Advertisement
ಅವಳಿಗೆ ಇಲ್ಲಿಗೆ ಬರಲು ಮನೆ ಸಮೀಪ ಇರುವ ಜಲಪಾತ ಒಂದು ಆಕರ್ಷಣೆಯಾಗಿತ್ತು. ಅವಳು ಬಂದು ತಲುಪಿದಾಗ ಮಧ್ಯಾಹ್ನ ಗಂಟೆ ಒಂದು. ಊಟವನ್ನೂ ಮಾಡದೆ ಮಕ್ಕಳನ್ನು ಸೇರಿಸಿಕೊಂಡು “ಸಹನಕ್ಕ, ಜಲಪಾತಕ್ಕೆ ಹೋಗೋಣ’ ಎಂದು ಹೊರಟುನಿಂತಳು. “ಸರಿ’ ಎಂದು ನಾನು, ನನ್ನ ಗಂಡ ಅವಳ ಜೊತೆಗೂಡಿದೆವು. ಜಲಪಾತದ ನೀರಿಗೆ ತಲೆ ಒಡ್ಡಿ, ಪರಸ್ಪರ ನೀರು ಎರಚುತ್ತ ಮಕ್ಕಳೊಂದಿಗೆ ಮಕ್ಕಳಂತೆ ಆಟವಾಡಿದಳು. ಅಷ್ಟೂ ಹೊತ್ತು ಬಿಟ್ಟಿದ್ದ ಮಳೆ ಈಗ ಬರಲು ಶುರುವಾಯ್ತು. ನಾವು ಓಡುತ್ತ ಮನೆಗೆ ಬಂದೆವು. ಒದ್ದೆ ಮೈಯಲ್ಲಿದ್ದ ಅವಳು ಬಟ್ಟೆ ಬದಲಾಯಿಸುವ ಉದ್ದೇಶದಿಂದ ಬಚ್ಚಲು ಮನೆಗೆ ಹೋದವಳು ಎಷ್ಟು ಹೊತ್ತಾದರೂ ಬರಲಿಲ್ಲ!
Related Articles
Advertisement
ಇದನ್ನು ನೋಡಿ ನನಗೆ ಬಹಳ ಬೇಜಾರಾಯಿತು. ನೀರು ಬಿಸಿ ಮಾಡಲು ಸೋಲಾರ್ ಘಟಕ ಅಳವಡಿಸುತ್ತಿದ್ದರೆ ಏನೂ ಅನಿಸುತ್ತಿರಲಿಲ್ಲ. “ಏಕೆ ಅಡುಗೆ ಅನಿಲ ಸಿಲಿಂಡರನ್ನು ತಂದು ಇಟ್ಟಿದ್ದೀರಿ?’ ಕೇಳಿದೆ.
“ಈಗ ಕೆಲಸಕ್ಕೆ ಕೂಲಿ ಕಾರ್ಮಿಕರು ದೊರೆಯುವುದಿಲ್ಲ. ಹಣ ಕೊಟ್ಟರೆ ಸುಲಭವಾಗಿ ಸಿಲಿಂಡರ್ ಲಭಿಸುವಾಗ ಒಲೆ ಉರಿಸುವ ಕಷ್ಟ ಏಕೆ? ಅದಕ್ಕಿಂತ ಇದೇ ಸುಲಭ ಎಂದು ಅನಿಸಿದೆ’ ಎಂದರು. ಅವರಿಗೆ ಪ್ರತಿಯಾಗಿ ನಾನು ಏನೂ ಹೇಳಲಿಲ್ಲ. ಆದರೆ, ನನ್ನ ಮನಸ್ಸು ನೋವಿನಿಂದ ಒದ್ದಾಡಿತು.
ನನ್ನ ಅಜ್ಜನ ಮನೆಯ ಈ ಕತೆ ಕೇಳಿ. ನನ್ನ ಅಜ್ಜ ಬಿಸಿನೀರು ಕಾಯಿಸಲಿಕ್ಕೆಂದೇ ಒಣಗಿದ ಅಡಿಕೆ ಹಾಳೆಯನ್ನು ಕೊಟ್ಟಿಗೆಯಲ್ಲಿ ಕಟ್ಟಕಟ್ಟಿ ಇಡುತ್ತಿದ್ದರು. ತೆಂಗಿನ ಗರಿ ಉದುರುವಾಗ ಅದರ ಕೊತ್ತಳಿಗೆಯನ್ನು ತುಂಡು ಮಾಡಿ ಶೇಖರಣೆ ಮಾಡುತ್ತಿದ್ದರು. ತೋಟಕ್ಕೆ ಹೋದಾಗ ಸತ್ತು ಬಿದ್ದ ಅಡಿಕೆ ಮರದ ಸಲಾಕೆಯನ್ನು ಆರಿಸಿ ತರುತ್ತಿದ್ದರು. ಒಟ್ಟಿನಲ್ಲಿ ಅಜ್ಜ ಕೃಷಿ ತ್ಯಾಜ್ಯವನ್ನು ಹಾಳಾಗಲು ಬಿಡುತ್ತಿರಲಿಲ್ಲ. ಸ್ನಾನದ ನೀರು ಕಾಯಿಸಲು ಬಳಸುತ್ತಿದ್ದರು. ಸೂರ್ಯ ಮೂಡುವ ಮೊದಲೇ ಎದ್ದು ಬಚ್ಚಲ ಮನೆಗೆ ಬೆಂಕಿ ಹಾಕಿ ಆಮೇಲೆ ಮುಂದಿನ ಕೆಲಸಕ್ಕೆ ಹೊರಡುತ್ತಿದ್ದರು. ಈಗ ಅಜ್ಜ ಇಲ್ಲ. ಮಾವ ಸ್ನಾನಕ್ಕೆ ಗೀಸರ್ ಅಳವಡಿಸಿದ್ದಾರೆ. ಸ್ವಿಚ್ ಒತ್ತಿದರೆ ಸಾಕು ಸ್ವಲ್ಪ$ ಸಮಯದಲ್ಲಿ ನೀರು ಬಿಸಿಯಾಗುತ್ತದೆ. ಹಂಡೆ ಸ್ನಾನದ ಪದ್ಧತಿ ಅಜ್ಜನೊಂದಿಗೇ ಮರೆಯಾಗಿದೆ.
