ಮುಂಬಯಿ: ಆಹಾರ್‌ನ ನಿಯೋಗವು ಸಿಎಎಸ್‌ಟಿ ಇದರ ನಿರ್ದೇಶಕರಾದ ರವೀಂದರ್ ಸರೂಪ್ ಅವರನ್ನು ಭೇಟಿಯಾಗಿ ಜಿಎಸ್‌ಟಿಯಿಂದ ಹೊಟೇಲ್ ಉದ್ಯಮಕ್ಕೆ ಆದ ತೊಂದರೆಯನ್ನು ನಿವಾರಿಸಲು ಮನವಿಯನ್ನು ನೀಡಿ ಇದರ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಗಿದೆ. ನಿಯೋಗವು ಮಹಾರಾಷ್ಟ್ರ ಆಹಾರ ಮತ್ತು ಔಷಧಿ ಪ್ರಾಧಿಕಾರದ ಕಮಿಷನರ್ ಪಲ್ಲವಿ ದರಾಡೆ ಅವರನ್ನು ಭೇಟಿಯಾಗಿ ಎಫ್‌ಎಸ್‌ಎಸ್‌ಎಸ್‌ಎಐಯಿಂದ ಹೊಟೇಲ್ ಉದ್ಯಮಕ್ಕೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿ ಮನವಿಯನ್ನು ಸಲ್ಲಿಸಿದ್ದು, ಈ ಸಮಸ್ಯೆಗಳನ್ನು ನಿವಾರಿಸಲು ಆಶ್ವಾಸನೆ ನೀಡಿದ್ದಾರೆ. ಆಹಾರ್‌ನ ನಿಯೋಗವು ಎಫ್‌ಎಸ್‌ಎಸ್‌ಐ ಇದರ ಸಿಇಒ ಪವನ್ ಅಗರ್‌ವಾಲ್ ಅವರನ್ನು ಭೇಟಿಯಾಗಿ ಎಫ್‌ಎಸ್‌ಎಸ್‌ಎಐಯ ಕಾಯಿದೆಯಿಂದ ಆಗುತ್ತಿರುವ ವಿವಿಧ ತೊಂದರೆಗಳ ಬಗ್ಗೆ ಮನವರಿಕೆ ಮಾಡಿ ಮನವಿಯನ್ನು ಸಲ್ಲಿಸಿದೆ. ಆಹಾರ್ ಮಹಾರಾಷ್ಟ್ರ ಮುಖ್ಯಮಂತ್ರಿಗಳ ರೈತ ಸಹಾಯನಿಧಿಗೆ 10 ಲಕ್ಷ ರೂ. ಗಳ ನಿಧಿಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಚೆಕ್ ಮುಖಾಂತರ ರವಾನಿಸಿ ಮಾನವೀಯತೆ ಮೆರೆದಿದೆ ಎಂದು ಆಹಾರ್‌ನ ಅಧ್ಯಕ್ಷ ಆದರ್ಶ್ ಶೆಟ್ಟಿ ಅವರು ನುಡಿದರು.
ಆ. 21ರಂದು ಕುರ್ಲಾ ಪೂರ್ವದ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ನಡೆದ ಆಹಾರ್‌ನ 8ನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಹಾರ್‌ನ ನಿಯೋಗವು ಮಹಾರಾಷ್ಟÅ ಕಾರ್ಮಿಕ ಆಯುಕ್ತ ವೈ. ಇ. ಕೆರೂರೆ ಅವರನ್ನು ಭೇಟಿಯಾಗಿ ಇತ್ತೀಚೆಗೆ ನಾಗಪುರ ಹೈಕೋರ್ಟ್ ಕನಿಷ್ಠ ವೇತನದ ವಿಷಯದಲ್ಲಿ ನೀಡಿದ ಆದೇಶದ ಬಗ್ಗೆ ಚರ್ಚಿಸಿ, ಶೀಘ್ರದಲ್ಲಿ ತಮ್ಮ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸುವಂತೆ ವಿನಂತಿಸಿದೆ. ಹೆಸರು ಸೂಚಿಯ ಬಗ್ಗೆ ಆಹಾರ್ ಮಹಾರಾಷ್ಟ್ರ ಸರಕಾರದ ಯು. ಡಿ. ಡಿಪಾರ್ಟ್‌ಮೆಂಟ್‌ಗೆಸ್ಪಷ್ಟೀಕರಣದ ಬಗ್ಗೆ ಪತ್ರವನ್ನು ಬರೆದಿದ್ದು, ಆ ಡಿಪಾರ್ಟ್‌ಮೆಂಟ್ ಪರವಾನಿಗೆ ಖಾತೆಗೆ ಪತ್ರವನ್ನು ಬರೆದು ಆಹಾರ್‌ನ ಪತ್ರದಂತೆ ಕೂಡಲೇ ಸ್ಪಷ್ಟೀಕರಣವನ್ನು ನೀಡಬೇಕು ಎಂದು ಆದೇಶಿಸಿದೆ. ಪರವಾನಿಗೆ ಖಾತೆ ಆಹಾರ್‌ಗೆ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಮಹಾನಗರ ಪಾಲಿಕೆಗೆ ಅರ್ಜಿಯನ್ನು ಸಲ್ಲಿಸಿದೆ. ಹಾಗಾಗಿ ಶೀಘ್ರದಲ್ಲೇ ಸ್ಪಷ್ಟೀಕರಣ ನಮಗೆ ಲಭಿಸಲಿದೆ. ಸದಸ್ಯರು ಚಪ್ರಾ ಅಥವಾ ಪ್ರೊಜೆಕ್ಷನ್ ಅನ್ನು ಉಪಯೋಗಿಸುತ್ತಿದ್ದಲ್ಲಿ ಅದಕ್ಕೆ ಮಹಾನಗರ ಪಾಲಿಕೆಯಿಂದ ಪರವಾನಿಗೆಯನ್ನು ಪಡೆಯುವುದು ಅಗತ್ಯವಾಗಿದೆ. ಆಹಾರ್‌ನ 38ನೇ ವಾರ್ಷಿಕ ಮಹಾಸಭೆಯು ಡಿ. 21ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸರ್ವ ಸದಸ್ಯರು ಸಹಕರಿಸಬೇಕು. ಹೊಟೇಲ್ ಉದ್ಯಮಕ್ಕೆ ಆಗುತ್ತಿರುವ ಜಿಎಸ್‌ಟಿ ತೊಂದರೆಯ ವಿರುದ್ಧ ಆಹಾರ್ ಫೇಸ್‌ಬುಕ್‌ನಲ್ಲಿ ಸರ್ವರೂ ತಮ್ಮ ಅನಿಸಿಕೆಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ವಿನಂತಿಸಿದರು.
