Advertisement
ಮಳೆಗಾಲದಲ್ಲಿ ಕುಸಿತ ಸಂಭವಿಸಿ ದಲ್ಲಿಗೆ ತಾತ್ಕಾಲಿಕವಾಗಿ ಮರಳು ಚೀಲಗಳನ್ನು ಆಧಾರವಾಗಿ ಅಳವಡಿಸಲಾಗಿತ್ತು. ಕೋತಿಗಳ ಉಪಟಳ, ನೈಸರ್ಗಿಕ ಕಾರಣಗಳಿಂದ ಅವು ಬೀಳುವ ಸ್ಥಿತಿಯಲ್ಲಿವೆ. ಫೆಬ್ರವರಿ ಕೊನೆಯ ವಾರದಿಂದ ಚುನಾವಣೆಯ ನೀತಿ ಸಂಹಿತೆ ಬರುವ ಸಾಧ್ಯತೆ ಇದ್ದು, ದುರಸ್ತಿಗೆ ಅವಕಾಶ ಇರದು. ಇದೇ ಸ್ಥಿತಿಯಲ್ಲಿ ಮಳೆಗಾಲ ಆರಂಭ ವಾದರೆ ಇನ್ನಷ್ಟು ಕುಸಿತ, ಘಾಟಿ ಸಂಚಾರ ಬಂದ್ ಸಾಧ್ಯತೆ ಇದೆ.
ಜೂನ್ ತಿಂಗಳಲ್ಲಿ ಭಾರೀ ಮಳೆ ಯಿಂದ ಮಾಣಿ-ಸಂಪಾಜೆ, ಶಿರಾಡಿ ಘಾಟಿ ರಸ್ತೆಗಳು ಅಲ್ಲಲ್ಲಿ ಕುಸಿದಂತೆ ಆಗುಂಬೆ ಘಾಟಿಯಲ್ಲೂ ಕುಸಿದಿತ್ತು. ಆದರೆ ಮರಳು ಚೀಲಗಳನ್ನು ಅಳವಡಿಸಿ ತಾತ್ಕಾಲಿಕ ದುರಸ್ತಿ ಕಾರ್ಯವನ್ನಷ್ಟೇ ಮಾಡಲಾಗಿತ್ತು. ಅಪಾಯಕಾರಿ ಮರಗಳು
ಇದಲ್ಲದೆ ಘಾಟಿಯ ಪ್ರತಿ ಸುತ್ತಿನಲ್ಲಿ ರಸ್ತೆಗೆ ವಾಲಿರುವ ಮರಗಳಿದ್ದು, ತೆರವುಗೊಳಿಸಿಲ್ಲ. ಮಳೆಗಾಲದಲ್ಲಿ ನೀರಿನ ರಭಸಕ್ಕೆ ಮಣ್ಣು ಸವೆದು ಈ ಮರಗಳು ರಸ್ತೆಗೆ ಬೀಳಬಹುದು. ಉಡುಪಿ ಜಿಲ್ಲಾ ವ್ಯಾಪ್ತಿಗೆ ಬರುವ ಘಾಟಿಯ 7ನೇ ತಿರುವಿನ ಕೆಳಗೆ ಚರಂಡಿಯಿಲ್ಲದೆ ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿಯುತ್ತದೆ. ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
Related Articles
ರಸ್ತೆ ಬದಿ 40 ಮೀ. ಉದ್ದಕ್ಕೆ ಕುಸಿತವಾದಲ್ಲಿ ಮರಳು ಚೀಲಗಳನ್ನು ಅಳವಡಿಸಿದ್ದು, ಅವು ಹಾನಿಗೀಡಾಗಿವೆ. ಘಾಟಿ ಆರಂಭದ ಮೊದಲ ತಿರುವು, ಸನ್‌ಸೆಟ್ ಪಾಯಿಂಟ್ ಸಮೀಪ ತಡೆಗೋಡೆ ಸಹಿತ ರಸ್ತೆ ಕುಸಿದಿದ್ದು, ವಾಹನಗಳು ಆತಂಕದಿಂದಲೇ ಚಲಿಸಬೇಕಿದೆ. ರಾತ್ರಿ ಹೊತ್ತು ವಾಹನ ಸಂಚಾರ ಅಪಾಯಕಾರಿಯಾಗಿದೆ.
