Advertisement
1990-1992ರಲ್ಲಿ ನೆರೆಯ ಶಿವಮೊಗ್ಗ, ಭದ್ರಾವತಿ ಭಾಗದ ತುಂಗ-ಭದ್ರಾ ನದಿ ತಟದ ರೈತರು ಮೊದಲಿಗೆ ತಾಳೆ ಬೆಳೆ ಆರಂಭಿಸಿದರು. ಅನಂತರ ಕರಾವಳಿಯ ಕೆಲವು ರೈತರು ಸುಳ್ಯದ ತೊಡಿಕಾನ ವಸಂತ್ ಭಟ್ ನೇತೃತ್ವದಲ್ಲಿ ತಾಳೆ ಬೆಳೆಗೆ ಪ್ರೋತ್ಸಾಹ ಕೋರಿ ಸರಕಾರವನ್ನು ಆಗ್ರಹಿಸಿದ್ದರು. ಅದರಂತೆ ಸರಕಾರವು 2010-11ರಲ್ಲಿ ಕರಾವಳಿಯಲ್ಲೂ ತಾಳೆ ಬೆಳೆಯಲು ಹಸುರು ನಿಶಾನೆ ತೋರಿತ್ತು. ಪ್ರಸ್ತುತ ದ.ಕ.ದ 203.91 ಹೆಕ್ಟೇರ್, ಉಡುಪಿಯ 176.26 ಹೆಕ್ಟೇರ್‌ನಲ್ಲಿ ತಾಳೆ ಬೆಳೆಯಲಾಗುತ್ತಿದೆ. ಸುಳ್ಯ, ಕುಂದಾಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ.
ತಾಳೆಯ ಹಾದಿ
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅಡಿಕೆ, ರಬ್ಬರ್, ತೆಂಗು, ಬಾಳೆ, ಗೇರು ಪ್ರಮುಖ ತೋಟಗಾರಿಕೆ ಬೆಳೆ. ಇದರಿಂದ ಬೆಳೆಗಾರರು ವಿಮುಖರಾಗಿಲ್ಲ. ಜತೆಗೆ ಹಡಿಲು ಜಾಗದಲ್ಲಿ ತಾಳೆ ಕೃಷಿ ಮಾಡುತ್ತಿದ್ದಾರೆ. ಸುಳ್ಯ ತೊಡಿಕಾನದ ವಸಂತ ಭಟ್ 2010ರಲ್ಲಿ ಕರಾವಳಿಗೆ ತಾಳೆಯನ್ನು ಪರಿಚಯಿಸಿದವರು. ಮೊದಲ ಹಂತದಲ್ಲಿ 1 ಸಾವಿರ ಗಿಡಗಳನ್ನು ನೆಟ್ಟರು. ಉಡುಪಿ ಜಿಲ್ಲೆಯಲ್ಲಿ ಶಂಕರನಾರಾಯಣದ ವಸಂತ ಶೇಟ್ 2011ರಲ್ಲಿ ತಾಳೆ ಕೃಷಿಯನ್ನು ಮೊದಲು ಆರಂಭಿಸಿದರು. ಅನಂತರ ಐದೇ ವರ್ಷಗಳಲ್ಲಿ ದ.ಕ. ಜಿಲ್ಲೆಯಲ್ಲಿ 115 ಹೆಕ್ಟೇರ್, ಉಡುಪಿ ಜಿಲ್ಲೆಯ 40 ಹೆಕ್ಟೇರ್‌ಗಳಲ್ಲಿ ತಾಳೆ ಕೃಷಿ ವಿಸ್ತರಿಸಿತ್ತು. ತ್ರಿಮುಖ ಒಪ್ಪಂದ
ಸರಕಾರ, ರೈತರು ಮತ್ತು ಕಂಪೆನಿ ಸಹಭಾಗಿತ್ವದಲ್ಲಿ ನಡೆಯುವ ತಾಳೆ ಕೃಷಿಯನ್ನು ತ್ರಿಮುಖ ಒಪ್ಪಂದದ ಯೋಜನೆ ಎನ್ನಲಾಗುತ್ತದೆ. ಸರಕಾರವು 300 ರೂ. ಮೌಲ್ಯದ ಗಿಡಗಳನ್ನು ಉಚಿತವಾಗಿ ನೀಡುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆಯ ದರಕ್ಕೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲಿ ದರ ನಿಗದಿಯಾಗುತ್ತದೆ. ಇಲ್ಲಿ ದಲ್ಲಾಳಿ, ಮಧ್ಯವರ್ತಿಗಳಿಗೆ ಅವಕಾಶ ಇಲ್ಲ. ಈ ಬೆಳೆಗೆ ಕಾಡುಪ್ರಾಣಿ ಹಾಗೂ ಕೀಟದ ಬಾಧೆಯಿಲ್ಲ. ಸದ್ಯದ ಮಾರುಕಟ್ಟೆ ದರ ಕೆ.ಜಿ.ಗೆ 12.50 ರೂ. ಇದೆ. ಸರಕಾರದ ಬೆಂಬಲ ಬೆಲೆ 13.50 ರೂ. ನಿಗದಿಯಾಗಿದೆ. ಬೆಲೆ ಕಡಿಮೆಯಾದಲ್ಲಿ ಬೆಂಬಲ ಬೆಲೆಯಂತೆ ಬೆಳೆಗಾರರಿಗೆ ಹಣ ಪಾವತಿಯಾಗುತ್ತದೆ ಎಂದು ಬೆಳೆಗಾರರು ತಿಳಿಸಿದ್ದಾರೆ.