ಮಾಜಿ ಅಧ್ಯಕ್ಷರು ಹಾಗೂ ಸಲಹೆಗಾರರಾದ ಶಿವರಾಮ್ ಶೆಟ್ಟಿ, ಸುಧಾಕರ ವೈ. ಶೆಟ್ಟಿ ಅವರು ತಮ್ಮ ಅನಿಸಿಕೆಗಳನ್ನು ಹಾಗೂ ಸಲಹೆ-ಸೂಚನೆಗಳನ್ನು ನೀಡಿದರು. ಗತ ಉಪಾಧ್ಯಕ್ಷ ಸುಂದರ್ ಶೆಟ್ಟಿ, ಮಾಜಿ ಕಾರ್ಯದರ್ಶಿ ಹಾಗೂ ಬಂಟರ ಸಂಘದ ಪ್ರಸ್ತುತ ಅಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಮಾತನಾಡಿದರು. ವಲಯ ನಾಲ್ಕರ ಉಪಾಧ್ಯಕ್ಷ ಸುನಿಲ್ ಶೆಟ್ಟಿ ಅವರು ಸ್ವಾಗತಿಸಿದರು.
ಆಹಾರ್‌ನ ಉಪಸಮಿತಿಯ ಅಧ್ಯಕ್ಷ ಪ್ರಮೋದ್ ನಾಯಕ್, ನಿರಂಜನ್ ಶೆಟ್ಟಿ ಅವರು ತಮ್ಮ ಉಪಸಮಿತಿಗಳ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಆಹಾರ್‌ನ ವಲಯ ಒಂದರ ಉಪಾಧ್ಯಕ್ಷ ಮಹೇಂದ್ರ ಕರ್ಕೇರ, ವಲಯ ಎರಡರ ಉಪಾಧ್ಯಕ್ಷ ಕೃಷ್ಣ ವಿ. ಶೆಟ್ಟಿ, ವಲಯ ಮೂರರ ಉಪಾಧ್ಯಕ್ಷ ವಿಜಯ್ ಶೆಟ್ಟಿ, ವಲಯ ನಾಲ್ಕರ ಉಪಾಧ್ಯಕ್ಷ ಸುನೀಲ್ ಶೆಟ್ಟಿ, ವಲಯ ಐದರ ಉಪಾಧ್ಯಕ್ಷ ರವೀಂದ್ರನಾಥ ನೀರೆ, ವಲಯ ಆರರ ಉಪಾಧ್ಯಕ್ಷ ಅಮರ್ ಶೆಟ್ಟಿ, ವಲಯ ಏಳರ ಉಪಾಧ್ಯಕ್ಷ ರಾಜನ್ ಶೆಟ್ಟಿ, ವಲಯ ಎಂಟರ ಉಪಾಧ್ಯಕ್ಷ ಜಗದೀಶ್ ಶೆಟ್ಟಿ, ವಲಯ ಒಂಭತ್ತರ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ವಲಯ ಹತ್ತರ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ತಮ್ಮ ವಲಯಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಪಾಲ್ಗೊಂಡ ವಿವಿಧ ಮಳಿಗೆಗಳ ಪ್ರಾಯೋಜಕರನ್ನು ಗೌರವ ಜತೆ ಕಾರ್ಯದರ್ಶಿ ವಿಶ್ವಪಾಲ್ ಎಸ್. ಶೆಟ್ಟಿ ಅವರು ಪರಿಚಯಿಸಿದರು. ಅಧ್ಯಕ್ಷ ಆದರ್ಶ್ ಶೆಟ್ಟಿ ಅವರು ಪ್ರಾಯೋಜಕರನ್ನು ಗೌರವಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್. ಶೆಟ್ಟಿ ವಂದಿಸಿದರು. ಸದಸ್ಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.