Advertisement

ಗೆದ್ದು ಗೌರವ ಉಳಿಸಿಕೊಂಡೀತೇ ಟೀಮ್‌ ಇಂಡಿಯಾ?

10:57 PM Jan 22, 2022 | Team Udayavani |

ಕೇಪ್‌ಟೌನ್‌: ಟೀಮ್‌ ಇಂಡಿಯಾ ವೈಟ್‌ವಾಶ್‌ ಭೀತಿಯಲ್ಲಿದೆ. ಸತತ 2 ಏಕದಿನ ಪಂದ್ಯಗಳನ್ನು ಸೋತು ಸರಣಿಯನ್ನು ಕಳೆದುಕೊಂಡ ರಾಹುಲ್‌ ಪಡೆ ರವಿವಾರ ಅಂತಿಮ ಪಂದ್ಯದಲ್ಲಿ ಈ ಅವಮಾನದಿಂದ ಪಾರಾಗುವುದು ಹೇಗೆ ಎಂಬ ಚಿಂತೆಯಲ್ಲಿದೆ. ನೂತನ ಕೋಚ್‌ ರಾಹುಲ್‌ ದ್ರಾವಿಡ್‌ ಪಾಲಿಗೂ ಇದೊಂದು ಸವಾಲಾಗಿ ಕಾಡಿದೆ.

Advertisement

ಎರಡೂ ಪಂದ್ಯಗಳಲ್ಲಿ “ಮಾಡರ್ನ್ ಡೇ’ ಕಾರ್ಯತಂತ್ರವನ್ನು ಜಾರಿಗೊಳಿಸುವಲ್ಲಿ ಟೀಮ್‌ ಇಂಡಿಯಾ ಸಂಪೂರ್ಣ ವಿಫ‌ಲವಾಗಿತ್ತು. ಬ್ಯಾಟಿಂಗ್‌, ಬೌಲಿಂಗ್‌ ವಿಭಾಗಗಳೆರಡರಲ್ಲೂ ತೀರಾ ಕಳಪೆ ಆಟವಾಡಿ ನಿರಾಸೆ ಮೂಡಿಸಿತ್ತು. ಜಿದ್ದಿಗೆ ಬಿದ್ದು ಆಡುವುದು, ಜೋಶ್‌ ತೋರು ವುದು, ಎದುರಾಳಿಯ ಮೇಲೆ ಘಾತಕವಾಗಿ ಎರಗುವುದು, ಊಹೂಂ.. ಈ ಯಾವುದೇ ರೀತಿಯ ಆಟವನ್ನು ಭಾರತ ಪ್ರದರ್ಶಿಸಲಿಲ್ಲ. ಹೀಗೆ ಬಂದು ಹಾಗೆ ಹೋಗಿ 50 ಓವರ್‌ ಬ್ಯಾಟಿಂಗ್‌ ನಡೆಸುವುದು, 50 ಓವರ್‌ ಬೌಲಿಂಗ್‌ ಮಾಡುವುದು..ಇಷ್ಟೇ ಯಾಂತ್ರಿಕವಾಗಿತ್ತು ನಮ್ಮವರ ಆಟ.

ಮುಖ್ಯವಾಗಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಭಾರತದ್ದು ಅತ್ಯಂತ ಕಳಪೆ ಹಾಗೂ ನೀರಸ ಪ್ರದರ್ಶನ. ಮೊದಲ ಪಂದ್ಯದಲ್ಲಿ ಬರೀ 30 ರನ್‌ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಎಡವಿತು. ದ್ವಿತೀಯ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದೂ ಮುನ್ನೂರರ ಗಡಿ ದಾಟಿ ಮುನ್ನುಗ್ಗಲು ವಿಫ‌ಲವಾಯಿತು.

