Advertisement

ಕೃಷ್ಣ ಪ್ಯಾಲೇಸ್‌ನಲ್ಲಿ ಆಹಾರ್‌ನ ನಾಲ್ಕನೇ ಮಾಸಿಕ ಸಭೆ

12:22 PM Apr 05, 2018 | Team Udayavani |

ಮುಂಬಯಿ: ಪ್ಲಾಸ್ಟಿಕ್‌ ಚೀಲ ನಿಷೇಧಿಸಿರುವ ಸರಕಾರದ ಕ್ರಮ ಸ್ವಾಗತಾರ್ಹವಾಗಿದೆ. ಆದರೆ ಪ್ಲಾಸ್ಟಿಕ್‌ನ ಬದಲಾಗಿ ಪರ್ಯಾಯ ವಸ್ತುಗಳ ಬಳಕೆಗೆ ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿಯಿಲ್ಲ. ಇದರಿಂದ ಹೊಟೇಲ್‌ ಉದ್ಯಮಕ್ಕೆ ಬಹಳ ತೊಂದರೆ ಎದುರಾದಂತಾಗಿದೆ. ಆಹಾರ್‌ ಪ್ಲಾಸ್ಟಿಕ್‌ ರಹಿತ ಚೀಲಗಳ ಉತ್ಪಾದಕರೊಂದಿಗೆ ಸಂಪರ್ಕಿಸಿ 2-3 ವಾರದೊಳಗೆ ಅದನ್ನು ತನ್ನ ಸದಸ್ಯರಿಗೆ ನೀಡಲು ಪ್ರಯತ್ನಿಸುತ್ತಿದ್ದು,  ಕಂಟ್ರೋಲ್‌ ಪೊಲ್ಯೂಷನ್‌ ಸೆಂಟ್ರಲ್‌ ಬೋರ್ಡ್‌ನಿಂದ ಮಾನ್ಯತೆಯನ್ನು ಪಡೆಯಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿರುವ ಆಹಾರ್‌ ಸೇವಾಕರದ ವಿರುದ್ಧ ಎಸ್‌ಎಲ್‌ಪಿ ಬರುವ ತಿಂಗಳಲ್ಲಿ ಅಂತಿಮ ವಿಚಾರಣೆಗೆ ಬರಲಿದೆ. ಕಾನೂನು ಬಾಹಿರ ಕುಕಿಂಗ್‌ ವಿರುದ್ಧ ಆಹಾರ್‌ ಸಲ್ಲಿಸಿರುವ ಅರ್ಜಿಯು ಮುಂಬಯಿ ಹೈಕೋರ್ಟ್‌ನಲ್ಲಿ ವಿಚಾರಣೆ ಬಂದಿದ್ದು, ನ್ಯಾಯಾಧೀಶರು ಎರಡು ವಾರದೊಳಗೆ ಮುಂಬಯಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ಇದರ ವಿರುದ್ಧ ತೆಗೆದುಕೊಂಡ ಕ್ರಮವನ್ನು ವಿವರಿಸಲು ಆದೇಶಿಸಿದೆ ಎಂದು ಆಹಾರ್‌ನ ಅಧ್ಯಕ್ಷ ಸಂತೋಷ್‌ ಆರ್‌. ಶೆಟ್ಟಿ ಅವರು ನುಡಿದರು.

