Advertisement
ಮಣಿಪಾಲದಿಂದ ಪರ್ಕಳ ರಸ್ತೆಯಲ್ಲಿ ಒಂದೂವರೆ ಕಿಮೀ ಸಾಗಿ, ಬಲಕ್ಕೆ ತಿರುಗಿದರೆ ಸಿಗುವ ಈಶ್ವರನಗರ ಬಡಾವಣೆಯಲ್ಲಿದೆ ಮಣಿಪಾಲ ಹಾಲಿನ ಡೈರಿ. ಅದನ್ನು ದಾಟಿ ಮುಂದಕ್ಕೆ ಹೋಗಿ, ಕೊನೆಯ ಅಡ್ಡರಸ್ತೆಗೆ ತಿರುಗಿ ಗುಡ್ಡವೇರಿದರೆ ಡಾ.ಕೆ. ಎನ್. ಪೈ ಅವರ ಮನೆ ತಟಕ್ಕನೆ ಕಣ್ಸೆಳೆಯುತ್ತದೆ. ಮನೆಯ ಸುತ್ತಲು ಇರುವ ಹಸಿರು ಮರಗಳಿಂದಾಗಿ. ಹದಿನೈದು ಸೆಂಟ್ಸ್ ಜಾಗದ ಆ ನಿವೇಶನದಲ್ಲಿರುವ ಕೈತೋಟ ನೋಡಲು ಸಂಜೆ 5 ಗಂಟೆಗೆ ಬನ್ನಿ ಎಂಬ ಡಾ. ಪೈ ಅವರ ಆಹ್ವಾನಕ್ಕೆ ಸ್ಪಂದಿಸಿ ನಾವು ಮಂಗಳೂರಿನಿಂದ ಹೋಗಿ¨ªೆವು.
Related Articles
Advertisement
ತರಕಾರಿ ಮತ್ತು ಹಣ್ಣಿನ ಗಿಡಮರಗಳನ್ನು ಬೆಳೆಸಲಿಕ್ಕೆ ನಿಮಗೆ ಮುಖ್ಯವಾಗಿ ಬೇಕಾಗುವುದು ನೀರು ಮತ್ತು ಗೊಬ್ಬರ. ನೀವು ಅಡುಗೆಮನೆಯ ಕಸ ಮತ್ತು ತರಗೆಲೆಗಳಿಂದ ಒಳ್ಳೆಯ ಗೊಬ್ಬರ ಅಂದರೆ ಕಾಂಪೋಸ್ಟ… ಮಾಡಿಕೊಳ್ಳಬಹುದು. ಆದರೆ ಅದಕ್ಕೆ ದನದ ಸೆಗಣಿ ಮತ್ತು ಮೂತ್ರ ಬೇಕೇ ಬೇಕು. ಹತ್ತು ಸೆಂಟ್ಸ್ ಜಾಗದಲ್ಲಿ ತರಕಾರಿ ಮತ್ತು ಹಣ್ಣಿನ ಗಿಡಮರಗಳಿಗೆ ಬೇಕಾದ ಕಂಪೋಸ್ಟ್ ಮಾಡಲಿಕ್ಕೆ ತಿಂಗಳಿಗೆ ಒಂದು ಕಿಲೋ ಸೆಗಣಿ ಇದ್ದರೆ ಸಾಕು. ಹಾಗೆಯೇ 2 3 ಲೀಟರ್ ಗೋಮೂತ್ರ ಬೇಕು ಇಡೀ ವರುಷಕ್ಕೆ ಅಷ್ಟೇ ಸಾಕು. ದನಸಾಕುವವರಿಂದ ಸೆಗಣಿ ಮತ್ತು ಗೋಮೂತ್ರ ಪಡೆಯುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ವಿವರಿಸುತ್ತಾ ಕಂಪೋಸ್ಟ್ ಕೋಣೆಗೆ ನಮ್ಮನ್ನು ಕರೆದೊಯ್ದು, ಅಲ್ಲಿದ್ದ ಕಂಪೋಸ್ಟನ್ನು ಕೈಯಲ್ಲಿ ತೆಗೆದು ತೋರಿಸಿದರು ಡಾ. ಪೈ. ನಾನು ಡಾಕ್ಟರ್ ವೃತ್ತಿ ಮಾಡುತ್ತಿ¨ªಾಗ ಇದನ್ನೆಲ್ಲ ಮುಟ್ಟುತ್ತಿರಲಿಲ್ಲ ;ಈಗ ಇದನ್ನು ಮುಟ್ಟದ ದಿನವೇ ಇಲ್ಲ ಎಂದು ಹೇಳಲು ಅವರು ಮರೆಯಲ್ಲಿಲ್ಲ.