ಬೌಲಿಂಗ್‌ ವೈಫ‌ಲ್ಯ
ಬೌಲಿಂಗ್‌ ವಿಭಾಗದ್ದು ಸಾಮೂಹಿಕ ವೈಫ‌ಲ್ಯ. ಭುವನೇಶ್ವರ್‌, ಅಶ್ವಿ‌ನ್‌ ಅವರಂಥ ಸೀನಿಯರ್‌ ಬೌಲರ್ ಎದುರಾಳಿಗೆ ಭೀತಿಯನ್ನೇ ಒಡ್ಡಲಿಲ್ಲ. ಬುಮ್ರಾ “ಕ್ಲಬ್‌ ಕ್ಲಾಸ್‌’ ಮಟ್ಟದಲ್ಲಿದ್ದಂತೆ ಕಂಡುಬಂತು. ಎರಡು ಪಂದ್ಯಗಳಿಂದ ಭಾರತ ಉರುಳಿಸಿದ್ದು ಬರೀ 7 ವಿಕೆಟ್‌!

ಗೆದ್ದು ಮರ್ಯಾದೆ ಉಳಿಸಿಕೊಳ್ಳಬೇಕಾದ ತೀವ್ರ ಒತ್ತಡದಲ್ಲಿರುವ ಭಾರತ, ಅಂತಿಮ ಪಂದ್ಯಕ್ಕಾಗಿ ಕೆಲವು ಬದಲಾವಣೆ ಮಾಡಿಕೊಳ್ಳುವ ಯೋಜನೆಯಲ್ಲಿದೆ. ಬ್ಯಾಟಿಂಗ್‌ ವಿಭಾಗದಲ್ಲಿ ಋತುರಾಜ್‌ ಗಾಯಕ್ವಾಡ್‌, ಸೂರ್ಯಕುಮಾರ್‌ ಯಾದವ್‌ ರೇಸ್‌ನಲ್ಲಿದ್ದಾರೆ. ವೆಂಕಟೇಶ್‌ ಅಯ್ಯರ್‌ ಜಾಗಕ್ಕೆ ಸೂರ್ಯಕುಮಾರ್‌ ಬರಬಹುದು. ಆದರೆ ಗಾಯಕ್ವಾಡ್‌ಗೆ ಸೂಕ್ತ ಜಾಗ ಕಾಣಿಸುತ್ತಿಲ್ಲ.

Advertisement

ಬೌಲಿಂಗ್‌ ವಿಭಾಗದಲ್ಲೂ “ಫ್ರೆಶ್‌ನೆಸ್‌’ ಅಗತ್ಯವಿದೆ. ಕೇಪ್‌ಟೌನ್‌ ಟ್ರ್ಯಾಕ್‌ ಹೆಚ್ಚು ಪೇಸ್‌ ಹಾಗೂ ಬೌನ್ಸ್‌ ಹೊಂದಿದೆ. ಭುವನೇಶ್ವರ್‌ ಬದಲು ಸಿರಾಜ್‌ ಅಥವಾ ದೀಪಕ್‌ ಚಹರ್‌ ಕಾಣಿಸಿಕೊಳ್ಳಬಹುದು. ಸ್ಪಿನ್‌ ವಿಭಾಗದಲ್ಲಿ ಬದಲಾವಣೆ ತರಬೇಕಾದರೆ ಜಯಂತ್‌ ಯಾದವ್‌ ಅವರನ್ನು ಪರಿಗಣಿಸಬಹುದು.

ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ರಾಹುಲ್‌ಗೆ ಪ್ರತಿಷ್ಠೆಯ ಪಂದ್ಯ
ಈ ಸರಣಿಯಲ್ಲಿ ಕೆ.ಎಲ್‌. ರಾಹುಲ್‌ ನಾಯಕತ್ವ ವಹಿಸಿದ ಮೂರೂ ಪಂದ್ಯಗಳಲ್ಲಿ ಭಾರತ ಪರಾಭವಗೊಂಡಿದೆ. ಹೀಗಾಗಿ ಯಶಸ್ಸಿಗಾಗಿ ಇರುವುದು ಒಂದೇ ಅವಕಾಶ. ಇದರಲ್ಲಿ ಗೆದ್ದರೆ ರಾಹುಲ್‌ ಜತೆಗೆ ಭಾರತ ತಂಡದ ಪ್ರತಿಷ್ಠೆಯೂ ಒಂದು ಮಟ್ಟದಲ್ಲಿ ಉಳಿದಂತಾಗುತ್ತದೆ.