Advertisement

ಮಾ. 27 ರಂದು ನಾನಾ ಚೌಕ್‌ನಲ್ಲಿರುವ ಕೃಷ್ಣ ಪ್ಯಾಲೇಸ್‌ ರೆಸಿಡೆನ್ಸಿಯಲ್ಲಿ ಸಂಜೆ ನಡೆದ ಆಹಾರ್‌ನ ನಾಲ್ಕನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಆಹಾರ್‌ನ ಪ್ರಯತ್ನದಿಂದ ಮಾಹೀಮ್‌ನಲ್ಲಿ 50 ಸಾವಿರ ರೂ. ಲಂಚವನ್ನು ಸ್ವೀಕರಿಸುತ್ತಿದ್ದ ಪೊಲೀಸ್‌ ಅಧಿಕಾರಿಯನ್ನು ಬಂಧಿಸಲಾಗಿದೆ. ಅದೇ ರೀತಿ ಆರ್‌ಟಿಐ ಮಾಹಿತಿ ಮುಖಾಂತರ ಹೊಟೇಲಿಗರಿಗೆ ತೊಂದರೆ ನೀಡಿ ಹಣಕ್ಕಾಗಿ ಪೀಡಿಸುತ್ತಿದ್ದ ವ್ಯಕ್ತಿಯನ್ನು ಬೋಯಿವಾಡಾ ಪೊಲೀಸರ ಸಹಕಾರದಿಂದ ಬಂಧಿಸಲಾಗಿದೆ. ಮಲಾಡ್‌, ಕಾಂದಿವಲಿ, ಬೊರಿವಲಿ ವಲಯದಲ್ಲಿ ಮಾಹಿತಿ ನೀಡಿ ಹಣವನ್ನು ದೋಚುತ್ತಿದ್ದ ಮಾಹಿತಿಗಾರರನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ. ಆಹಾರ್‌ಗೆ ಸದಸ್ಯರ ಲಿಖೀತ ದೂರು ಅಗತ್ಯವಾಗಿದ್ದು, ಲಿಖೀತ ದೂರು ಬಂದರೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು. ತ್ಯಾಜ್ಯವನ್ನು ಮಹಾನಗರ ಪಾಲಿಕೆ ಕೆಲವು ವಲಯಗಳಲ್ಲಿ ಎತ್ತುವುದನ್ನು ನಿಲ್ಲಿಸಿದ್ದು, ಅದರ ವಿರುದ್ಧ ಮಹಾನಗರ ಪಾಲಿಕೆಯ ಉಪಾಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಉಪಾಯುಕ್ತರು ಮನವಿಗೆ ಸ್ಪಂದಿಸಿದ್ದು, ವಿವಿಧ ವಾರ್ಡ್‌ಗಳಲ್ಲಿ ಹೊಟೇಲಿಗರಿಗೆ ಕಷ್ಟವನ್ನು ನೀಡಬಾರದೆಂದು ಅಧಿಕಾರಿಗಳಿಗೆ ಸುತ್ತೋಲೆಯನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ತ್ಯಾಜ್ಯ ಎತ್ತುವಿಕೆ ನಿಂತಲ್ಲಿ ಕಾನೂನಿನ ಮುಖಾಂತರ ಅದಕ್ಕೆ ಹೇಗ ಸ್ಪಂದಿಸಬೇಕು ಎಂಬುವುದಾಗಿ ನ್ಯಾಯವಾದಿಯೊಬ್ಬರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ವಿಷಯದಲ್ಲಿ ಚರ್ಚಿಸಲು ಮಹಾನಗರ ಪಾಲಿಕೆಯ ಆಯುಕ್ತರೊಂದಿಗೆ ಭೇಟಿಗೆ ಅವಕಾಶ ನೀಡಲು ಪತ್ರ ಬರೆಯಲಾಗಿದೆ. ಲೋಕಸಭಾ ಸದಸ್ಯ ರಾಹುಲ್‌ ಶೆವಾಳೆ ಇವರನ್ನು ಭೇಟಿಯಾಗಿ ಮನವಿ ಸಲ್ಲಿಸಮಾಗಿದೆ. ಆಹಾರ್‌ನ್ನು ಮುಂಬಯಿ ಮಹಾನಗರ ಪಾಲಿಕೆ ಪಟ್ಟಣದ ಮಾರಾಟ ಸಮಿತಿಯ ಸದಸ್ಯರನ್ನಾಗಿ ನಿಯೋಜಿಸಿದೆ. ಆಹಾರ್‌ ಡಾ| ಭುಜಬಲ್‌ ಅವರೊಂದಿಗೆ ಹೊಟೇಲ್‌ ಕಾರ್ಮಿಕರ ಆರೋಗ್ಯ ಪರೀಕ್ಷೆಗೆ ಒಪ್ಪಂದವನ್ನು ಮಾಡಿಕೊಂಡಿದೆ. ಡಾ| ಭುಜಬಲ್‌ ಮತ್ತು ಅವರ ತಂಡದವರು ವಿವಿಧ ಹೊಟೇಲ್‌ಗ‌ಳಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆಗೈದು ಪ್ರಮಾಣ ಪತ್ರವನ್ನು ನೀಡಲಿದ್ದಾರೆ. ಈ ಪ್ರಮಾಣ ಪತ್ರ ಆರ್‌ಎಸ್‌ಎಸ್‌ಎಐ ಮತ್ತು ಎಂಸಿಎಆರ್‌ಇ ಎರಡಕ್ಕೂ ಉಪಯೋಗವಾಗುತ್ತದೆ. ಸುಪ್ರೀಂಕೋರ್ಟ್‌ ಮಹತ್ವದ ತೀರ್ಪಿನಲ್ಲಿ ಹೊಟೇಲ್‌ ಒಳಗಡೆ ನೀಡುವ ಪ್ಯಾಕೇಜ್‌ ಫುಡ್‌ ಹಾಗೂ ತಂಪುಪಾನೀಯಗಳಿಗೆ ಎಂಆರ್‌ಪಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಬಹುದು ಎಂದು ತಿಳಿಸಿದೆ ಎಂದು ಅವರು ನುಡಿದರು.

