ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯನ್ನು ತಂಬಾಕು ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಧಿಕಾರಿಗಳ ತಂಡ ಅಹರ್ನಿಶಿ ಶ್ರಮಿಸುತ್ತಿದೆ. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಕೋಟಾ ಕಾಯ್ದೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿರುವ ಹಿನ್ನೆಲೆಯಲ್ಲಿ 2019ರಲ್ಲೇ ದಾವಣಗೆರೆ ನಗರ ತಂಬಾಕು ರಹಿತ ನಗರಿ ಆಗಿದೆ. ದಾವಣಗೆರೆ ನಗರದ ಜೊತೆಗೆ ದಾವಣಗೆರೆ ಮತ್ತು ಹೊನ್ನಾಳಿ ತಾಲೂಕುಗಳನ್ನು ತಂಬಾಕು ರಹಿತ ತಾಲೂಕುಗಳು ಎಂಬುದಾಗಿ ಘೋಷಣೆ ಮಾಡಲಾಗಿದೆ.
2020ರಲ್ಲಿ ದಾವಣಗೆರೆ ಜಿಲ್ಲೆಯನ್ನ ತಂಬಾಕು ರಹಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ ನಂತರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕೋಟಾ ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ನಿಗದಿತ ಕಾಲಾವಧಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿಗಳ ತಂಡ ಅಂಗಡಿ, ಹೋಟೆಲ್, ವಾಣಿಜ್ಯ ಸಮುತ್ಛಯ, ಅತಿ ಹೆಚ್ಚಾಗಿ ಜನರು ಸೇರುವ ಬಸ್ ನಿಲ್ದಾಣ, ಸಿನಿಮಾ ಮಂದಿರ ಇತರೆ ಜನನಿಬಿಡ ಪ್ರದೇಶಗಳಲ್ಲಿ ಮಿಂಚಿನ ದಾಳಿ ನಡೆಸಿ, ಕೋಟ್ಟಾದ ಕಾಯ್ದೆ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಜೊತೆಗೆ ತಂಬಾಕು ಉತ್ಪನ್ನಗಳಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಜಾಗೃತಿ, ಮನವರಿಕೆ ಮೂಡಿಸುತ್ತಿರುವ ಕಾರಣಕ್ಕೆ ತಂಬಾಕು ಉತ್ಪನ್ನಗಳ ಬಳಕೆ ಪ್ರಮಾಣ ಕಡಿಮೆ ಆಗುತ್ತಿರುವುದು ಕಂಡು ಬರುತ್ತಿದೆ.
2021ರಲ್ಲಿ ಕೋಟ್ಟಾದ 4,5,6 6ಎ, 6ಬಿ ಮತ್ತು 7 ಕಾಯ್ದೆಗಳನ್ನು ಶೇ. 85 ರಷ್ಟು ಜಾರಿಗೊಳಿಸಿರುವ ಹೆಗ್ಗಳಿಕೆ ಜಿಲ್ಲಾ ತಂಬಾಕು ನಿಯಂತ್ರಣ ತಂಡಕ್ಕಿದೆ. ಈ ವರ್ಷ ಇನ್ನೂ ಹೆಚ್ಚು ಪರಿಣಾಮಕಾರಿ ಕೋಟ್ಟಾ ಕಾಯ್ದೆಯ ನಿಯಮಗಳ ಜಾರಿಗೆ ತರುವ ಮೂಲಕ ದಾವಣಗೆರೆ ಜಿಲ್ಲೆಯನ್ನು ವಾಸ್ತವಿಕವಾಗಿ ತಂಬಾಕು ರಹಿತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಕೆಲಸ ಮಾಡುತ್ತಿದೆ. ಅತಿ ಮುಖ್ಯವಾಗಿ ಶಾಲಾ-ಕಾಲೇಜುಗಳ ಆವರಣ ಸುತ್ತಮುತ್ತ 100 ಗಜಗಳ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಕೋಟ್ಟಾ ಕಾಯ್ದೆಯಡಿ ನಿಯಂತ್ರಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. 