ಜೀವಾಮೃತ ಹಾಕಿದರೆ ತರಕಾರಿ ಗಿಡಗಳು ಚೆನ್ನಾಗಿ ಬೆಳೆಯುತ್ತವೆ; ಅರ್ಧ ಲೀಟರ್ ಜೀವಾಮೃತಕ್ಕೆ ಹತ್ತು ಲೀಟರ್ ನೀರು ಬೆರೆಸಿ ಸಿಂಪಡಿಸಿದರೆ ಸಾಕು. ಅವುಗಳಿಗೆ ಯಾವುದೇ ರೋಗ ಬರುವುದಿಲ್ಲ ಎಂಬ ಮಾತಿಗೆ ಪೂರಕವಾಗಿ ಅವರು ಹೇಳಿದ್ದು: ಇಲ್ಲಿದೆ ನೋಡಿ ಪಡುವಲದ ಬಳ್ಳಿ. ಮುಂಚೆ ಒಂದು ಬಳ್ಳಿಯಿಂದ ಐದಾರು ಪಡುವಲಕಾಯಿ ಸಿಗ್ತಾ ಇತ್ತು. ಕಳೆದ ವರುಷ ಜೀವಾಮೃತ ಹಾಕಿದಾಗ ಒಂದೇ ಬಳ್ಳಿಯಿಂದ ಸಿಕ್ಕಿದ್ದು 125 ಪಡುವಲಕಾಯಿ..
ಕಂಪೋಸ್ಟಿಗೆ ಬೇವಿನಹಿಂಡಿ ಬೆರೆಸಿದರೆ ಗಿಡಗಳ ಬೆಳವಣಿಗೆಗೆ ಒಳ್ಳೆಯದು. ಬದನೆ ಮತ್ತು ಬೆಂಡೆ ಸಸಿಗಳನ್ನು ಮಣ್ಣಿನಲ್ಲಿ ಅಥವಾ ಮಣ್ಣು ತುಂಬಿಸಿದ ಗೋಣಿಚೀಲಗಳಲ್ಲಿ ಬೆಳೆಸಬಹುದು. ಗಿಡಮರಗಳ ಬುಡದಲ್ಲಿ ತರಗೆಲೆಗಳ ಹೊದಿಕೆ ಇರಲೇ ಬೇಕು (ಮಲಿcಂಗ್) ಅದು ಮಗುವಿಗೆ ತಾಯಿಯ ಸೆರಗು ಇದ್ದ ಹಾಗೆ; ಮಣ್ಣಿನಲ್ಲಿ ತೇವಾಂಶ ಉಳಿಸುತ್ತದೆ. ನೀರನ್ನು ಗಿಡಮರಗಳ ಬುಡಕ್ಕೆ ಸುರಿಯಬಾರದು. ಗಿಡಮರಗಳ ಎತ್ತರ ನೋಡಿಕೊಂಡು, ಬುಡದಿಂದ ಒಂದರಿಂದ ಮೂರಡಿ ದೂರದಲ್ಲಿ ನೀರು ಹಾಕಬೇಕು. ಆಗ ನೀರು ಹುಡುಕಿಕೊಂಡು ಬೇರುಗಳು ಬೆಳೆಯುತ್ತವೆ; ಇದರಿಂದಾಗಿ ಬೇರುಗಳ ಮತ್ತು ಗಿಡಮರಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಎಂದು ಪೂರಕ ಮಾಹಿತಿ ನೀಡಿದರು ಡಾ. ಪೈ.
ಅವರ ಮನೆಸೈಟ್ ಮಣಿಪಾಲದ ಗುಡ್ಡೆಯ ಜಂಬಿಟ್ಟಿಗೆಯ ಜಮೀನು. ಆ ಕಲ್ಲುನೆಲದಲ್ಲಿ ಗಿಡಮರಗಳನ್ನು ಬೆಳೆಸುವ ಕಾಯಕಕ್ಕೆ ಧಾರೆ ಎರೆಯಬೇಕು ಅಪಾರ ಸಮಯ ಮತ್ತು ಶ್ರದ್ಧೆ. ತಮ್ಮ ಇಳಿವಯಸ್ಸಿನಲ್ಲಿಯೂ ಪ್ರತಿ ದಿನ ಆರೇಳು ತಾಸು ಆ ಕಾಯಕದಲ್ಲಿ ತೊಡಗಿಸಿಕೊಂಡು ಮೈಮನಗಳಲ್ಲಿ ಉತ್ಸಾಹ ತುಂಬಿಕೊಳ್ಳುತ್ತಾರೆ ಡಾ. ಪೈ. ಅಂದು ಅಲ್ಲಿ ನೆರೆದಿದ್ದ ಅರವತ್ತು ಆಸಕ್ತರೊಂದಿಗೆ ಒಂದು ತಾಸಿನ ಅವಧಿ ತನ್ಮಯತೆಯಿಂದ ಉತ್ಸಾಹದಿಂದ ತಮ್ಮ ಕಾಯಕದ ಮಾಹಿತಿ ಹಂಚಿಕೊಂಡಿದ್ದರು ಡಾ. ಕೊಚ್ಚಿಕಾರ್ ನರೇಂದ್ರನಾಥ್ ಪೈ. ಗಿಡಮರಗಳನ್ನು ಬೆಳೆಸುವುದು ನನಗಂತೂ ಆತ್ಮಾನಂದದ ಕೆಲಸ ಎನ್ನುತ್ತಾ ಅವರು ಮಾತು ಮುಗಿಸಿದಾಗ, ಅಲ್ಲಿ ನೆರೆದಿದ್ದವರಿಗೆಲ್ಲ ಕಾಣಿಸಿತ್ತು ಅದರ ಝಲಕ… ಡಾ. ಪೈಯವರ ನಗುಮುಖದಲ್ಲಿ ಮತ್ತು ಅಲ್ಲಿದ್ದ ಗಿಡಮರಬಳ್ಳಿಗಳ ಎಲೆಎಲೆಯಲ್ಲಿ.
– ಅಡ್ಕೂರು ಕೃಷ್ಣರಾವ್