Related Articles
ಕೆಜಿ ಫಸಲು
1 ಎಕ್ರೆಯಲ್ಲಿ 57 ಗಿಡ, ಹೆಕ್ಟೇರ್‌ಗೆ 143 ಗಿಡಗಳನ್ನು ನೆಡಬಹುದು. ಹನಿ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಬೇಕು. 36 ತಿಂಗಳಲ್ಲಿ ಫಸಲು ಆರಂಭವಾಗುತ್ತದೆ. 5ರಿಂದ 7 ವರ್ಷದ ಮರ ವಾರ್ಷಿಕ 100-150 ಕೆಜಿ ಹಣ್ಣು ನೀಡುತ್ತದೆ. 8ನೇ ವರ್ಷಕ್ಕೆ 250 ಕೆಜಿ ದೊರೆಯುತ್ತದೆ. 12 ವರ್ಷದ ಅನಂತರ ಮರ ಸದೃಢವಾದಂತೆ ಬೆಳೆ ಪ್ರಮಾಣ ಹೆಚ್ಚು. ಫಸಲು ಬಿಡುವ ಮೊದಲು ಅಂತರ್‌ಬೆಳೆಯಾಗಿ ಬಾಳೆ, ಅನಾನಸ್, ದ್ವಿದಳ ಧಾನ್ಯ ಬೆಳೆಯಬಹುದು.
Advertisement
ಫ್ಯಾಕ್ಟರಿ ನಿರ್ಮಾಣ ಯೋಜನೆ ಉಡುಪಿ, ದ.ಕ., ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ತಾಳೆ ಬೆಳೆಗಾರರು ಸೇರಿ ಶ್ರೀ ಭಾರತಿ ಎಣ್ಣೆ ತಾಳೆ ಸಹಕಾರ ಸಂಘ ರಚಿಸಿಕೊಂಡಿದ್ದಾರೆ. ಇದರಲ್ಲಿ 500 ಮಂದಿ ಸದಸ್ಯರಿದ್ದಾರೆ. ಮುಂದಿನ ವರ್ಷಗಳಲ್ಲಿ ತಾಳೆ ಎಣ್ಣೆ ಉತ್ಪಾದಿಸುವ ಫ್ಯಾಕ್ಟರಿ ನಿರ್ಮಾಣಕ್ಕೆ ಯೋಜನೆ ರೂಪಿಸಿಕೊಂಡಿದ್ದಾರೆ. ಇದಕ್ಕೆ ವರ್ಷಕ್ಕೆ 10 ಸಾವಿರ ಟನ್ ತಾಳೆ ಎಣ್ಣೆ ಅಗತ್ಯ. ಸದ್ಯಕ್ಕೆ 4 ಜಿಲ್ಲೆಗಳಿಂದ 4ರಿಂದ 5 ಸಾವಿರ ಟನ್ ಉತ್ಪಾದನೆಯಾಗುತ್ತಿದೆ. ಬೆಳೆ ಪ್ರಮಾಣ ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ. ಫ್ಯಾಕ್ಟರಿ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಶೇ. 90 ಸಬ್ಸಿಡಿ ಸರಕಾರ ನೀಡಲಿದೆ ಎಂದು ತಾಳೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಭಟ್ ತಿಳಿಸಿದ್ದಾರೆ. ದ.ಕ., ಉಡುಪಿ ಜಿಲ್ಲೆಗಳಲ್ಲಿ ತಾಳೆ ಬೆಳೆ ಯಶಸ್ವಿಯಾಗುತ್ತಿದೆ. ಗಿಡವನ್ನು ಉಚಿತವಾಗಿ ನೀಡಲಾಗುತ್ತದೆ. ಆರಂಭದಲ್ಲಿ 4 ವರ್ಷದ ನಿರ್ವಹಣೆಗೆ ಹಣವನ್ನು ನೀಡಲಾಗುತ್ತದೆ. ನೀರಾವರಿಗೆ ಸಬ್ಸಿಡಿ ಸೌಲಭ್ಯವೂ ಇದೆ. ಆಸಕ್ತ ರೈತರು ಇಲಾಖೆಗೆ ಅರ್ಜಿ ಸಲ್ಲಿಸಬಹುದು.
– ಎಚ್.ಆರ್. ನಾಯ್ಕ, ಭುವನೇಶ್ವರಿ,
ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ದ.ಕ., ಉಡುಪಿ -ಅವಿನ್ ಶೆಟ್ಟಿ