Advertisement

ಬೇನಾಮಿ ಹೆಸರಲ್ಲಿ ಹಣ ನೀಡಲು ಅಗ್ರಿಗೋಲ್ಡ್‌ ಆಸಕ್ತಿ

12:04 PM Aug 05, 2017 | Team Udayavani |

ಬೆಂಗಳೂರು: ಸುಲಭ ಕಂತುಗಳಲ್ಲಿ ನಿವೇಶನ ಕೊಡಿಸುವ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ಅಗ್ರಿಗೋಲ್ಡ್‌ ಕಂಪೆನಿ ಇದೀಗ ಬೇನಾಮಿ ಕಂಪೆನಿಗಳ ಮೂಲಕ ಗ್ರಾಹಕರಿಗೆ “ನ್ಯಾಯ’ ಕೊಡಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಆದರೆ, ಇದಕ್ಕೆ ನ್ಯಾಯಾಲಯ ಬ್ರೇಕ್‌ ಹಾಕಿದ್ದು, ಬೇನಾಮಿ ಕಂಪೆನಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಇಲ್ಲದಿದ್ದರೆ ಸದ್ಯ ನಡೆಯುತ್ತಿರುವ ಇ-ಹರಾಜು ಪದ್ದತಿಯನ್ನೇ ಮುಂದುವರಿಸಿ ಎಂದು ಅಗ್ರಿಗೋಲ್ಡ್‌ ಕಂಪೆನಿಗೆ ತಾಕೀತು ಮಾಡಿದೆ.

Advertisement

1996ರಲ್ಲಿ ಆರಂಭವಾದ ಸಂಸ್ಥೆಯಲ್ಲಿ ಹಣ ತೊಡಗಿಸಿದರೆ ನಿವೇಶನ ನೀಡುವುದಾಗಿ ನಂಬಿಸಿ ಕರ್ನಾಟಕ, ತಮಿಳುನಾಡು, ಅಂಧ್ರಪ್ರದೇಶ,ಒಡಿಶಾ ಸೇರಿದಂತೆ ದೇಶದೆಲ್ಲೆಡೆ ಸುಮಾರು 32 ಲಕ್ಷ  ಜನರಿಗೆ 6,500 ಕೋಟಿ ರೂ.ಹಣ ಪಂಗನಾಮ ಹಾಕಿತ್ತು. ಕರ್ನಾಟಕದಲ್ಲೇ 8.62 ಲಕ್ಷ ಮಂದಿಗೆ 1,700 ಕೋಟಿ ರೂ. ಹಣ ನೀಡದೆ ಸಂಸ್ಥೆ ವಂಚಿಸಿದೆ.

ಈ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಆಂಧ್ರ ಹೈಕೋರ್ಟ್‌, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹೊಂದಿರುವ ಕೋಟ್ಯಂತರ ರೂ. ಮೊತ್ತದ ಆಸ್ತಿ ಮಾರಾಟಕ್ಕೆ ಆಂಧ್ರಪ್ರದೇಶ ನಿವೃತ್ತ ನ್ಯಾ.ಸೀತಾಪತಿ ನೇತೃತ್ವದ ತ್ರಿಸದಸ್ಯ ಸಮಿತಿ ರಚಿಸಿದೆ. ಅದರಂತೆ ಅಗ್ರಿಗೋಲ್ಡ್‌ ಆಸ್ತಿಯನ್ನು ಸಮಿತಿ ಇ-ಹರಾಜು ಪ್ರಕ್ರಿಯೆ ಮೂಲಕ ಹರಾಜು ಹಾಕಲು ನ್ಯಾಯಾಲಯ ಸೂಚಿಸಿತ್ತು.

ಆದರೆ, ಸಮಿತಿಯೂ ಮಾರುಕಟ್ಟೆ ದರಕ್ಕಿಂತ‌ ಶೇ.6ರಷ್ಟು ಕಡಿಮೆ ದರದಲ್ಲಿ ಆಸ್ತಿಯನ್ನು ಹರಾಜು ಹಾಕುತ್ತಿದೆ. ಇದರಿಂದ ಸಂಸ್ಥೆಗೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ ಎಂದು ಸಂಸ್ಥೆ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿತ್ತು. ಆದರೆ, ಕಂಪೆನಿಗಳ ಮಾಹಿತಿಯನ್ನು ಅಗ್ರಿಗೋಲ್ಡ್‌ ಕಂಪೆನಿಯ ಅಧಿಕಾರಿಗಳು ನ್ಯಾಯಾಲಯಕ್ಕೆ ಸಂಪೂರ್ಣವಾಗಿ ನೀಡಿರಲಿಲ್ಲ.