14 ವರ್ಷದೊಳಗಿನ ಮಕ್ಕಳ ಮೂಲಕ ತಂಬಾಕು ಉತ್ಪನ್ನ ಗಳಾದ ಬೀಡಿ, ಸಿಗರೇಟು, ಜರ್ದಾ, ಗುಟ್ಕಾ ಇತರೆಯದ್ದನ್ನು ತರಿಸುವುದು, ಮಕ್ಕಳ ಮುಂದೆ ಸೇವನೆ ಮಾಡುವುದು ಕೋಟ್ಟಾ ಕಾಯ್ದೆ ಅನ್ವಯ ಅಪರಾಧ ಎಂಬುದನ್ನು ಮಕ್ಕಳ ಮೂಲಕ ಪೋಷಕರ ತಿಳಿಸುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ ಅನೇಕ ಕುಟುಂಬಗಳಲ್ಲಿ ಮಕ್ಕಳಿಂದ ಬೀಡಿ, ಸಿಗರೇಟು, ಗುಟ್ಕಾ ತರಿಸುವುದು ಕಡಿಮೆ ಆಗಿದೆ ಎನ್ನುತ್ತಾರೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ| ಜಿ.ಡಿ. ರಾಘವನ್.
ಜಿಲ್ಲಾ ತಂಬಾಕು ನಿಯಂತ್ರಣ ತಂಡಕ್ಕೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವರ್ಷಕ್ಕೆ 100 ದಾಳಿ ನಡೆಸಿ, ನಿಯಮಗಳ ಉಲ್ಲಂಘನೆ ಮಾಡಿದವರಿಂದ ದಂಡ ವಸೂಲಿ ಮಾಡುವ ಜೊತೆಗೆ ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಜಗಿಯುವ ಮತ್ತು ಸೇದುವ ತಂಬಾಕು ಉತ್ಪನ್ನಗಳ ಬಳಕೆ ನಿಯಂತ್ರಣದ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ತಂಡದ ಕಾರ್ಯಚಟುವಟಿಕೆ ಹಿನ್ನೆಲೆಯಲ್ಲಿ ಈಚೆಗೆ ಬಸ್, ಸಾರ್ವಜನಿಕ ವಾಹನಗಳಲ್ಲಿ ಬೀಡಿ, ಸಿಗರೇಟು ಸೇವನೆ ಮಾಡುವುದು ಬಹಳಷ್ಟು ಕಡಿಮೆ ಆಗಿದೆ ಎನ್ನುತ್ತಾರೆ ಅವರು.
ಸಾರಿಗೆ ಸಂಸ್ಥೆ ಒಳಗೊಂಡಂತೆ ಹೆಚ್ಚು ಜನಸಂದಣಿಯ ಕಾರ್ಖಾನೆ, ಹೋಟೆಲ್, ಸಿನಿಮಾ ಮಂದಿರಗಳಲ್ಲೂ ನಿಗದಿತ 50 ಜಾಗೆಯಲ್ಲಿ ಸಭೆಗಳ ನಡೆಸಿ, ಕೋಟ್ಟಾ ಕಾಯ್ದೆ, ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿ ಕಾಯ್ದೆ ಜಾರಿಗೆ ತರಲಾಗುವುದು ಎಂದು ಡಾ| ರಾಘವನ್ ತಿಳಿಸಿದರು.
ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ಸಾವು, ನೋವು, ಕುಟುಂಬಗಳು ಅನುಭವಿಸುವ ಸಂಕಷ್ಟ ದೂರ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡದ ಜೊತೆಗೆ ಸಾರ್ವಜನಿಕರ ಸಹಭಾಗಿತ್ವವೂ ಅತಿ ಮುಖ್ಯವಾಗಿದೆ.
-ರಾ. ರವಿಬಾಬು