Advertisement

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

12:34 AM May 23, 2019 | Team Udayavani |
ಲೋಕಸಭಾ ಚುನಾವಣೆಯ ಮತ ಎಣಿಕೆಗೂ ಮುನ್ನವೇ ಅನುಮಾನಾಸ್ಪದವಾಗಿ ಇವಿಎಂಗಳನ್ನು ಸಾಗಾಟ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಕಾಂಗ್ರೆಸ್‌, ಎಸ್‌ಪಿ-ಬಿಎಸ್‌ಪಿ ಕಾರ್ಯಕರ್ತರು ರಾತ್ರೋರಾತ್ರಿ ‘ಚೌಕಿದಾರ’ರಾಗಿ ಬದಲಾಗಿದ್ದಾರೆ!

ಉತ್ತರಪ್ರದೇಶ, ಪಂಜಾಬ್‌, ಹರ್ಯಾಣ, ಬಿಹಾರಗಳಲ್ಲಿ ಇವಿಎಂಗಳ ಸಾಗಾಟದ ವರದಿ ಪ್ರತಿಪಕ್ಷಗಳಲ್ಲಿ ಆತಂಕ ಮೂಡಿಸಿದ್ದು, ಅನೇಕ ಕಾರ್ಯಕರ್ತರು ಇವಿಎಂಗಳನ್ನು ಇಟ್ಟಿರುವ ಸ್ಟ್ರಾಂಗ್‌ ರೂಂಗಳ ಹೊರಗೆ ಕಾವಲು ಕಾಯಲಾರಂಭಿಸಿದ್ದಾರೆ. ಮಂಗಳವಾರ ಹಾಗೂ ಬುಧವಾರ ರಾತ್ರಿಯಿಡೀ ಎಸ್‌ಪಿ -ಬಿಎಸ್‌ಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಸ್ಟ್ರಾಂಗ್‌ ರೂಂ ಹೊರಗೆಯೇ ಠಿಕಾಣಿ ಹೂಡಿದ್ದಾರೆ. ಉತ್ತರಪ್ರದೇಶದ ಮೀರತ್‌ ಮತ್ತು ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ರಾತ್ರಿಯಿಡೀ ಸ್ಟ್ರಾಂಗ್‌ ರೂಂ ಹೊರಗೇ ಕಳೆದಿದ್ದಾರೆ. ಚಂಡೀಗಡದಲ್ಲೂ ಕಾಂಗ್ರೆಸ್‌ ಕಾರ್ಯಕರ್ತರು ಇದೇ ಕೆಲಸದಲ್ಲಿ ನಿರತರಾಗಿದ್ದು, ಇವಿಎಂಗಳು ಸ್ಟ್ರಾಂಗ್‌ರೂಂನಿಂದ ಎಲ್ಲೂ ಹೋಗದಂತೆ ನೋಡಿಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಭೋಪಾಲ್ ಕ್ಷೇತ್ರದ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌, ಕೇರಳದಲ್ಲಿ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಸೇರಿದಂತೆ ಪ್ರಮುಖ ಅಭ್ಯರ್ಥಿಗಳು ಸ್ಟ್ರಾಂಗ್‌ ರೂಂಗೆ ಭೇಟಿ ನೀಡಿದ್ದಾರೆ.

ವಿಪಕ್ಷಗಳ ವಿರುದ್ಧ ಶಾ ಕಿಡಿ
ಮತಯಂತ್ರಗಳ (ಇವಿಎಂ) ವಿಶ್ವಾಸ ನೀಯತೆಯ ಬಗ್ಗೆ ಪ್ರಶ್ನಿಸಲಾರಂಭಿಸಿರುವ ವಿರೋಧ ಪಕ್ಷಗಳು ದೇಶದ ಜನತೆ ನೀಡಿರುವ ತೀರ್ಪಿಗೆ ಅಪಮಾನ ಎಸಗುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಟೀಕಿಸಿದ್ದಾರೆ. ಟ್ವಿಟರ್‌ನಲ್ಲಿ ಈ ಕುರಿತಾಗಿ ಹೇಳಿರುವ ಅವರು, ಪ್ರತಿಪಕ್ಷಗಳ ಈ ಕೂಗು ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಹೊರಬಿದ್ದಿದ್ದು, ದೇಶದ ಪ್ರಜಾಪ್ರಭುತ್ವವನ್ನು ಹಂತ ಹಂತವಾಗಿ ಕ್ಷೀಣಿಸುವಂತೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. 6ನೇ ಸುತ್ತಿನ ಮತದಾನ ಮುಕ್ತಾಯವಾದ ನಂತರ ಇವಿಎಂಗಳ ಬಗ್ಗೆ ದೂರ ಲಾರಂಭಿಸಿದ ವಿಪಕ್ಷಗಳು, ಇತ್ತೀಚೆಗೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದ ನಂತರ ತಮ್ಮ ಅಸಮಾಧಾನವನ್ನು ದೊಡ್ಡ ಮಟ್ಟದಲ್ಲಿ ವ್ಯಕ್ತಪಡಿಸಲಾರಂಭಿಸಿವೆ. ಚುನಾವಣೋತ್ತರ ಸಮೀಕ್ಷೆಗಳನ್ನೇ ಆಧಾರವಾಗಿಟ್ಟು ಕೊಂಡು ಇವಿಎಂಗಳನ್ನು ದೂರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next