Advertisement

ಹೈನುಗಾರಿಕೆ ಮಾಡಿ ಗೆದ್ದ ಹಳ್ಳಿ ಹೈದನಿಗೆ ರಾಜ್ಯ ಗೌರವ 

04:59 AM Jan 03, 2019 | |

ಸುಳ್ಯ : ಹೈನುಗಾರಿಕೆ ಕೃಷಿಯಲ್ಲಿ ತೊಡಗಿಸಿಕೊಂಡು ದಿನಕ್ಕೆ 220 ಲೀಟರ್‌ ಹಾಲು ಮಾರಾಟ ಮಾಡಿ ಯಶಸ್ವಿ ಸಾಧಕನಾದ ಹಳ್ಳಿ ಹೈದನ ಕೃಷಿ ಪ್ರೀತಿಗೆ ಈ ಬಾರಿ ರಾಜ್ಯಮಟ್ಟದ ಗೌರವ ದೊರಕಿದೆ. ಮುರುಳ್ಯ ಗ್ರಾಮದ ಅಲೆಕ್ಕಾಡಿ ನಿವಾಸಿ ಜಗನ್ನಾಥ ಪೂಜಾರಿ ಮುಕ್ಕೂರು ಅವರನ್ನು ದ.ಕ. ಜಿಲ್ಲೆಯ ಪ್ರಗತಿಪರ ಹೈನುಗಾರನೆಂದು ಜ. 5ರಂದು ರಾಯಚೂರಿನಲ್ಲಿ ನಡೆಯುವ ರಾಜ್ಯಮಟ್ಟದ ಪಶುಮೇಳದಲ್ಲಿ ಸಮ್ಮಾನಿಸಲು ಸರಕಾರ ಆಯ್ಕೆ ಮಾಡಿದೆ.

Advertisement

ಯಶಸ್ವಿ ಕೃಷಿಕ
ಮೂಲತಃ ಪೆರುವಾಜೆ ಗ್ರಾಮದ ಮುಕ್ಕೂರಿನವರಾಗಿರುವ ಜಗನ್ನಾಥ ಪೂಜಾರಿ ಪದವೀಧರರು. ಶಿಕ್ಷಣ ಮುಗಿಸಿದ ಬಳಿಕ ರಾಜಕೀಯ ಕ್ಷೇತ್ರದತ್ತ ಮುಖ ಮಾಡಿ, ಗ್ರಾಮ ಮಟ್ಟದಲ್ಲಿ ಜನಪ್ರತಿನಿಧಿಯಾಗಿ ಸೈ ಎನಿಸಿದ್ದರು. ಬಳಿಕ ಆ ಕ್ಷೇತ್ರದಿಂದ ಹೊರ ಬಂದು ಕೃಷಿಕನಾದರು.

ವೈಜ್ಞಾನಿಕ ಪದ್ಧತಿ ಅಳವಡಿಕೆ
ಒಟ್ಟು 1,500 ಚದರ ಅಡಿ ವಿಸ್ತೀರ್ಣದ ದನದ ಕೊಟ್ಟಿಗೆ ನಿರ್ಮಿಸಿದ್ದು, ಅದಕ್ಕೆ ಸಿಮೆಂಟ್‌ ಶೀಟ್‌ನ ಛಾವಣಿ, ನೆಲಕ್ಕೆ ರಬ್ಬರ್‌ ಮ್ಯಾಟ್‌, ಹಸುಗಳ ಬಾಯಾರಿಕೆ ನೀಗಲು ನೀರು ಸಂಗ್ರಹದ ಸಿಮೆಂಟ್‌ ತೊಟ್ಟಿ, ಬೇಸಗೆಯಲ್ಲಿ ಹಟ್ಟಿ ಒಳಗಿನ ವಾತಾವರಣ ಬಿಸಿ ಏರದಂತೆ ತಡೆಯಲು ಫ್ಯಾನ್‌, ಸಂಗೀತಕ್ಕೆ ಸ್ಟೀರಿಯೋ ಸ್ಪೀಕರ್‌ ಮೊದಲಾದ ವ್ಯವಸ್ಥೆಗಳಿವೆ. ಹಾಲು ಹಿಂಡಲು ವಿದ್ಯುತ್‌ ಚಾಲಿತ ಯಂತ್ರ, ವಿದ್ಯುತ್‌ ಕೈಕೊಟ್ಟಾಗ ಇನ್ವ ರ್ಟರ್‌ ವ್ಯವಸ್ಥೆಯೊಂದಿಗೆ ವೈಜ್ಞಾನಿಕ ಮಾದರಿಯಲ್ಲಿ ಪ್ರಯೋಗ ಒಡ್ಡಿ ಯಶಸ್ಸು ಸಾಧಿಸಿದ್ದಾರೆ. 

