Advertisement
ಘಾಟಿಯ ಇಕ್ಕೆಲಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಇದೇ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸುವುದರಿಂದ ತಿರುವುಗಳಲ್ಲಿ, ತಡೆಗೋಡೆ ಬಳಿ ಕುಸಿತ ಆಗುವ ಭೀತಿ ಇದೆ. ಘಾಟಿಯ ಅರ್ಧ ಭಾಗ ಶಿವಮೊಗ್ಗ ಜಿಲ್ಲೆ ಹಾಗೂ ಇನ್ನರ್ಧ ಭಾಗ ಉಡುಪಿ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಹಲವಾರು ಬಾರಿ ಭಾರೀ ಮಳೆಯ ನಡುವೆ ಘನ ವಾಹನ ಸಂಚಾರದಿಂದ ಘಾಟಿ ಕುಸಿತಗೊಂಡು ತಿಂಗಳುಗಳ ಕಾಲ ವಾಹನ ಸಂಚಾರ ಬಂದ್ ಆಗಿತ್ತು. ಆದರೂ ಘನವಾಹನ ಸಂಚಾರ ನಿಷೇಧ ಮಾಡದಿರುವುದು ಉಭಯ ಜಿಲ್ಲಾಡಳಿತಗಳ ನಿರ್ಲಕ್ಷ್ಯ ಎಂದು ಸಾಮಾಜಿಕ ಕಾರ್ಯಕರ್ತ ಹರೀಶ್ ಶೆಟ್ಟಿ ನಾಡಪಾಲ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 14ನೇ ತಿರುವಿನ ಸೂರ್ಯಾಸ್ತ ವೀಕ್ಷಣೆ ಸ್ಥಳದ ಬಳಿ ಹಾಗೂ ಘಾಟಿ ಆರಂಭದ ಮಧ್ಯೆ ತಡೆಗೋಡೆಯಲ್ಲಿ ಬಿರುಕು ಬಂದಿದ್ದು ಘನ ವಾಹನ ಸಂಚರಿಸಿದರೆ ಸಂಪೂರ್ಣ ಕುಸಿಯುವ ಅಪಾಯ ಇರುವುದಾಗಿ ಉದಯವಾಣಿ ಸಚಿತ್ರ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಇಲಾಖೆಯು ತಡೆಗೋಡೆಯ ಬಳಿ ಕಾಂಕ್ರೀಟ್ ಬಳಸಿ ತಾತ್ಕಾಲಿಕ ದುರಸ್ತಿ ಹಾಗೂ ವಾಹನಗಳು ಢಿಕ್ಕಿ ಹೊಡೆದು ಹಾನಿಗೀಡಾದ ಸ್ಥಳಗಳಲ್ಲಿ ದುರಸ್ತಿ ಮಾಡಿದೆ.