Advertisement

Agriculture: ರೈತರ ನಿತ್ಯ ಬವಣೆ ತಪ್ಪಿಸುವ ಕೃಷಿ ಸೆಂಟ್ರಲ್‌ ಆ್ಯಪ್‌

12:53 AM Jul 28, 2024 | Team Udayavani |

ಬೆಂಗಳೂರು: ಯಾವುದೇ ಮಧ್ಯವರ್ತಿಗಳ ಆವಶ್ಯಕತೆಯಿಲ್ಲದೆ ನೇರವಾಗಿ ರೈತರಿಂದ ರೈತರಿಗಾಗಿ ಕೃಷಿ ಉಪಕರಣಗಳು, ಹಸು, ಕುರಿ, ಮೇವು ಇತ್ಯಾದಿಗಳ ಖರೀದಿ-ಮಾರಾಟಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲಿಗೆ ಪ್ರಾರಂಭವಾಗಿರುವ ಅಪ್ಲಿಕೇಶನ್‌ “ಕೃಷಿ ಸೆಂಟ್ರಲ್‌’.

Advertisement

ಇದೊಂದು ಡಿಜಿಟಲ್‌ ಮಾರುಕಟ್ಟೆ; ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ವಿನಯ್‌ ಶಿವಪ್ಪ ಅಭಿವೃದ್ಧಿಪಡಿಸಿದ್ದಾರೆ. ಪ್ಲೇಸ್ಟೋರ್‌ನಲ್ಲಿ ಸಿಗಲಿದ್ದು, ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿದೆ. ಸಂಪೂರ್ಣ ಉಚಿತವಾಗಿದೆ.
ಮೂಲತಃ ರೈತ ಕುಟುಂಬದವರಾದ ವಿನಯ್‌ ಶಿವಪ್ಪ ತಮ್ಮ ತೆಂಗಿನ ತೋಟಕ್ಕೆ ಸಗಣಿ ಗೊಬ್ಬರದ ಅವಶ್ಯಕತೆ ಬಂದಾಗ ಸುತ್ತಲಿನ ರೈತರನ್ನು ಸಂಪರ್ಕಿಸಿದರು. ಆದರೆ ಗುಣಮಟ್ಟ ಹಾಗೂ ಬೇಕಾದ ಪ್ರಮಾಣದ ಗೊಬ್ಬರ ತಿಂಗಳಾದರೂ ಸಿಗಲಿಲ್ಲ.

ಎಲ್ಲಿ ಸಿಗುತ್ತದೆ ಎಂಬ ಮಾಹಿತಿಯೂ ದೊರೆಯಲಿಲ್ಲ. ಇದರಿಂದ ಪ್ರೇರಿತನಾಗಿ ರೈತರ ಇಂತಹ ಸಮಸ್ಯೆಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಕೂತಲ್ಲಿಯೇ ಕೃಷಿ ಸಂಬಂಧಿಸಿದ ಮಾಹಿತಿ ತಿಳಿಯಲು “ಕೃಷಿ ಸೆಂಟ್ರಲ್‌’ ಅಪ್ಲಿಕೇಶನ್‌ ಅನ್ನು ಕಳೆದ ಫೆಬ್ರವರಿಯಲ್ಲಿ ಪ್ರಾರಂಭಿಸಿದೆ ಎನ್ನುತ್ತಾರೆ ಅವರು.

ರೈತರಿಗೇನು ಉಪಯೋಗ
ರೈತರು ಬೆಳೆದ ಉತ್ಪನ್ನಗಳು, ಕೃಷಿ ಉತ್ಪನ್ನಗಳು, ಯಂತ್ರೋಪಕರಣಗಳ ಬಳಕೆ, ಸೋಲಾರ್‌ ಸೇವೆ, ರಸಗೊಬ್ಬರಗಳ ಬಳಕೆ, ಡ್ರೋನ್‌ ಮೂಲಕ ಔಷಧ ಸಿಂಪಡಣೆ, ತೆಂಗು, ಅಡಿಕೆ ಕೊಯ್ಯುವುದು ಸೇರಿದಂತೆ ವಿವಿಧ ಜಾತಿಯ ಹಸು, ಮೇಕೆ, ಕುರಿ, ಕೋಳಿ, ಭತ್ತದ ಹುಲ್ಲು ಹಾಗೂ ಇತರ ಮೇವಿನ ಮಾರಾಟ ಅಥವಾ ಖರೀದಿಯನ್ನು ಈ ವೇದಿಕೆ ಸುಲಭಗೊಳಿಸಿದೆ.