ಪತ್ನಿ, ಮಕ್ಕಳೂ ಸಾಥ್‌
ಜಗನ್ನಾಥ ಪೂಜಾರಿ, ಪತ್ನಿ ಮಮತಾ ಜಗನ್ನಾಥ ಹಾಗೂ ಏಳನೇ ತರಗತಿ ಓದುತ್ತಿರುವ ಮಗಳು ಅನಘಾ ಮೂವರೂ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವುದು ವಿಶೇಷ. ಪ್ರತಿದಿನ ಬೆಳಗ್ಗೆ ನಾಲ್ಕೂವರೆ ಗಂಟೆಗೆ ಹೈನುಗಾರಿಕೆ ದಿನಚರಿ ಆರಂಭಿಸುತ್ತಾರೆ. ಸೆಗಣಿ ತೆಗೆದು ಹಟ್ಟಿ ಶುಚಿಗೊಳಿಸುವುದು, 5 ಗಂಟೆಗೆ ಹಿಂಡಿ ತಿನ್ನಿಸಿ, ಐದೂವರೆಗೆ ಹಾಲು ಕರೆಯುವುದು, 6 ಗಂಟೆಗೆ ಹುಲ್ಲು ಹಾಕುವುದು, 10 ಗಂಟೆಗೆ ಮತ್ತೆ ಹುಲ್ಲು ಹಾಕಿ, 12 ಗಂಟೆಗೆ ಶುದ್ಧ ನೀರು ಕೊಡುತ್ತಾರೆ. ಮಧ್ಯಾಹ್ನ 3 ಗಂಟೆಗೆ ಸೆಗಣಿ ತೆಗೆದು ನೀರು ಹಾಕಿ ಶುಚಿಗೊಳಿಸುತ್ತಾರೆ. ಸಂಜೆ 4 ಗಂಟೆಯಿಂದ ಹಾಲು ಹಿಂಡುವುದು, ಬಳಿಕ ಹಿಂಡಿ ಮತ್ತು ಹುಲ್ಲು ಹಾಕುತ್ತಾರೆ.

30 ಮಿಶ್ರತಳಿಗಳ ಒಡೆಯ
ಅಲೆಕ್ಕಾಡಿಯಲ್ಲಿ ಕುಟುಂಬ ಸಹಿತ ವಾಸ್ತವ್ಯ ಹೂಡಿರುವ ಅವರು ಪ್ರಥಮ ವರ್ಷ ಒಂದು ದನ ಖರೀದಿಸಿ ಹೈನುಗಾರಿಕೆ ಆರಂಭಿಸಿದ್ದರು. ಬಳಿಕ ಹಂತ-ಹಂತವಾಗಿ ಈ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಿ ಇದನ್ನು ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಈಗ ಮಿಶ್ರ ತಳಿಯ 30 ಹಸು, ಕರುಗಳನ್ನು ಸಾಕುತ್ತಿದ್ದಾರೆ. ಪ್ರತಿ ನಿತ್ಯ ಒಟ್ಟು 220 ಲೀ. ಹಾಲನ್ನು ಸ್ಥಳೀಯ ಡಿಪೋಗೆ ಪೂರೈಕೆ ಮಾಡುತ್ತಿದ್ದಾರೆ. ಹಾಲು ಒಕ್ಕೂಟದ ಅಧ್ಯಕ್ಷರಾಗಿ ಹಲವು ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

Advertisement

ಸ್ವಪ್ರಯತ್ನದಿಂದ ಯಶಸ್ಸು
ಹೈನುಗಾರಿಕೆ ಕ್ಷೇತ್ರದಲ್ಲಿ ಯಶಸ್ಸು, ಸಾಧನೆ ತೋರಬೇಕಾದರೆ ಸ್ವ ಪ್ರಯತ್ನ ಮುಖ್ಯ. ಸ್ವಂತ ದುಡಿಮೆ, ಮನೆ ಮಂದಿಯ ಪೂರ್ಣ ಸಹಕಾರದ ಕಾರಣ ಹೈನುಗಾರಿಕೆ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಾಣಲು ಸಾಧ್ಯವಾಯಿತು. ರಾಜ್ಯಮಟ್ಟದ ಸಮ್ಮಾನ ನನ್ನ ಹೈನುಗಾರಿಕೆ ಕೃಷಿ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.
-ಜಗನ್ನಾಥ ಪೂಜಾರಿ ಮುಕ್ಕೂರು,
ಹೈನುಗಾರರು 

2 ಎಕ್ರೆಯಲ್ಲಿ ಹಸುರು ಹುಲ್ಲು
ಹಟ್ಟಿಯ ಒಂದು ಬದಿಯಲ್ಲಿ ಗೋಬರ್‌ ಗ್ಯಾಸ್‌ ಘಟಕ ಸ್ಥಾಪಿಸಿದ್ದಾರೆ. ಮನೆಗೆ ಬೇಕಾದ ಇಂಧನವನ್ನು ಈ ಘಟಕದಿಂದಲೇ ಪಡೆಯುತ್ತಾರೆ. ತ್ಯಾಜ್ಯ ನೀರನ್ನು ಅಡಿಕೆ ತೋಟಕ್ಕೆ ಬಳಸುತ್ತಾರೆ. ಹಸುಗಳ ಮೇವಿಗಾಗಿ 2 ಎಕ್ರೆ ಪ್ರದೇಶದಲ್ಲಿ ಸಿಓ3 ಹಾಗೂ ಸಂಪೂರ್ಣ ತಳಿಯ ಹಸುರು ಹುಲ್ಲನ್ನು ಬೆಳೆಸಿದ್ದಾರೆ. ಹುಲ್ಲು ಕತ್ತರಿಸಲು ಪವರ್‌ ವೀಡರ್‌ ಮತ್ತು ಚಾಪ್‌ ಕಟ್ಟರ್‌ ವ್ಯವಸ್ಥೆ ಇದೆ. ಅಜೋಲಾ ಘಟಕವೂ ಇದೆ. ಪೌಷ್ಟಿಕ ಅಂಶಗಳಿರುವ ಹಿಂಡಿ ಮೊದಲಾದ ಆಹಾರವನ್ನು ನೀಡುತ್ತಾರೆ. ಪ್ರತಿ ದಿನವೂ ಹಸು, ಕರುಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. 

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next