ಸಲಹೆಗಾರರುಗಳಾದ ಎ. ಬಿ. ಶೆಟ್ಟಿ, ನಾರಾಯಣ ಆಳ್ವ, ಸುಧಾಕರ ವೈ. ಶೆಟ್ಟಿ ಅವರು ಮಹತ್ವದ ಸಲಹೆ-ಸೂಚನೆಗಳನ್ನು ನೀಡಿದರು. ಆಹಾರ್‌ನ ಉಪಸಮಿತಿಯ ನೀರಜ್‌ ಶೆಟ್ಟಿ, ಮಹೇಶ್‌ ಶೆಟ್ಟಿ, ಅತೀಫ್‌ ರಸೂಲ್‌, ಸೋಲ್ಜರ್‌ ಹಾಗೂ ಡಾ| ಸತೀಶ್‌ ಶೆಟ್ಟಿ ಇವರು ತಮ್ಮ ತಮ್ಮ ಸಮಿತಿಗಳ ಸಾಧನೆಯನ್ನು ವಿವರಿಸಿದರು.

ವಿವಿಧ ವಲಯಗಳ ಉಪಾಧ್ಯಕ್ಷರುಗಳಾದ ವಲಯ ಎರಡರ ಕೃಷ್ಣ ವಿ. ಶೆಟ್ಟಿ, ವಲಯ ಮೂರರ ವಿಜಯ್‌ ಕೆ. ಶೆಟ್ಟಿ, ವಲಯ ನಾಲ್ಕರ ಸುರೇಶ್‌ ಎಸ್‌. ಶೆಟ್ಟಿ, ವಲಯ ಐದರ ವಿಜಯ್‌ ಎಸ್‌. ಶೆಟ್ಟಿ, ವಲಯ ಏಳರ ರಾಜನ್‌ ಶೆಟ್ಟಿ, ವಲಯ ಎಂಟರ ಭುಜಂಗ ಶೆಟ್ಟಿ, ವಲಯ ಒಂಭತ್ತರ ಕರುಣಾಕರ ಶೆಟ್ಟಿ, ವಲಯ ಹತ್ತರ ಪ್ರಭಾಕರ ಶೆಟ್ಟಿ ಇವರು ತಮ್ಮ ತಮ್ಮ ವಲಯಗಳ ಪ್ರಗತಿಯನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ ಡಾ| ಭುಜಬಲ್‌ ಇವರನ್ನು ಗೌರವಿಸಲಾಯಿತು. ಮೂರು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿ ಮತ್ತೆ ಪುನಃ ಆಯ್ಕೆಗೊಂಡ ಉಪಾಧ್ಯಕ್ಷ ಕೃಷ್ಣ ವಿ. ಶೆಟ್ಟಿ ಅವರನ್ನು ಗೌರವಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಆಹಾರ್‌ಗೆ ಬಂದ ಪ್ರಶಂಸಾ ಪತ್ರಗಳನ್ನು ವಾಚಿಸಿ, ಸಭೆಯಲ್ಲಿ ಪಾಲ್ಗೊಂಡ ಒಂಭತ್ತು ವಲಯಗಳ ಮಾಲಕರನ್ನು ಪರಿಚಯಿಸಿ ವಂದಿಸಿದರು. ಅವರನ್ನು ಅಧ್ಯಕ್ಷ ಸಂತೋಷ್‌ ಶೆಟ್ಟಿ ಗೌರವಿಸಿದರು. ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next