ಇದರೊಂದಿಗೆ ವಿವಿಧ ಜಿಲ್ಲೆಗಳ ಜಾನುವಾರು ಮಾರಾಟ ಮತ್ತು ಅವುಗಳ ಬೆಲೆ ದವಸ-ಧಾನ್ಯಗಳ ದೈನಂದಿನ ಮಾರುಕಟ್ಟೆ ದರವನ್ನು ರೈತರು ತಿಳಿಯಬಹುದಾಗಿದೆ. ಖರೀದಿಸುವವರು ಮತ್ತು ಮಾರಾಟ ಮಾಡುವವರೇ ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.

Advertisement

ಇದಲ್ಲದೆ ಬೆಳೆಗಳು ರೋಗಕ್ಕೆ ತುತ್ತಾದಾಗ, ರೈತರು ರೋಗಕ್ಕೆ ಒಳಪಟ್ಟಿರುವ ಎಲೆ, ಕಾಂಡದ ಫೋಟೋವನ್ನು ಈ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್‌ ಮಾಡಿ ಸಲಹೆ ಕೇಳಿದರೆ ತಜ್ಞರಿಂದ ಮಾಹಿತಿ ಹಾಗೂ ಪರಿಹಾರ ಸಿಗುತ್ತದೆ.
ಒಂದು ಬೆಳೆಗೆ ಹಾಕಿದ ಬಂಡವಾಳ ಹಾಗೂ ಆದಾಯದ ಮಾಹಿತಿಯೂ ಇಲ್ಲಿ ಲಭ್ಯವಾಗುತ್ತದೆ. ಸಂಪೂರ್ಣ ಮಾಹಿತಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ಈ ಆ್ಯಪ್‌ಗೆ ಸಾವಿರಕ್ಕೂ ಹೆಚ್ಚು ಕರೆಗಳು ಬಂದಿದ್ದು, 300ಕ್ಕೂ ಹೆಚ್ಚು ವಸ್ತುಗಳನ್ನು ಪಟ್ಟಿ ಮಾಡಲಾಗಿದೆ.

“ಕೃಷಿ ಸೆಂಟ್ರಲ್‌’ ಎಂಬ ಅಪ್ಲಿಕೇಶನ್‌ ಸಂಪೂರ್ಣವಾಗಿ ರೈತರಿಂದ ರೈತರಿಗಾಗಿ ನಿರ್ಮಿಸಲಾಗಿದ್ದು ಉಚಿತವಾಗಿದೆ. ಈಗಾಗಲೇ ಅನೇಕರು ತಮ್ಮ ಉತ್ಪನ್ನ ಅಥವಾ ಮಾರಾಟ ಮಾಡುವ ಹಾಗೂ ಖರೀದಿಸಬೇಕಾದ ಅಂಶಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಕೆಲವರು ರೋಗಗಳಿಗೆ ತುತ್ತಾಗಿರುವ ಬೆಳೆ ಫೋಟೋ ಕಳುಹಿಸಿ ಪರಿಹಾರವನ್ನು ಕೇಳಿದ್ದಾರೆ. ಹಸು, ಕುರಿ ಮಾರಾಟ ಮಾಡಲಾಗಿದೆ. ಅದರಲ್ಲಿಯೂ ಶೇ.7ರಷ್ಟು ಮಹಿಳಾ ರೈತರು ಇದನ್ನು ಬಳಸುತ್ತಿದ್ದಾರೆ. ಇದು ರೈತರಿಗೆ ತುಂಬಾ ಉಪಯುಕ್ತವಾಗಿದೆ.” -ವಿನಯ್‌ ಶಿವಪ್ಪ , ಕೃಷಿ ಸೆಂಟ್ರಲ್‌ ಆ್ಯಪ್‌ ಸಂಸ್ಥಾಪಕ

ಆ್ಯಪ್‌ನ ಲಾಭಗಳೇನು?
– ಕೃಷಿ ಚಟುವಟಿಗೆ ನೆರವಾಗಲೆಂದೇ ಸಿದ್ಧಪಡಿಸಿದ ಆ್ಯಪ್‌
– ರೈತರಿಗೆ ಉಚಿತ ಹಾಗೂ ಸಂಪೂರ್ಣ ಮಾಹಿತಿ
– ಮಧ್ಯವರ್ತಿಗಳ ಹಸ್ತಕ್ಷೇಪ ಮುಕ್ತ
–  ಒಂದೇ ಸೂರಿನಡಿಯಲ್ಲಿ ಹಲವು ಮಾಹಿತಿಗಳು

 

– ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next