ಅಲ್ಲದೇ ಇತ್ತೀಚೆಗೆ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಅಗ್ರಿಗೋಲ್ಡ್‌ ಸಂಸ್ಥೆಯ ಅಧಿಕಾರಿಗಳು ದೆಹಲಿ ಮೂಲದ ದೊಡ್ಡ ಕಂಪೆನಿಯೊಂದು ಅಗ್ರಿಗೋಲ್ಡ್‌ ಸಂಸ್ಥೆ ಎಲ್ಲ ಆಸ್ತಿಯನ್ನು ಖರೀದಿಸಲು ಮುಂದಾಗಿದ್ದು, ಅಗ್ರಿಗೋಲ್ಡ್‌ನ ಎಲ್ಲ ಗ್ರಾಹಕರ ಬಾಕಿ ಮೊತ್ತವನ್ನು ಪಾವತಿಸಲಿದೆ ಎಂದು ಎಂದು ಅಫಿಡವಿಟ್‌ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕಂಪೆನಿಯ ಹೆಸರು ಬಹಿರಂಗಪಡಿಸುವಂತೆ ನ್ಯಾಯಾಲಯ ಕೇಳಿದಾಗ, “ಕಂಪೆನಿಯ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ.

Advertisement

ಏಕೆಂದರೆ ಆ ಕಂಪೆನಿಯ ಮೇಲೆ ಒತ್ತಡ ಹೆಚ್ಚಾಗಬಹುದು ಎಂದು ಆರೋಪಿತ ಸಂಸ್ಥೆಯ ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದಾರೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್‌ ವಿಭಾಗೀಯ ಪೀಠ, ಹಾಗಾದರೆ ಕಂಪೆನಿಯ ಹೆಸರು ಬಹಿರಂಗ ಪಡಿಸುವರೆಗೂ ಇ-ಹರಾಜು ಪ್ರಕ್ರಿಯೆ ಮುಂದುವರಿಸಿ ಈ ಮೂಲಕ ಗ್ರಾಹಕರಿಗೆ ಕೊಡಬೇಕಾದ ಹಣವನ್ನು ಸಂಗ್ರಹಿಸಿ ಎಂದು ಸೂಚಿಸಿದೆ. ಇದೇ ವೇಳೆ ಆ ಕಂಪೆನಿಯ ಖರೀದಿ ಸಂಬಂಧ ಅಫಿಡವಿಟ್‌ ಸಲ್ಲಿಸುವಂತೆ ಸೂಚಿಸಿದೆ.

ಏಕೆಂದರೆ, ಒಂದು ವೇಳೆ ಅಗ್ರಿಗೋಲ್ಡ್‌ ಆಸ್ತಿ ಕೊಳ್ಳಲು ಅರ್ಹವಲ್ಲದೆ ಇದ್ದ ವೇಳೆ ಮಂದಿನ ಕ್ರಮದ ಬಗ್ಗೆ ಪ್ರಶ್ನಿಸಿರುವ ನ್ಯಾಯಾಪೀಠ,  ಪ್ರತಿ ಬಾರಿಯೂ ಸೂಕ್ತ ಖರೀದಿದಾರರನ್ನು ವಿಳಂಬ ಮಾಡುತ್ತಿರುವಿರಿ. ಈ ರೀತಿ ನಿರ್ಲಕ್ಷ್ಯವನ್ನು ನ್ಯಾಯಾಲಯ ಸಹಿಸುವುದಿಲ್ಲ. ಹೀಗೆ ಮುಂದುವರಿದರೆ ಗ್ರಾಹಕರ ಹಣವನ್ನ ಹೇಗೆ ಹಿಂದಿರುಗಿಸುವುದು. ಅಲ್ಲದೇ ಹರಾಜು ಸಮಿತಿ ವಶಕ್ಕೆ ಪಡೆದಿರುವ 274 ಆಸ್ತಿ ಹರಾಜು ಪ್ರಕ್ರಿಯೆ ಇನ್ನಷ್ಟು ನಿಧಾನವಾಗಲಿದೆ ಎಂದು ಅಸಮಾಧಾನವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ.

ಈ ಮೊದಲು ಲಂಡನ್‌ ಹಾಗೂ ಮುಂಬೈ ಮೂಲದ ಕಂಪೆನಿಗಳು ಅಗ್ರಿಗೋಲ್ಡ್‌ ಆಸ್ತಿ ಖರೀದಿಗೆ ಮುಂದಾಗಿದ್ದವು ಎಂದು ಸಿಐಡಿ ಮೂಲಗಳು ತಿಳಿಸಿವೆ. ಇತ್ತೀಚಿನ ವಿಚಾರಣೆ ವೇಳೆ ದೆಹಲಿ ಮೂಲದ ಸೆಲ್‌ಔಟ್‌ ಎಂಬ ಹೆಸರಿನ ಕಂಪೆನಿಯ ಮುಂದೆ ಬಂದಿದೆ ಎಂದು ತಿಳಿದು ಬಂದಿದೆ.ಇದೀಗ ಈ ಕಂಪೆನಿಯ ಮಾಹಿತಿಯನ್ನು ಬಹಿರಂಗ ಪಡಿಸಲು ಹಿಂದೇಟು ಹಾಕಿರುವುದರಿಂದ ನ್ಯಾಯಾಲಯದ ಇ-ಹರಾಜು ಪ್ರಕ್ರಿಯೆಯನ್ನೇ ಮುಂದುವರಿಸಲು ಸೂಚಿಸಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next