ಕೃಷಿಕರಾದ ನಮಗೆ ಸ್ನಾನದ ನೀರು ಕಾಯಿಸಲು ಹಸಿಮರ ಕಡಿದು ಸೌದೆ ಮಾಡಬೇಕಾಗಿಲ್ಲ. ನಮ್ಮ ತೋಟದಲ್ಲಿ ಖರ್ಚಿಲ್ಲದೆ ಸಿಗುವ ವಸ್ತುಗಳಾದ ಮಡಲು, ಹಾಳೆ, ಅಡಿಕೆ ಸಿಪ್ಪೆ , ಗೆರಟೆ, ತೆಂಗಿನ ಸಿಪ್ಪೆ$, ಅಡಿಕೆ ಮರದ ಸಲಾಕೆ, ರಬ್ಬರ್ ಮರದ ಒಣಗಿದ ಕಾಂಡ ಮುಂತಾದವು ಹೇರಳವಾಗಿ ಇರುತ್ತವೆ. ತೋಟದಿಂದ ಮನೆಗೆ ತರುವ ಶ್ರಮ ಮಾತ್ರ ಇರುವುದು. ಹೀಗಾಗಿ, ಪೇಟೆಯಿಂದ ದುಡ್ಡು ಕೊಟ್ಟು ಸಿಲಿಂಡರ್ ತಂದು ನೀರು ಕಾಯಿಸುವುದು ನಷ್ಟದ ಬಾಬತ್ತು ಅಲ್ಲವೇ? ಅಷ್ಟಕ್ಕೂ ಅಡುಗೆ ಅನಿಲ ಮುಗಿದುಹೋಗುವ ಸಂಪನ್ಮೂಲವಾದ್ದರಿಂದ ನಾವು ಉಳಿಸಿದ ಸಿಲಿಂಡರನ್ನು ಪೇಟೆಯವರು ಬಳಸಬಹುದಲ್ಲವೇ? ಗೀಸರ್ ಅಳವಡಿಕೆಯಿಂದ ನೀರು ಬೇಗ ಬಿಸಿಯಾದರೂ ವಿದ್ಯುತ್ ಖರ್ಚಾಗುತ್ತದೆ. ಈ ವಿದ್ಯುತ್ತನ್ನು ಕೃಷಿಕರು ಉಳಿಸಿದರೆ “ಹನಿ ಹನಿಗೂಡಿ ಹಳ್ಳ’ ಎಂಬಂತೆ ರಾಷ್ಟ್ರಕ್ಕೂ ಅಷ್ಟು ಉಳಿತಾಯವಾಯಿತಲ್ಲವೇ? ಮಾತ್ರವಲ್ಲ, ನಮ್ಮ ಪರಂಪರೆಯ ಹಂಡೆ ಸ್ನಾನ ಪದ್ಧತಿಯನ್ನು ಮುಂದುವರಿಸಿದ ಹಾಗೂ ಆಗುತ್ತದೆ. ಇದು ರೈತರಿಂದ ಮಾತ್ರ ಸಾಧ್ಯ.
ಇನ್ನೇನು ಚಳಿಗಾಲ ಕಾಲಿಡುತ್ತಿದೆ. ನಾಯಿ, ಬೆಕ್ಕು, ತಮ್ಮ, ತಂಗಿಯೊಂದಿಗೆ ಚಿಕ್ಕವಳಿದ್ದಾಗ ನಾನು ಸ್ನಾನದ ಮನೆಯ ಉರಿಯುವ ಒಲೆ ಬುಡದಲ್ಲಿ ಕೂತು ಚಳಿ ಕಾಯಿಸುತ್ತಿದ್ದ ಆ ದಿನಗಳು ಕಣ್ಣ ಮುಂದೆ ಬಂದು ಮೈಮನಸು ಬೆಚ್ಚಗಾಗುತ್ತಿದೆ.
– ಸಹನಾ ಕಾಂತಬೈಲು