ದ ಕಾರಣ ರೋಗಿಗಳ ಸಂಖ್ಯೆಯೂ ಕಡಿಮೆಯಿತ್ತು. ಹೊರ ರೋಗಿ ವಿಭಾಗದಲ್ಲಿ ಕಿರಿಯ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ತುರ್ತು ಪ್ರಕರಣಗಳಲ್ಲಿ ಪ್ರತಿಭಟನಾನಿರತ ವೈದ್ಯರೇ ಚಿಕಿತ್ಸೆ ನೀಡಿದ್ದಾರೆ. ಒಳ ರೋಗಿ ವಿಭಾಗದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಕಿಮ್ಸ್ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಧುಶಂಕರ್ ತಿಳಿಸಿದರು.