Advertisement

ಆಹಾ, ಆಂಧ್ರ ಚಟ್ನಿ

07:09 PM Jun 18, 2019 | mahesh |

ಆಂಧ್ರದ ಜೊತೆಗೆ ಗಡಿಯನ್ನು ಹಂಚಿಕೊಂಡಿರುವ ಕರ್ನಾಟಕ, ಅಲ್ಲಿನ ಆಹಾರಶೈಲಿಗೂ ಮಾರು ಹೋಗಿರುವುದು ಸುಳ್ಳಲ್ಲ. ಅದಕ್ಕೆ ಸಾಕ್ಷಿ ನಮ್ಮಲ್ಲಿರುವ ಆಂಧ್ರಶೈಲಿಯ ಹೋಟೆಲ್‌ಗ‌ಳು. ಆಂಧ್ರದ ಅಡಿಗೆ ಖಾರದಲ್ಲೂ, ರುಚಿಯಲ್ಲೂ ಒಂದು ಕೈ ಮಿಗಿಲು. ಅದರಲ್ಲೂ ಅಲ್ಲಿನ ವೈವಿಧ್ಯಮಯ ಚಟ್ನಿಗಳನ್ನು ನೀವೊಮ್ಮೆ ಸವಿಯಲೇಬೇಕು. ಅದಕ್ಕೆಂದೇ ಈ ರೆಸಿಪಿಗಳು…

Advertisement

1. ಗೊಂಗುರ (ಪುಂಡಿ ಸೊಪ್ಪು) ಚಟ್ನಿ: (ಗೊಂಗುರವನ್ನು ಕನ್ನಡದಲ್ಲಿ ಪುಂಡಿ ಸೊಪ್ಪು ಎನ್ನುತ್ತಾರೆ)
ಬೇಕಾಗುವ ಸಾಮಗ್ರಿ: ಪುಂಡಿ ಸೊಪ್ಪು- ಅರ್ಧ ಕೆ.ಜಿ., ಹಸಿರುಮೆಣಸು- 10, ಎಣ್ಣೆ, ಸಾಸಿವೆ, ಉಪ್ಪು, ಇಂಗು, ಕರಿಬೇವಿನಸೊಪ್ಪು.

ಮಾಡುವ ವಿಧಾನ: ಪುಂಡಿ ಸೊಪ್ಪನ್ನು ಚೆನ್ನಾಗಿ ತೊಳೆದು, ಬಾಣಲೆಯಲ್ಲಿ ಸೊಪ್ಪು ಮುಳುಗುವವರೆಗೂ ನೀರು ಹಾಕಿ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ. ನಂತರ ಸೊಪ್ಪು ಬಸಿದು, ನೀರನ್ನು ಚೆಲ್ಲಿ. ಬಸಿದ ಸೊಪ್ಪಿನ ಜೊತೆಗೆ ಹಸಿರುಮೆಣಸು (ಬೇಕಿದ್ದರೆ ಮಧ್ಯಮ ಗಾತ್ರದ ಬೆಳ್ಳುಳ್ಳಿ ಹಾಕಬಹುದು), ಉಪ್ಪು ಹಾಕಿ ನುಣ್ಣಗೆ ರುಬ್ಬಿರಿ. ಬಾಣಲೆಯಲ್ಲಿ ಎಣ್ಣೆ ಹಾಕಿ, ಸಾಸಿವೆ, ಕರಿಬೇವು, ಇಂಗು ಹಾಕಿ ಒಗ್ಗರಣೆ ಮಾಡಿಕೊಂಡು, ರುಬ್ಬಿದ ಪುಂಡಿಸೊಪ್ಪನ್ನು ಹಾಕಿ ಕೈ ಆಡಿಸಿ. (ಹಸಿರುಮೆಣಸಿನ ಬದಲು ಕೆಂಪು ಮೆಣಸನ್ನೂ ಬಳಸಬಹುದು)

2. ಬದನೆಕಾಯಿ ಚಟ್ನಿ
ಬೇಕಾಗುವ ಸಾಮಗ್ರಿ: ಗುಂಡು ಬದನೆಕಾಯಿ-10, ಈರುಳ್ಳಿ- 3, ಹಸಿರು ಮೆಣಸಿನಕಾಯಿ-10, ಹುಣಸೆ ಹಣ್ಣು, ಕಡಲೆಕಾಯಿ ಎಣ್ಣೆ, ಸಾಸಿವೆ, ಕರಿಬೇವಿನಸೊಪ್ಪು, ಉಪ್ಪು.

ಮಾಡುವ ವಿಧಾನ: ಬದನೆಕಾಯಿ ಹಾಗೂ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಬದನೆಕಾಯಿ, ಈರುಳ್ಳಿ, ಹಸಿಮೆಣಸು ಹಾಗೂ ಹುಣಸೆ ಹಣ್ಣು ಹಾಕಿ ಕಂದು ಬಣ್ಣ ಬರುವವರೆಗೆ ಬಾಡಿಸಿ, ಆರಲು ಬಿಡಿ. ನಂತರ ಎಲ್ಲವನ್ನೂ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ಇದಕ್ಕೆ ಸಾಸಿವೆ, ಕರಿಬೇವು ಹಾಗೂ ಇಂಗಿನ ಒಗ್ಗರಣೆ ಕೊಟ್ಟರೆ ಬದನೆಕಾಯಿ ಚಟ್ನಿ ತಯಾರು.

