Advertisement

ಅಹೋರಾತ್ರಿ ಧರಣಿ ಆರಂಭ

12:43 PM Jan 17, 2017 | Team Udayavani |

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯತ್‌ ನೌಕರರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಜಿಲ್ಲೆಯ ಗ್ರಾಪಂ ನೌಕರರು ಜಿಲ್ಲಾ ಪಂಚಾಯತ್‌ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. 

Advertisement

ವಿಮಾನಮಟ್ಟಿ ಬಳಿಯ ಗಣೇಶ ದೇವಸ್ಥಾನದಿಂದ ಸೋಮವಾರ ಬೆಳಿಗ್ಗೆ ಮೆರವಣಿಗೆ ಮೂಲಕ ಜಿಪಂ ಕಚೇರಿ ಆವರಣಕ್ಕೆ ಆಗಮಿಸಿ, ಧರಣಿ ಆರಂಭಿಸಿದ ನೌಕರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ತಕ್ಷಣ ತಮ್ಮ ಬೇಡಿಕೆ ಈಡೇರಿಕೆಗೆ ಕ್ರಮ ವಹಿಸುವಂತೆ ಆಗ್ರಹಿಸಿದರು. 

ಧರಣಿನಿರತರನ್ನು ಉದ್ದೇಶಿಸಿ, ಮಾತನಾಡಿದ ಸಂಘಟನೆಯ ಮುಖಂಡ ಕೆ. ಲಕ್ಷ್ಮಿನಾರಾಯಣ ಭಟ್‌, ಸರ್ಕಾರ ಗ್ರಾಮ ಪಂಚಾಯಿತಿ ನೌಕರರನ್ನು ಕಡೆಗಣಿಸುತ್ತಲೇ ಬಂದಿದೆ. ನಾವು ಹಲವು ಬಾರಿ ಹೋರಾಟ ಮಾಡಿ, ಮನವಿ ಸಲ್ಲಿಸಿದರೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ದೂರಿದರು. 

ಗ್ರಾಪಂನ ಜಾಡಮಾಲಿಗೆ 12,870, ಜವಾನರಿಗೆ 10,010, ನೀರಗಂಟಿಗಳಿಗೆ 10,588, ಕರ ವಸೂಲಿಗಾರರಿಗೆ 12,122 ರೂ. ವೇತನ ಹಾಗೂ 398 ರೂ. ತುಟ್ಟಿಭತ್ಯೆ ನೀಡಲು ಪದೇ ಪದೇ ಆಗ್ರಹಿಸುತ್ತಿದ್ದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಕೆಗೆ ಇದುವರೆಗೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ನೀರಗಂಟಿಗಳಿಗೆ ಖಾಲಿ ಇರುವ ಕರ ವಸೂಲಿಗಾರರ ಹುದ್ದೆಗೆ ಭಡ್ತಿ, ಎಲ್ಲಾ ಗ್ರಾಪಂ ನೌಕರರಿಗೆ ಸೇವಾ ಪುಸ್ತಕ ತೆರೆಯುವುದು, ಸಂಗ್ರಹವಾದ ತೆರಿಗೆ ಹಣದಲ್ಲಿ ಸೇ.40ರಷ್ಟು ಹಣವನ್ನು ಸಿಬ್ಬಂದಿ ವೇತನಕ್ಕೆ ಮೀಸಲಿಡುವುದು, ತೆರಿಗೆ ಪರಿಷ್ಕರಣೆ ಮಾಡಿ, ಆದಾಯ ಮೂಲ ಹೆಚ್ಚಿಸಬೇಕು.

Advertisement

ಜನಶ್ರೀ ವಿಮೆ ಜಾರಿಮಾಡಿ ನೌಕರರಿಗೆ ಆರೋಗ್ಯ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಇನ್ನು ಸಂಬಳ ನೀಡಿಕೆಯಲ್ಲಿ ಸಾಕಷ್ಟು ವಿಳಂಬ ನೀತಿ ಅನುಸರಿಸಲಾಗುತ್ತದೆ. ಕೆಲ ಕಡೆಗಳಲ್ಲಿ 5 ವರ್ಷದ ಕಾಲ ಸಂಬಳವೇ ಬಂದಿಲ್ಲ. ಕೆಲ ಕಡೆಗಳಲ್ಲಿ 50 ತಿಂಗಳ ಸಂಬಳ ಬಾಕಿ ಉಳಿಸಿಕೊಳ್ಳಲಾಗಿದೆ.

ಇದರಿಂದ ಈ ಜನ ಉಪವಾಸ ಇರಬೇಕಾದ ಸ್ಥಿತಿ ನಿರ್ಮಾಣ ಆಗುತ್ತಿದೆ ಎಂದು ಬೇಸರಿಸಿದರು. ಸಂಘಟದ ಜಿಲ್ಲಾಧ್ಯಕ್ಷ ಕೆ.ಎಂ. ಉಮೇಶ್‌, ಕಾರ್ಯದರ್ಶಿ ಎಸ್‌.ಸಿ. ಶ್ರೀನಿವಾಸಾಚಾರ್‌, ಕೃಷ್ಣಮೂರ್ತಿ, ಓಂಕಾರಪ್ಪ, ಎಂ. ಚೇತನ್‌, ಚಂದ್ರಪ್ಪ, ಬಾಡಾ ನಾಗರಾಜ, ಕೆಂಚಪ್ಪ, ತಿಪ್ಪಣ್ಣ, ನರಸಿಂಹಪ್ಪ, ವೆಂಕಟೇಶ್‌, ಶೇಖರಪ್ಪ, ಹನುಮಂತಪ್ಪ, ರೇವಣ್ಣ, ಮಹಾಂತೇಶ್‌, ಪರಶುರಾಮ ಧರಣಿ ನೇತೃತ್ವ ವಹಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next