ನಿಶ್ಚಿಂತೆಯಲ್ಲಿ ದಕ್ಷಿಣ ಆಫ್ರಿಕಾ
ಆದರೆ ದಕ್ಷಿಣ ಆಫ್ರಿಕಾ ಎಂದಿನಂತೆ ನಿಶ್ಚಿಂತೆಯಲ್ಲಿದೆ. ಸೆಂಚುರಿಯನ್‌ ಟೆಸ್ಟ್‌ ಪಂದ್ಯ ಸೋತ ಬಳಿಕ ಎಚ್ಚೆತ್ತುಕೊಂಡು ಹೋರಾಟ ಸಂಘಟಿಸಿದ ಆತಿಥೇಯರ ಆಟ ನಿಜಕ್ಕೂ ನಮ್ಮವರಿಗೊಂದು ಪಾಠವಾಗಬೇಕಿತ್ತು. ಆದರೆ ಹಾಗಾಗಲಿಲ್ಲ.

ಪಾರ್ಲ್ ನಿಂದ ಕೇಪ್‌ಟೌನ್‌ಗೆ
ಮೊದಲೆರಡೂ ಪಂದ್ಯಗಳನ್ನು ಪಾರ್ಲ್ ನಲ್ಲಿ ಆಡಲಾಗಿತ್ತು. ಅಂತಿಮ ಪಂದ್ಯ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ ಅಂಗಳದಲ್ಲಿ ನಡೆಯಲಿದೆ. ಇಲ್ಲಿ ಆಡಲಾದ ಅಂತಿಮ ಟೆಸ್ಟ್‌ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಸೋತಿತ್ತು. ಇದೀಗ ಅಂತಿಮ ಏಕದಿನ ಪಂದ್ಯದ ಸವಾಲು.

ಸೆಂಚುರಿಯನ್‌ನ ಪ್ರಥಮ ಟೆಸ್ಟ್‌ ಪಂದ್ಯದ ಗೆಲುವಿನೊಂದಿಗೆ ಸರಣಿ ಆರಂಭಿಸಿದ್ದ ಭಾರತ, ಇದನ್ನು ಗೆಲುವಿನೊಂದಿಗೇ ಮುಗಿಸಲಿ ಎಂಬುದು ಅಭಿಮಾನಿಗಳ ಹಾರೈಕೆ.

ಸಂಭಾವ್ಯ ತಂಡಗಳು
ಭಾರತ: ಕೆ.ಎಲ್‌. ರಾಹುಲ್‌ (ನಾಯಕ), ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಠಾಕೂರ್‌, ಆರ್‌. ಅಶ್ವಿ‌ನ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಯಜುವೇಂದ್ರ ಚಹಲ್‌/ಜಯಂತ್‌ ಯಾದವ್‌.
ದಕ್ಷಿಣ ಆಫ್ರಿಕಾ: ಕ್ವಿಂಟನ್‌ ಡಿ ಕಾಕ್‌, ಜಾನೆಮನ್‌ ಮಲಾನ್‌, ಟೆಂಬ ಬವುಮ (ನಾಯಕ), ಐಡನ್‌ ಮಾರ್ಕ್‌ರಮ್‌, ರಸ್ಸಿ ವಾನ್‌ ಡರ್‌ ಡುಸೆನ್‌, ಡೇವಿಡ್‌ ಮಿಲ್ಲರ್‌, ಆ್ಯಂಡಿಲ್‌ ಫೆಲುಕ್ವಾಯೊ, ಕೇಶವ್‌ ಮಹಾರಾಜ್‌, ಡ್ವೇನ್‌ ಪ್ರಿಟೋರಿಯಸ್‌/ಮಾರ್ಕೊ ಜಾನ್ಸೆನ್‌, ಸಿಸಾಂಡ ಮಗಾಲ, ತಬ್ರೇಜ್‌ .
ಆರಂಭ: 2.00
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next