Advertisement

3. ಟೊಮೇಟೊಕಾಯಿ ಚಟ್ನಿ
ಬೇಕಾಗುವ ಸಾಮಗ್ರಿ: ಟೊಮೇಟೊಕಾಯಿ (ಹಸಿರು ಬಣ್ಣದ್ದು)-10, ಈರುಳ್ಳಿ- 3, ಹಸಿಮೆಣಸಿನಕಾಯಿ -10, ಹುಣಸೆ ಹಣ್ಣು, ಎಣ್ಣೆ, ಸಾಸಿವೆ, ಕರಿಬೇವು, ಉಪ್ಪು.

ಮಾಡುವ ವಿಧಾನ: ಟೊಮೇಟೊ ಹಾಗೂ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಅದಕ್ಕೆ ಕತ್ತರಿಸಿದ ಟೊಮೇಟೊ,ಈರುಳ್ಳಿ, ಹಸಿಮೆಣಸು ಹಾಗೂ ಹುಣಸೆಹಣ್ಣನ್ನು ಹಾಕಿ, ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಬಾಡಿಸಿ, ಆರಿಸಿ. ಆರಿದ ಮಿಶ್ರಣವನ್ನು ಮಿಕ್ಸಿಗೆ ಹಾಕಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ, ಸಾಸಿವೆ, ಕರಿಬೇವು ಹಾಗೂ ಇಂಗಿನ ಒಗ್ಗರಣೆ ಕೊಟ್ಟರೆ ಟೊಮೇಟೊ ಚಟ್ನಿ ರೆಡಿ. (ಬೇಕಾದರೆ ರುಬ್ಬುವಾಗ ನಾಲ್ಕೈದು ಎಸಳು ಬೆಳ್ಳುಳ್ಳಿ ಹಾಕಬಹುದು)

4. ಹಸಿರುಮೆಣಸಿನ ತೊಕ್ಕು
ಬೇಕಾಗುವ ಸಾಮಗ್ರಿ: ಶೇಂಗಾ ಎಣ್ಣೆ- ಅರ್ಧ ಬಟ್ಟಲು, ಸಾಸಿವೆ, ಉದ್ದಿನಬೇಳೆ – 100 ಗ್ರಾಂ, ಬೆಲ್ಲ- 50 ಗ್ರಾಂ, ಹಸಿಮೆಣಸು-ಅರ್ಧ ಕೆ.ಜಿ., ಇಂಗು, ಹುಣಸೆಹಣ್ಣು.

ಮಾಡುವ ವಿಧಾನ: ಹಸಿಮೆಣಸಿನ ಕಾಯಿಗಳನ್ನು ಚೆನ್ನಾಗಿ ತೊಳೆದು, ನೀರು ಬಸಿಯಿರಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಉದ್ದಿನಬೇಳೆಯನ್ನು ಕಂದು ಬಣ್ಣಕ್ಕೆ ಬರುವವರೆಗೆ ಹುರಿದು ತೆಗೆದಿಟ್ಟುಕೊಳ್ಳಿ. ಈಗ ಬಾಣಲೆಗೆ ಮತ್ತೆ ಸ್ವಲ್ಪ ಎಣ್ಣೆ ಹಾಕಿ ಹಸಿಮೆಣಸು ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಬಾಡಿಸಿ. ಇದು ಆರಿದ ಮೇಲೆ ಮಿಕ್ಸಿ ಜಾರ್‌ನಲ್ಲಿ ಮೊದಲು ಹುರಿದ ಉದ್ದಿನಬೇಳೆಯನ್ನು ಸಣ್ಣಗೆ ಪುಡಿ ಮಾಡಿ. ಅದಕ್ಕೆ ಬಾಡಿಸಿದ ಹಸಿಮೆಣಸು, ಹುಣಸೆಹಣ್ಣು ಹಾಗೂ ಬೆಲ್ಲ ಹಾಕಿ ನುಣ್ಣಗೆ ರುಬ್ಬಿ. ಅದಕ್ಕೆ ಇಂಗು-ಸಾಸಿವೆಯ ಒಗ್ಗರಣೆ ಕೊಡಿ. ತಣ್ಣಗಾದ ಮೇಲೆ ತೇವವಿಲ್ಲದ ಡಬ್ಬಿಯಲ್ಲಿ ಹಾಕಿಟ್ಟರೆ ವಾರಗಟ್ಟಲೆ ಉಪಯೋಗಿಸಬಹುದು. ಮೊಸರಿನೊಂದಿಗೆ ಬೆರೆಸಿ, ಅಕ್ಕಿ, ರೊಟ್ಟಿ, ದೋಸೆ, ಚಪಾತಿ, ಜೊತೆಗೆ ಸವಿಯಬಹುದು.

-ಪ್ರಕಾಶ್‌ ಕೆ.ನಾಡಿಗ್‌, ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next