Advertisement
ಅವೈಜ್ಞಾನಿಕ ತಡೆಗೋಡೆಘಾಟಿಯ ಕೆಲವು ಸುತ್ತುಗಳಲ್ಲಿ ಅವೈಜ್ಞಾನಿಕವಾಗಿ ಕಟ್ಟಿರುವ ತಡೆಗೋಡೆಗೆ ವಾಹನಗಳು ಢಿಕ್ಕಿಯಾಗಿ ಕೆಳಕ್ಕುರುಳಿವೆ. ಢಿಕ್ಕಿಯಿಂದ ಹಲವೆಡೆ ತಡೆಗೋಡೆ ಬಿರುಕುಬಿಟ್ಟಿದ್ದು, ಶಿವಮೊಗ್ಗ ವ್ಯಾಪ್ತಿಯ 5ನೇ ತಿರುವು ಹಾಗೂ ಉಡುಪಿ ವ್ಯಾಪ್ತಿಯ 6ನೇ ತಿರುವಿನಲ್ಲಿ ಅಪಾಯ ತಪ್ಪಿದ್ದಲ್ಲ. ಘಾಟಿ ಕಾಮಗಾರಿ ಮೊದಲು ಆರಂಭಿಸಿ
ಮಲ್ಪೆ-ತೀರ್ಥಹಳ್ಳಿ ರಾ.ಹೆ. ಮಂಜೂರಾಗಿ 4 ವರ್ಷ ಕಳೆದರೂ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣ ಆಗಿಲ್ಲ. ಈಗ ಕರಾವಳಿ ಜಂಕ್ಷನ್-ಪರ್ಕಳ ನಡುವೆ ಕಾಮಗಾರಿ ನಡೆಯುತ್ತಿದೆ. ಇದರ ಬದಲು ಅಪಾಯದಲ್ಲಿರುವ ಆಗುಂಬೆ ಘಾಟಿ ಕಾಮಗಾರಿ ಮೊದಲು ನಡೆಸಿ, ಮಲೆನಾಡು ಕರಾವಳಿ ಸಂಪರ್ಕ ಕಡಿತಗೊಳ್ಳುವ ಭೀತಿಯನ್ನು ತಪ್ಪಿಸಿ ಎಂಬುದು ಅನೇಕರ ಆಗ್ರಹ. ಕಾಮಗಾರಿ ಶೀಘ್ರ ಆರಂಭ
ಘಾಟಿಯ 14ನೇ ಸುತ್ತಿನಲ್ಲಿ ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. 7ನೇ ತಿರುವಿನಲ್ಲಿ ಇನ್ನೂ ಪ್ಲಾನಿಂಗ್ ಆಗಿಲ್ಲ. ಒಂದು ತಿಂಗಳ ಒಳಗೆ ಈ ಭಾಗದಲ್ಲಿ ಕಾಮಗಾರಿ ಆರಂಭವಾಗಲಿದೆ. 7ನೇ ತಿರುವಿನ ಬಳಿಕ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಸೇರಿದ್ದಾಗಿದ್ದು, ಕೂಡಲೇ ಲೋಕೋಪಯೋಗಿ ಇಲಾಖೆಯ ಅಲ್ಲಿನ ಎಂಜಿನಿಯರ್ ಜತೆ ಮಾತನಾಡಿ ಸಮಸ್ಯೆ ಸರಿಪಡಿಸುವ ಬಗ್ಗೆ ಗಮನಹರಿಸಲಾಗುತ್ತದೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಉಡುಪಿ ಜಿಲ್ಲಾಧಿಕಾರಿ ದುರಸ್ತಿ ಕಾಮಗಾರಿಯ ರೂಪುರೇಷೆ ಸಿದ್ಧವಾಗಿದ್ದು, ಸದ್ಯವೇ ಆರಂಭವಾಗುತ್ತದೆ. ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು.
– ಸುಬ್ಬರಾಮ ಹೊಳ್ಳ, ಕಾರ್ಯಪಾಲಕ ಅಭಿಯಂತ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮಂಗಳೂರು ಸಂಪರ್ಕ ಕಡಿತ ಭೀತಿ
ಈ ಹಿಂದೆ ಘಾಟಿ ದುರಸ್ತಿ ಸಂದರ್ಭ ಸಂಪರ್ಕ ಕಡಿತಗೊಂಡಿತ್ತು. ಈಗ ಭೂಕುಸಿತವಾಗಿ 7 ತಿಂಗಳು ಕಳೆದರೂ ದುರಸ್ತಿ ಆಗಿಲ್ಲ. ಮಳೆಗಾಲ ಆರಂಭವಾದ ಬಳಿಕ ಕಾಮಗಾರಿ ಅಸಾಧ್ಯ. ಮತ್ತೆ ಕುಸಿತ ಸಂಭವಿಸಿದರೆ ನಿತ್ಯ ಸಂಚರಿಸುವ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪ್ರಮುಖವಾಗಿ ತುರ್ತು ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗಬಹುದು. – ಉದಯಕುಮಾರ್ ಶೆಟ್ಟಿ